Tumkur News: ಮುಟ್ಟಿನ ಮೌಢ್ಯ ಜಾಗೃತಿ ಸಮಯದಲ್ಲೇ ಮೌಢ್ಯಾಚರಣೆ; ತುಮಕೂರಿನ ಗೊಲ್ಲರಹಟ್ಟಿಗಳಲ್ಲಿ ನಿಲ್ಲುತ್ತಿಲ್ಲ ಮೌಢ್ಯದ ಮೊಂಡುತನ
ತುಮಕೂರಿನ ಗೊಲ್ಲರಹಟ್ಟಿಯಲ್ಲಿ ನಡೆಯುವ ಮೌಢ್ಯಾಚರಣೆಗಳು ನಿಲ್ಲುತ್ತಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಗರ್ಭಿಣಿ ಹೆಂಗಸು ಹಾಗೂ ಮಗುವನ್ನು ಊರ ಹೊರಗಿನ ಗುಡಿಸಲ್ಲಿ ಇಟ್ಟು ಮೌಢ್ಯಾಚರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಅದು ಮುಟ್ಟಿನ ಮೌಢ್ಯ ಜಾಗೃತಿ ಸಮಯದಲ್ಲೇ ಈ ಘಟನೆ ನಡೆದಿದೆ. (ವರದಿ: ಈಶ್ವರ್ ಎಂ.)
ತುಮಕೂರು: ಗೊಲ್ಲರ ಹಟ್ಟಿಗಳಲ್ಲಿನ ಮುಟ್ಟಿನ ಮೌಢ್ಯದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಸಂದರ್ಭದಲ್ಲೇ ಬಾಣಂತಿ ಹಾಗೂ ಮಗುವನ್ನು ಊರಿಂದ ಹೊರಗಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದ ಘಟನೆ ಚಿಕ್ಕ ನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಹಿಳಾ ಮತ್ತು ಜನಪರ ಕಾರ್ಯಕರ್ತೆ ಡಾ.ಜಿ ಪ್ರೇಮಾ, ಪತ್ರಕರ್ತ ಉಜ್ಜಜ್ಜಿ ರಾಜಣ್ಣ, ಚಿಂತಕ ರಘುಪತಿ, ಸಮಾನತೆಯ ಹೋರಾಟಗಾರ ಕೂನಿಕೆರೆ ರಾಮಣ್ಣ, ಅಂಗನವಾಡಿ ಕಾರ್ಯಕರ್ತೆ ಸುನಂದಮ್ಮ, ಸಂಪತ್ ಕುಮಾರ್, ಅಂಕಸಂದ್ರ ರಾಜಪ್ಪ, ಈರೇಗೌಡ, ಗ್ರಾಮ ಪಂಚಾಯತಿ ಹಾಲಿ ಸದಸ್ಯ ಸಿದ್ಧಪ್ಪ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿಕ್ಕಣ್ಣ ಮತ್ತಿತರ ಗ್ರಾಮಸ್ಥರು ಸೇರಿ ಕಟ್ಟಿಕೊಂಡಿರುವ ಕಾಡುಗೊಲ್ಲ ಸಮಾನ ಮನಸ್ಕ ವೇದಿಕೆಯ ಮೂಲಕ ಹಟ್ಟಿ ಅರಿವು ಜಾಗೃತಿ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ತಕ್ಷಣ ಅಲ್ಲಿಂದಲೇ ಹುಳಿಯಾರು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಬರುವಂತೆ ಕೇಳಿಕೊಂಡರು, ಪ್ರಗತಿ ಪರರ ಕರೆಗೆ ಸ್ಪಂದಿಸಿದ ಸಬ್ ಇನ್ಸ್‌ಪೆಕ್ಟರ್ ಬಸವರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಊರಾಚೆಗಿನ ಹೊಲದ ಪಾಕೆಯಲ್ಲಿ ಬಿಟ್ಟಿದ್ದ ಒಂಟಿ ಬಾಣಂತಿ ಮತ್ತು ಆಕೆಯ ಮಗುವನ್ನು ಮನೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ. ನಂತರ ಊರಿನ ಎಲ್ಲರನ್ನೂ ಸೇರಿಸಿ ಜಾಗೃತಿ ಮತ್ತು ಅರಿವು ನಡಿಗೆ ನಡೆಸಿದ್ದಾರೆ, ಇಂಥ ಯಾವುದೇ ಬಗೆಯ ಮಹಿಳಾ ವಿರೋಧಿ ಅನಿಷ್ಟ ಪದ್ಧತಿ ಆಚರಿಸದಂತೆ ಕಾನೂನಾತ್ಮಕವಾಗಿ ಎಚ್ಚರಿಸಿದರು.
ಸಾಮೂಹಿಕ ಪ್ರತಿಜ್ಞೆ
ಹಟ್ಟಿಯ ಜನ ಇನ್ನು ಮುಂದೆ ನಮ್ಮ ಊರಲ್ಲಿ ಇಂಥ ಘಟನೆ ಮರುಕಳಿಸದಂತೆ ನಾವು ಮಹಿಳಾ ಸಮಾನತೆ ಮತ್ತು ಮಹಿಳೆಯ ಗೌರವ ನೀಡಿಕೆಗೆ ಬದ್ಧರಾಗಿರುತ್ತೇವೆ. ಅಂಥದ್ದೇನಾದರೂ ಅನಿಷ್ಟ ಆಚರಣೆ ಕಂಡುಬಂದಲ್ಲಿ ಸ್ವತಃ ನಾವೇ ಪೊಲೀಸರ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುತ್ತೇವೆ ಎಂದು ವಾಗ್ದಾನ ನೀಡಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಅಲ್ಲಿದ್ದ ಪ್ರಗತಿಪರ ಮುಖಂಡರ ಜೊತೆಗೆ ಸಾಮೂಹಿಕವಾಗಿ ಪ್ರಮಾಣ ಮಾಡಿಸಲಾಯಿತು.
ದಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲಪ್ಪನ ಹಟ್ಟಿಯಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಕಾಲೇಜು ಮೆಟ್ಟಿಲೇರಿರುವ ಒಂದೇ ಒಂದು ಹೆಣ್ಣು ಮಗಳೂ ಸಿಗಲಾರಳು, ಅದೇ ರೀತಿ ಒಬ್ಬನೇ ಒಬ್ಬ ಗಂಡು ಹುಡುಗನೂ ಸಿಗಲಾರನು, ಯಾಕೆಂದರೆ ಪ್ರೌಢಶಾಲೆ ಮುಗಿಸಿದ ಹೆಣ್ಣುಮಕ್ಕಳನ್ನು ವಯಸ್ಸಿಗಿಂತ ಮುಂಚೆಯೇ ಇಲ್ಲಿ ಮದುವೆ ಮಾಡಲಾಗುತ್ತಿದೆ. ಗೊಲ್ಲರ ಹಟ್ಟಿಗಳಲ್ಲಿ ಬಾಲ್ಯ ವಿವಾಹಗಳು ಅವ್ಯಾಹತವಾಗಿ ನಡೆಯುತ್ತಿವೆ. ಹೈಸ್ಕೂಲ್ ಡ್ರಾಪ್ ಔಟ್ಸ್ ಎಂಬುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದು ಡಾ. ಜಿ. ಪ್ರೇಮಾ ಬೇಸರ ವ್ಯಕ್ತಪಡಿಸುತ್ತಾರೆ.
ತಾಲ್ಲೂಕು ಆಡಳಿತದ ಕಡೆಯಿಂದ ಶಿಶು ಮತ್ತು ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆ ನಿರಂತರವಾಗಿ ಅರಿವು ಕಾರ್ಯಕ್ರಮ ನಡೆಸುತ್ತಿದೆ. ಆದರೂ ಬಲ್ಲಪ್ಪನ ಹಟ್ಟಿಯಲ್ಲಿ ನಡೆದಿರುವ ಘಟನೆ ದುರಾದೃಷ್ಟಕರ, ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಹೆರಿಗೆ- ಮುಟ್ಟು ಅನಿಷ್ಟ ಪದ್ಧತಿಯ ವಿರುದ್ಧ ಅರಿವು ಕಾರ್ಯಕ್ರಮ ತೀವ್ರಗೊಳಿಸಲಾಗುವುದು, ಕಾನೂನಿನಲ್ಲಿ ಅವಕಾಶವಿರುವ ಕಠಿಣ ಕ್ರಮ ಜರುಗಿಸಲಾಗುವುದು, ಮುಖ್ಯವಾಗಿ ಸಮಾಜದ ಎಲ್ಲರ ಸಹಕಾರದಿಂದಲೇ ಇಂಥ ಅನಿಷ್ಟ ಮೌಢ್ಯಾಚರಣೆ ಕೊನೆಗೊಳ್ಳಬೇಕು ಎಂದು ಚಿಕ್ಕನಾಯಕನ ಹಳ್ಳಿ ತಹಸೀಲ್ದಾರ್ ಪಿ.ವಿ.ವಿನಾಯಕ ಸಾಗರ್ ತಿಳಿಸಿದ್ದಾರೆ.
ಮೌಢ್ಯಾಚರಣೆಯ ಅನಿಷ್ಟ ಸಂಪ್ರದಾಯ
ಪ್ರೌಢ ಶಾಲೆಗಳಲ್ಲಿರುವ ಮಕ್ಕಳ ಸುರಕ್ಷಾ ಸಮಿತಿಗಳು ಸಂಪೂರ್ಣ ನಿಷ್ಕ್ರೀಯಗೊಂಡಿವೆ, ಕನಿಷ್ಠ ಸುರಕ್ಷತೆಯ ಅರಿವು ಸಭೆಗಳೇ ಆಗಲಿ, ಮಕ್ಕಳ ಕುಂದು- ಕೊರತೆ ಸಭೆಗಳೇ ಆಗಲಿ ಜರುಗುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ಗಮನವೇ ಹರಿಸಿದಂತೆ ಕಾಣುತ್ತಿಲ್ಲ. ಎತ್ತಪ್ಪ ಮತ್ತು ಚಿತ್ತ್ರಯ್ಯ (ಚಿತ್ರ ಲಿಂಗೇಶ್ವರ) ದೇವರ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಆಚರಿಸಲಾಗುವ ಮುಟ್ಟು- ಹೆರಿಗೆ ಅನಿಷ್ಟ ಪದ್ಧತಿಯಿದು. ಇದು ಮೌಢ್ಯಾಚರಣೆಯ ಅನಿಷ್ಟ ಸಂಪ್ರದಾಯ, ಇದರಿಂದ ಮಹಿಳೆಯನ್ನು ಆಕೆ ಮಹಿಳೆ ಎಂಬ ಕಾರಣಕ್ಕೇ ಅಪಮಾನಿಸಲಾಗುತ್ತಿದೆ. ಸ್ಪಷ್ಟವಾದ ಮಾನವ ಹಕ್ಕುಗಳ ಉಲ್ಲಂಘನೆ ಇಲ್ಲಿ ನಡೆಯುತ್ತಿದೆ. ತಹಸೀಲ್ದಾರ್, ತಾಪಂ ಎಇಒ, ಸಿಡಿಪಿಒ, ಪೊಲೀಸ್ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ತಿಳಿಸಿದ್ದಾರೆ.
ವಿಭಾಗ