ಕನ್ನಡ ಸುದ್ದಿ  /  ಕರ್ನಾಟಕ  /  ́Tumkur News:ಮೌಢ್ಯಾಚರಣೆ ತಡೆಗೆ ತುಮಕೂರಿನ ಬಿಸಾಡಿಹಟ್ಟಿ ದತ್ತು ತೆಗೆದುಕೊಳ್ಳಲು ಮುಂದಾದ ಮಹಿಳಾ ಆಯೋಗ

́Tumkur News:ಮೌಢ್ಯಾಚರಣೆ ತಡೆಗೆ ತುಮಕೂರಿನ ಬಿಸಾಡಿಹಟ್ಟಿ ದತ್ತು ತೆಗೆದುಕೊಳ್ಳಲು ಮುಂದಾದ ಮಹಿಳಾ ಆಯೋಗ

Woman Commission ಕರ್ನಾಟಕ ಮಹಿಳಾ ಆಯೋಗವು ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳ ಕುರಿತು ಮಾಹಿತಿ ಕಲೆ ಹಾಕಿತು.ವರದಿ: ಈಶ್ವರ್‌ ತುಮಕೂರು

ತುಮಕೂರು ಜಿಲ್ಲೆ ಬಿಸಾಡಿಹಟ್ಟಿ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ್ದರು.
ತುಮಕೂರು ಜಿಲ್ಲೆ ಬಿಸಾಡಿಹಟ್ಟಿ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ್ದರು.

ತುಮಕೂರು: ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ, ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯ ರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ. ಇದೇ ನಿಟ್ಟಿನಲ್ಲಿ ಬಿಸಾಡಿಹಟ್ಟಿಯ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಿ ಅವರನ್ನು ಮೌಢ್ಯಾಚರಣೆಗಳಿಂದ ಹೊರ ತರುವ ನಿಟ್ಟಿನಲ್ಲಿ ಬಿಸಾಡಿಹಟ್ಟಿಯನ್ನು ದತ್ತು ಪಡೆಯುವುದಾಗಿ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಹಿಳೆಯರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಅತಿ ಮುಖ್ಯ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯದ ವ್ಯವಸ್ಥೆಯಿದ್ದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಣಂತಿ ಮತ್ತು ಮಗುವಿಗಾಗಿ ರಾಜ್ಯ ಸರ್ಕಾರ ಕೃಷ್ಣ ಕುಟೀರ ನಿರ್ಮಿಸಿದ್ದು, ಈ ಕುಟೀರದಲ್ಲಿ ಬಾಣಂತಿಯರಿಗೆ ಅಗತ್ಯವಾದ ಬಿಸಿ ನೀರು, ಶುದ್ಧ ಕುಡಿಯುವ ನೀರು ಮತ್ತು ಇತರೆ ಮೂಲ ಸೌಕರ್ಯ ಹೆಚ್ಚು ಹೆಚ್ಚು ದೊರೆಯಬೇಕು, ಈ ವಿಷಯವನ್ನು ತಾವು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

(*ಮನೆಯಲ್ಲಿ ದೌರ್ಜನ್ಯ ನಡೆದ ಸಂದರ್ಭ ಹೆಣ್ಣು ಮಕ್ಕಳು 112 ಸಹಾಯವಾಣಿಗೆ ಕರೆ ಮಾಡಬೇಕು, ಆಗ ತಕ್ಷಣ ಪೊಲೀಸರ ಪ್ರವೇಶವಾಗುವುದು, ಠಾಣೆಯಲ್ಲಿ ಹೆಣ್ಣು ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳದಿದ್ದಲ್ಲಿ ಅಥವಾ ಸ್ಪಂದಿಸದಿದ್ದಲ್ಲಿ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು, ಮಹಿಳೆಯರು ಯಾವುದೇ ಸಂದರ್ಭದಲ್ಲೂ ಸಮಸ್ಯೆ ಉಂಟಾದಲ್ಲಿ ತಮಗೆ ಮೆಸೇಜ್ ಮಾಡುವ ಮೂಲಕ ಅಥವಾ ವಾಟ್ಸಾಪ್ ಮೂಲಕ ಧೈರ್ಯವಾಗಿ ಸಂಪರ್ಕಿಸಬಹುದಾಗಿರುತ್ತದೆ ಎಂದು ತಮ್ಮ ದೂರವಾಣಿ ಸಂಖ್ಯೆ ಹಂಚಿಕೊಂಡರು.

ಗ್ರಾಮೀಣ ಪ್ರದೇಶದ ಬಹುತೇಕ ಬಡ ಹೆಣ್ಣು ಮಕ್ಕಳು ವಾಸಿಸುವ ಮನೆಗಳು ಸೋರುತ್ತವೆ, ಯಾವಾಗ ಬಿದ್ದು ಹೋಗುತ್ತವೆ ತಿಳಿಯುವುದಿಲ್ಲ, ಆದುದರಿಂದ ಮೊದಲಿಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ ವಸತಿ ವ್ಯವಸ್ಥೆಯಾಗಬೇಕು, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಕರೆಂಟು ಕಂಬಗಳು ಮುಂತಾದ ಮೂಲ ಸೌಕರ್ಯ ಅಧಿಕಾರಿಗಳು ಕಲ್ಪಿಸಿಕೊಡಬೇಕು, 10ನೇ ತರಗತಿಗೆ ಚಿಕ್ಕ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪದ್ಧತಿ ಕೈಬಿಡಬೇಕು, ಜನರು ಬದಲಾಗಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಹಟ್ಟಿಯ ಕೃಷ್ಣ ಕುಟೀರದಲ್ಲಿ ಇದ್ದಂತಹ ಬಾಣಂತಿ ಮಕ್ಕಳನ್ನು ಭೇಟಿಯಾದ ಅವರು ಅಲ್ಲಿ ಒದಗಿಸಲಾಗುತ್ತಿರುವ ಮೂಲ ಸೌಕರ್ಯ ಮುಂತಾದ ವ್ಯವಸ್ಥೆ ಪರಿಶೀಲಿಸಿದರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಇಓ ಅಪೂರ್ವ, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(ವರದಿ: ಈಶ್ವರ್‌ ತುಮಕೂರು)

ವಿಭಾಗ