Tumkur News: 6 ದಶಕದ ನಂತರವೂ ಕನ್ನಡ ನಾಮಫಲಕಗಳಿಗೆ ಹೋರಾಟ ಬೇಸರದಾಯಕ, ಕನ್ನಡ ಅನ್ನದ ಭಾಷೆಯೂ ಆಗಲಿ: ಬರಗೂರು ಆಶಯ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: 6 ದಶಕದ ನಂತರವೂ ಕನ್ನಡ ನಾಮಫಲಕಗಳಿಗೆ ಹೋರಾಟ ಬೇಸರದಾಯಕ, ಕನ್ನಡ ಅನ್ನದ ಭಾಷೆಯೂ ಆಗಲಿ: ಬರಗೂರು ಆಶಯ

Tumkur News: 6 ದಶಕದ ನಂತರವೂ ಕನ್ನಡ ನಾಮಫಲಕಗಳಿಗೆ ಹೋರಾಟ ಬೇಸರದಾಯಕ, ಕನ್ನಡ ಅನ್ನದ ಭಾಷೆಯೂ ಆಗಲಿ: ಬರಗೂರು ಆಶಯ

Tumkur Sahitya Sammelana ತುಮಕೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನದಲ್ಲಿ ಸಡಗರ, ಸಂಭ್ರಮ ಕಂಡು ಬಂದಿತು. ಚಿಂತಕರ ಭಾಷಣಗಳೂ ಗಮನ ಸೆಳೆದವು.

ತುಮಕೂರಿನಲ್ಲಿ ಸಾಹಿತ್ಯ ಸಮ್ಮೇಳನ ಸಡಗರದಿಂದ ನಡೆಯಿತು.
ತುಮಕೂರಿನಲ್ಲಿ ಸಾಹಿತ್ಯ ಸಮ್ಮೇಳನ ಸಡಗರದಿಂದ ನಡೆಯಿತು.

ತುಮಕೂರು: ಇಂದು ನಾವು ಕನ್ನಡ ನಾಮಫಲಕಕ್ಕಾಗಿ ಪ್ರತಿಭಟನೆಗೆ ಇಳಿಯುವಂತಹ ಸ್ಥಿತಿ ಬಂದಿದೆ. ಕನ್ನಡವೆಂಬುದು ಕೇವಲ ನಾಮಫಲಕಗಳಲ್ಲಿದ್ದರೆ ಸಾಲದು. ಅದು ಬದುಕಿಗೆ ಬರಬೇಕು. ಆಗ ಮಾತ್ರ ಜನ ತಮ್ಮ ತಾಯಿ ಭಾಷೆ ಒಪ್ಪಿಕೊಂಡು ಅಪ್ಪಿಕೊಳ್ಳಲು ಸಾಧ್ಯ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.

ತುಮಕೂರಿನ ಗಾಜಿನಮನೆಯ ಹೆಚ್.ಎಂ.ಗಂಗಾಧರಯ್ಯ ವೇದಿಕೆಯಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, 1963ರಲ್ಲಿಯೇ ಅಂದಿನ ಸರಕಾರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ. ಆದರೆ ಇದುವರೆಗೂ ನಮ್ಮನ್ನು ಆಳಿದ ಸರಕಾರಗಳು ನಿರ್ಲಕ್ಷ ಮಾಡಿಕೊಂಡು ಬಂದಿವೆ. ಇದರಿಂದಲೇ ಈಗಲೂ ಹೋರಾಡಬೇಕಾದ ಸ್ಥಿತಿಯಿದೆ. ಈ ವಿಚಾರದಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹ. ಹಾಗೆಯೇ ಕನ್ನಡ ಭಾಷೆಯನ್ನು ಅನ್ನಭಾಷೆಯಾಗಿಸಿದರೆ ಮಾತ್ರ ಉಳಿಗಾಲ ಎಂಬುದನ್ನು ನಾವ್ಯಾರು ಮೆರೆಯುವಂತಿಲ್ಲ ಎಂದರು.

ಸಾಹಿತಿ ಸತ್ಯ ಹೇಳಲಿ

ಸಾಹಿತಿಯಾದವ ಸತ್ಯವನ್ನು ಜನರಿಗೆ ಹೇಳುವ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಬೇಕಿದೆ, ಯಾವ ಸರಕಾರವಿದ್ದರೂ ದಿಟ್ಟವಾಗಿ ಸತ್ಯ ಹೇಳಿ ಮರ್ಯಾದಸ್ತರಾಗಬೇಕು. ನಾವೆಲ್ಲರೂ ಈ ನಿಟ್ಟಿನಲ್ಲಿ ನಡೆಯೋಣ. ಇಕ್ಕಟ್ಟು, ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವರು ತಮ್ಮ ಸಾಹಿತ್ಯದ ಮೂಲಕ ಮಾತನಾಡಿದರೆ ಕೆಲವರು ಭಾಷಣದ ಮೂಲಕ ಮಾತನಾಡುತ್ತಿದ್ದಾರೆ, ಆದರೆ ಕೆಲವೊಮ್ಮೆ ಮೌನವೂ ಪ್ರತಿಭಟನೆಯ ಸಂಕೇತವಾಗಿರುತ್ತದೆ ಎಂದು ನುಡಿದರು.

ಕನ್ನಡ ನಾಡಿನ ಸಾಹಿತಿಗಳು ಸ್ವಾತಂತ್ರ ಪೂರ್ವದಲ್ಲಿಯೂ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಹಿತ್ಯದ ಸ್ವಾಯತ್ತತೆ, ಸಾಹಿತ್ಯದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾ ಸತ್ತಾತ್ಮಕತೆ ಉಳಿಸಿಕೊಂಡು ಬಂದಿದೆ., ಕೆಲ ಲೇಖಕರು ಸರಕಾರವನ್ನು ನಾವೇ ತಂದಿದ್ದು ಎಂಬಂತೆ ಮಾತನಾಡುತಿದ್ದಾರೆ, ಇದು ಸಲ್ಲದು ಎಂದು ಎಚ್ಚರಿಸಿದರು.

ಪ್ರಸ್ತುತ ಬೌದ್ಧಿಕ ವಲಯ ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ಆತಂಕಕಾರಿ ವಿಷಯವಾಗಿದೆ. ಭಿನ್ನಾಭಿಪ್ರಾಯ ಗಳ ನಡುವೆ ಸಂವಾದ ನಡೆದರೆ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬಹುದು, ಪ್ರಗತಿಗಾಮಿಗಳು ಮತ್ತು ಪ್ರತಿಗಾಮಿಗಳ ನಡುವೆ ವಿಚಾರ ವಿನಿಮಯ ಆಗತ್ಯವಿದೆ ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಕನ್ನಡಕ್ಕಾಗಿ ಆಸ್ತಿ ಪಾಸ್ತಿ ಹಾನಿ ಬೇಡ

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕನ್ನಡ ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಕೆಲವೇ ಸಂಘಟನೆ ಗಳಿಗೆ ಗುತ್ತಿಗೆ ನೀಡಿಲ್ಲ, ಕನ್ನಡದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆದಲ್ಲ, ಗುಂಡಾಗಿರಿ ಮಾಡುವುದು, ಸಾರ್ವಜನಿಕರ ಆಸ್ತಿ, ಪಾಸ್ತಿಗೆ ನಷ್ಟ ಉಂಟು ಮಾಡುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ವಿದ್ಯಾರ್ಥಿಯಾಗಿದ್ದಾಗ ಸಿದ್ದಗಂಗಾ ಮಠದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಕನಾಗಿ ಭಾಗಿಯಾಗಿದ್ದು ನೆನಪಿಗೆ ಬಂತು. 108 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿ ಕನ್ನಡ ಭಾಷೆಗೆ ನೀಡಿದ ಗೌರವ ನಾವ್ಯಾರು ಮರೆಯು ವಂತಿಲ್ಲ. ವಿಷಾದ ಸಂಗತಿ ಎಂದರೆ ದಕ್ಷಿಣ ಭಾರತದ ನಮ್ಮ ಅಕ್ಕಪಕ್ಕ ರಾಜ್ಯಗಳಲ್ಲಿ ಎಂದಿಗೂ ಆಯಾಯ ರಾಜ್ಯದ ಭಾಷೆಯ ಉಳಿವಿಗಾಗಿ ಹೋರಾಟ ನಡೆದಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಭಾಷೆ ಉಳಿಸಲು ಹೋರಾಟ ನಡೆಸಬೇಕಿರುವುದು ದುರ್ದೈದ ಸಂಗತಿ. ಇದು ಕನ್ನಡಕ್ಕೂ ಒಳ್ಳೆಯದಲ್ಲ, ಕನ್ನಡಿಗರಿಗೂ ಶ್ರೇಯಸ್ಸು ತರುವಂತಹ ವಿಚಾರವಲ್ಲ ಎಂದರು.

ಶಾಸಕರಾದ ಬಿ.ಸುರೇಶಗೌಡ, ಚಿದಾನಂದಗೌಡ, ಡಾ.ವೈ.ಎ.ನಾರಾಯಣ ಸ್ವಾಮಿ, ಪತ್ರಕರ್ತ ಎಸ್.ನಾಗಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಇಕ್ಬಾಲ್ ಅಹಮದ್, ಜಿಲ್ಲಾಧಿಕಾರಿ ಸುಭಾ ಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್‌ಪಿ ಅಶೋಕ್.ಕೆ.ವಿ, ಮುರುಳಿಕೃಷ್ಣಪ್ಪ ಇತರರು ಹಾಜರಿದ್ದರು.

ಪ್ರಜಾಪ್ರಭುತ್ವಕ್ಕೆ ದೊಡ್ಡ ಆತಂಕ

ಬೆಳಿಗ್ಗೆ ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಇಂದು ಅತ್ಯಂತ ಬಿಕ್ಕಟ್ಟು ಎದುರಿಸುತ್ತಿದ್ದು, ಸಾಹಿತಿಗಳು ತಮ್ಮ ಜವಾಬ್ದಾರಿ ಮರೆತು ಮೌನಕ್ಕೆ ಶರಣಾಗಿ ಅವರು ಏನೇ ಬರೆದರೂ ಅದು ಬೂಸಾ ಸಾಹಿತ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು

ಸಾಹಿತಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುವುದು ನಮಗೆ ದೊರೆತ ಜವಾಬ್ದಾರಿಯಿಂದ ನುಣುಚಿಕೊಂಡಂತೆ, ಈ ಬಗ್ಗೆ ಎಲ್ಲಾ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಶಾಂತಿಯ ಕಾಲದಲ್ಲಿ ಕ್ರಾಂತಿಯ ಮಾತುಗಳನ್ನಾಡುವುದು ಸಾಹಿತ್ಯವಲ್ಲ, ನಿಜವಾಗಿಯೂ ಕ್ರಾಂತಿಯ ಕಾಲದಲ್ಲಿ ಮೌನಕ್ಕೆ ಶರಣಾಗುವುದು ಸಲ್ಲದು ಎಂದ ಅವರು ಪ್ರಜಾಪ್ರಭುತ್ವಕ್ಕೆ ದೊಡ್ಡ ಆತಂಕ ಎದುರಾಗಿರುವ ಈ ಕಾಲದಲ್ಲಿ ಸಾಹಿತಿಗಳು ಬರೆದಂತೆ ಬದುಕಬೇಕಾಗಿದೆ, ಸಾಹಿತ್ಯ ಸಮ್ಮೇಳನಗಳು ಇಂತಹ ಪ್ರಜ್ಞೆ ಮೂಡಿಸಬೇಕಿದೆ, ರಾಜಪ್ರಭುತ್ವದ ಕಾಲದಲ್ಲಿಯೂ ಪ್ರಜಾ ಪ್ರಭುತ್ವದ ಆಶಯಗಳನ್ನು ಜಾರಿ ಮಾಡಿ ಸಾಹಿತ್ಯ ಪರಿಷತ್ ಕಟ್ಟಿ, ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯ ಈಡೇರಬೇಕೆಂದರೆ ಸಾಹಿತ್ಯ ಆಸ್ಥಾನಗಳಲ್ಲಿ ಪುಂಗಿ ಊದುವ ಬದಲು, ಜನ ಸಾಮಾನ್ಯರ ಹೃದಯದಲ್ಲಿ ಮನೆ ಮಾಡುವಂತಹ ಕೆಲಸ ಆಗಬೇಕಿದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಇಂತಹ ವೇದಿಕೆಗಳು ಬಳಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಹೆಚ್.ಎಸ್.ಶಿವಪ್ರಕಾಶ್ ಮಾತನಾಡಿ, ಜಾಗತೀಕರಣದ ಫಲವಾಗಿ ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿ ರೂಪಗೊಂಡು ಲಾಭವೇ ಮುಖ್ಯವಾಗಿರುವ ಇಂದಿನ ದಿನದಲ್ಲಿ ಪ್ರಾದೇಶಿಕತೆ ಎಂಬುದು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ, ಪ್ರಜಾಪ್ರಭುತ್ವದ ಅಡಿಯಲ್ಲಿಯೇ ಜಾಗತೀಕರಣ ವಿಸ್ತರಣೆ ಗೊಳ್ಳುತ್ತಿದ್ದು, ಸರ್ವಾಧಿಕಾರಿ ಧೋರಣೆ, ಬಹುರಾಷ್ಟ್ರೀಯ ದಬ್ಬಾಳಿಕೆಯಿಂದ ಸಂಸ್ಕೃತಿ, ಸ್ಥಳೀಯ ಭಾಷೆಗಳಿಗೆ ಕುತ್ತುಂಟಾಗಿದೆ, ಜೀವ ಪರವಾದ ಸಾಂಸ್ಕೃತಿಕ, ಕಲೆ, ಸಂಸ್ಕೃತಿ, ಸಾಹಿತ್ಯ ನಗಣ್ಯವಾಗುತ್ತಿದೆ ಎಂದರು.

ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪ ಸೌರಭ ಜಿಪಂ ಸಿಇಓ ಜಿ.ಪ್ರಭು ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಹದಿನಾಲ್ಕನೇ ಸಾಹಿತ್ಯ ಸಮ್ಮೇಳದನ ಅಧ್ಯಕ್ಷ ಎಂ.ವಿ.ನಾಗರಾಜರಾವ್, ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜಿ, ಶಾಸಕ ಜಿ.ಬಿ.ಜೋತಿಗಣೇಶ್ ಇತರರು ಹಾಜರಿದ್ದರು.

( ವರದಿ: ಈಶ್ವರ್‌ ತುಮಕೂರು)‌

Whats_app_banner