ಕೃಷ್ಣ ಕುಟೀರದಲ್ಲಿದ್ದ ಬಾಣಂತಿಗೆ ಕೊನೆಗೂ ಸಿಕ್ಕ ಮುಕ್ತಿ, ಮನೆಗೆ ವಾಪಸ್; ಬಾಣಂತಿಯರನ್ನ ಹೊರಗಡೆ ಇಡುವ ಕೆಟ್ಟ ಆಚರಣೆ ಬೇಡ: ನಾಗಲಕ್ಷ್ಮಿ
ಕೊರಟಗೆರೆ ತಾಲೂಕು ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದ ಕೃಷ್ಣ ಕುಟೀರದಲ್ಲಿದ್ದ ಬಾಣಂತಿಯರು ಮತ್ತು ಮಕ್ಕಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮನೆಗೆ ಸೇರಿಸಿದ್ದಾರೆ.

ತುಮಕೂರು: ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ಮೌಢ್ಯತೆಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗುತ್ತಿಲ್ಲ. ಇಂದಿಗೂ ತುಮಕೂರು ಜಿಲ್ಲೆಯಲ್ಲಿ ಬಾಣಂತಿ ಮತ್ತು ಮಗುವನ್ನು ಊರಿನ ಹೊರಗಡೆ ಇಡುವ ಪದ್ಧತಿ ಬಗ್ಗೆ ವರದಿಗಳಾಗುತ್ತಲೇ ಇವೆ. ಈ ಸಾಮಾಜಿಕ ಮೌಢ್ಯತೆ ಮತ್ತು ಗೊಡ್ಡು ಸಂಪ್ರದಾಯಗಳು ಇಡೀ ಕರ್ನಾಟಕ ತಲೆತಗ್ಗಿಸುವಂತ ಬೆಳವಣಿಗೆ. ಸದ್ಯ ಅಧಿಕಾರಿಗಳಿಂದ ಗ್ರಾಮಗಳ ಹಿರಿಯರ ಮನವೊಲಿಕೆ ಹಾಗೂ ಜಾಗೃತಿಯಿಂದ ಊರಿನ ಹೊರಗಡೆ ಇರುತ್ತಿದ್ದ ಬಾಣಂತಿ ಮತ್ತು ಪುಟ್ಟ ಕಂದಮ್ಮಗಳಿಗೆ ಮುಕ್ತಿ ಸಿಗುತ್ತಿದೆ.
ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮನೆಗೆ ಸೇರಿಸಿದ್ದಾರೆ. ಈ ವೇಳೆ ಮಾತನಾಡಿ ಅವರು, ಬಾಣಂತಿಯರನ್ನು ಮನೆಯಿಂದ ಹೊರಗಡೆ ಇಡುವ ಕೆಟ್ಟ ಆಚರಣೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಿಕೊಂಡು ಹೋಗದೆ ತಮ್ಮ ಮನೆಗಳಲ್ಲೇ ಬಾಣಂತಿ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯ ರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ ಎಂದು ತಿಳಿಸಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣ ಕುಟೀರದಲ್ಲಿದ್ಧ ಬಾಣಂತಿ ಮತ್ತು ಮಕ್ಕಳ ಆರೋಗ್ಯ ವಿಚಾರಿಸಿ ಮರಳಿ ಅವರ ಮನೆಗೆ ಸೇರಿಸಲು ಅವರ ಕುಟುಂಬ ಮತ್ತು ಗ್ರಾಮಸ್ಥರ ಮನ ವೊಲಿಸಲಾಗಿತ್ತು, ಆದರೆ ಅವರ ಮನೆಗಳು ಮಳೆ ಬಂದರೆ ಸೋರುವ ಸ್ಥಿತಿಯಲ್ಲಿ ಇದ್ದುದರಿಂದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ.
ತಾಲ್ಲೂಕು ಪಂಚಾಯ್ತಿ, ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯ್ತಿಯವರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದು, ಬಾಣಂತಿಯರ ಮನೆಗೆ ಬೇಕಾದ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಕೃಷ್ಣ ಕುಟೀರದಲ್ಲಿದ್ದ ಬಾಣಂತಿಯರಾದ ಶಿವಮ್ಮ, ರಕ್ಷಿತಾ, ಶಾರದಾ ಅವರನ್ನು ಅವರ ಮನೆಗಳಿಗೆ ಸೇರಿಸಲಾಯಿತು ಎಂದು ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರನ್ನು ಶಾಲೆಗೆ ಕಳುಹಿಸುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ. ಶಾಲಾ ಮಕ್ಕಳು ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಗಿದೆ. ಇನ್ನು ಮುಂದೆ ಯಾರೂ ಸಹ ತಮ್ಮ ಮಕ್ಕಳು, ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಬಿಡದಂತೆ ಮನವಿ ಮಾಡಿಕೊಂಡು ಅದಕ್ಕೆ ಬೀಗ ಹಾಕಿ, ಕೃಷ್ಣ ಕುಟೀರವನ್ನು ಗ್ರಂಥಾಲಯ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿನಾರಾಯಣ ಅವರಿಗೆ ಕೃಷ್ಣ ಕುಟೀರದ ಬೀಗದ ಕೈ ಅನ್ನು ಹಸ್ತಾಂತರಿಸಲಾಗಿದೆ.
ಋತುಮತಿಯಾದ ಹೆಣ್ಣು ಮಕ್ಕಳನ್ನು ಶಾಲಾ ಆವರಣ ಮತ್ತು ಹೊಲಗಳಲ್ಲಿ ಬಿಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಹಿಳಾ ಆಯೋಗದ ಅಧ್ಯಕ್ಷಸು, ಬೇಸರ ವ್ಯಕ್ತಪಡಿಸಿ, ಪ್ರತಿ ನಿತ್ಯ ಸಂಜೆ ವೇಳೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ಹಟ್ಟಿಯಲ್ಲಿ ಬೀಟ್ ಬಂದು ಪರಿಶೀಲಿಸಬೇಕು, ಒಂದು ವೇಳೆ ಯಾರಾದರೂ ಹೆಣ್ಣು ಮಕ್ಕಳನ್ನು ಹೊರಗಡೆ ಬಿಟ್ಟಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚೇತನ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಅಪೂರ್ವ, ತೋವಿನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ