ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮಗು ಸೇರಿ ಮೂವರ ಸಾವು, ಆಸ್ಪತ್ರಗೆ ಪರಮೇಶ್ವರ್‌ ಭೇಟಿ

Tumkur News: ತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮಗು ಸೇರಿ ಮೂವರ ಸಾವು, ಆಸ್ಪತ್ರಗೆ ಪರಮೇಶ್ವರ್‌ ಭೇಟಿ

ಕಲುಷಿತ ನೀರು ಸೇವನೆಯಿಂದ ತುಮಕೂರು ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಉಸ್ತುವಾರಿ ಸಚಿವ ಡಾ.ಪರಮೇಶ್ವರ್‌ ಭೇಟಿ ಮಾಡಿದ್ದಾರೆ.

ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಡಾ.ಪರಮೇಶ್ವರ್‌.
ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಡಾ.ಪರಮೇಶ್ವರ್‌.

ತುಮಕೂರು: ಮುಂಗಾರು ಮಳೆ ಆರಂಭದ ನಡುವೆಯೂ ಕೆಲವು ಭಾಗಗಳಲ್ಲಿ ಇನ್ನೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಮೈಸೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಯುವಕ ಮೃತಪಟ್ಟ ಘಟನೆ ಹಸಿರಾಗಿರುವಾಗಲೇ ತುಮಕೂರು ಜಿಲ್ಲೆಯಲ್ಲೂ ಇಂತಹದೇ ಘಟನೆಗಳು ವರದಿಯಾಗಿವೆ. ಅದರಲ್ಲೂ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರಲ್ಲಿ ಮೂವರು ಮೃತಪಟ್ಟಿದ್ದು ಆತಂಕ ಹೆಚ್ಚಿದೆ. ಕಲುಷಿತ ನೀರು ಸೇವಿಸಿ ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥರಾದ ಮಗು ಸೇರಿದಂತೆ ಮೂವರು ಮೂರು ದಿನದಿಂದ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೇ ಜೀವ ಕಳೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿನ್ನೇನಹಳ್ಳಿ ಗ್ರಾಮದಲ್ಲಿ ಜೂನ್‌ 7ರಿಂದ ಲಕ್ಷ್ಮಿದೇವಿ ಮತ್ತು ಕೆಂಪಮ್ಮ ಜಾತ್ರೆ ಇತ್ತು. ಈ ವೇಳೆ ನಾನಾ ಭಾಗಗಳಿಂದ ಜನರೂ ಆಗಮಿಸಿದ್ದರು. ಗ್ರಾಮದಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಕೆಲವರು ಕಲುಷಿತ ನೀರನ್ನು ಸೇವಿಸಿದ್ದರು. ಈ ವೇಳೆ ಜೂನ್‌ 10 ರಂದು ರಾತ್ರಿ 54 ಮಂದಿಗೆ ದಿಢೀರನೇ ವಾಂತಿ, ಬೇಧಿ ಶುರುವಾಗಿ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಕೆಲವರು ತುಮಕೂರು ಜಿಲ್ಲಾಸ್ಪತ್ರೆ, ಇನ್ನು ಕೆಲವರು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡದಿದ್ದರು. ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವರು ಬಿಡುಗಡೆಯಾಗಿದ್ದರು. ಇದರಲ್ಲಿ ಈಗ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೀನಾಕ್ಷಿ (3) ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76) ಮತ್ತು ಪೆದ್ದಣ್ಣ (74) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಂತಿ, ಬೇಧಿಯಿಂದ ಬುಧವಾರ ಬೆಳಗ್ಗೆ ಮಗು ಮೀನಾಕ್ಷಿ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಆಕೆಯನ್ನು ಪೋಷಕರುಮನೆಗೆ ಕರೆದುಕೊಂಡು ಬಂದಿದ್ದರು. ಮನೆಗೆ ಬಂದ ನಂತರ ಮತ್ತೇ ತೀವ್ರ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಮಾರ್ಗಮಧ್ಯೆದಲ್ಲೇ ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಕರೆ ತಂದರೂ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದರು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಚಿನ್ನೇನಹಳ್ಳಿ ಗ್ರಾಮದ ಓವರ್‌ ಹೆಡ್‌ ಟ್ಯಾಂಕ್‌ ಮತ್ತು ಶುದ್ಧ ನೀರಿನ ಘಟಕದಿಂದ ಪೂರೈಸುವ ನೀರು ಸೇವಿಸಿ ವಾಂತಿ, ಬೇಧಿಯಿಂದ ಗ್ರಾಮದ 98 ಜನ ಅಸ್ವಸ್ಥರಾಗಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ 16, ಮಧುಗಿರಿಯಲ್ಲಿ 18, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿದ್ದ 6 ತಿಂಗಳ ಹಸುಗೂರು ಸೇರಿದಂತೆ 15 ವರ್ಷದೊಳಗಿನ ಏಳು ಜನ, 45 ರಿಂದ 70 ವರ್ಷದ ಒಳಗಿನ ಒಂಬತ್ತು ಜನ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಆ ಪೈಕಿ 59 ಜನ ಗುಣಮುಖರಾಗಿದ್ದಾರೆ.ಕೆಲವರಿಗೆ ಚಿಕಿತ್ಸೆ ಮುಂದುವರಿದಿದೆ. ಈಗ ಗ್ರಾಮಕ್ಕೂ ಶುದ್ದ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ಸುಧಾರಿಸಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಪರಮೇಶ್ವರ್‌ ಭೇಟಿ

ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಿದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗುರುವಾರ ಬೆಳಿಗ್ಗೆಯೇ ದೌಡಾಯಿಸಿದ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯರು, ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೂ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಮೂವರು ಮೃತಪಟ್ಟಿದ್ದು ಬೇಸರ ಸಂಗತಿ. ಈಗಾಗಲೇ ಪರಿಸ್ಥಿತಿ ಸುಧಾರಿಸಿದ್ದು, ಬೇರೆ ಕಡೆಯೂ ಇಂತಹ ಸಮಸ್ಯೆ ಆಗದಂತೆ ಗಮನ ನೀಡುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್‌ ಮಾಹಿತಿ ನೀಡಿದರು.

ವಿಭಾಗ