Tumkur Siddaganga Jatre 2025: ಕಳೆಗಟ್ಟುತಿದೆ ತುಮಕೂರು ಸಿದ್ದಗಂಗಾ ಜಾತ್ರೆ, ದನಗಳ ಪರಿಷೆ, ಕೃಷಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತಯಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Tumkur Siddaganga Jatre 2025: ಕಳೆಗಟ್ಟುತಿದೆ ತುಮಕೂರು ಸಿದ್ದಗಂಗಾ ಜಾತ್ರೆ, ದನಗಳ ಪರಿಷೆ, ಕೃಷಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತಯಾರಿ

Tumkur Siddaganga Jatre 2025: ಕಳೆಗಟ್ಟುತಿದೆ ತುಮಕೂರು ಸಿದ್ದಗಂಗಾ ಜಾತ್ರೆ, ದನಗಳ ಪರಿಷೆ, ಕೃಷಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತಯಾರಿ

Tumkur Siddaganga Jatre 2025: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಸಾಲಿನ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಫೆಬ್ರವರಿ 17ರಿಂದ ದನಗಳ ಪರಿಷೆ ಉದ್ಘಾಟನೆಯೊಂದಿಗೆ ಆರಂಭಗೊಳ್ಳಲಿವೆ. ಜಾತ್ರೆ ವಿವರ ಇಲ್ಲಿದೆ.

ತುಮಕೂರಿನಲ್ಲಿ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಆರಂಭವಾಗುತ್ತಿದ್ದು. ದನಗಳ ಪರಿಷೆ ಉದ್ಘಾಟನಗೆ ಸಿದ್ದತೆಗಳು ಆಗಿವೆ.
ತುಮಕೂರಿನಲ್ಲಿ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಆರಂಭವಾಗುತ್ತಿದ್ದು. ದನಗಳ ಪರಿಷೆ ಉದ್ಘಾಟನಗೆ ಸಿದ್ದತೆಗಳು ಆಗಿವೆ. (Manu Doddamane)

Tumkur Siddaganga Jatre 2025: ಅಪ್ಪಟ ಗ್ರಾಮೀಣ ಸೊಗಡಿನ ತುಮಕೂರು ಸಿದ್ದಗಂಗಾ ಮಠ ಆಯೋಜಿಸುವ 2025ನೇ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಫೆಬ್ರವರಿ 17ರಿಂದಲೇ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಕಲ್ಪತರು ನಾಡು ತುಮಕೂರಿನಲ್ಲಿ ಶುರುವಾಗಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ದನಗಳ ಪರಿಷೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕೋತ್ಸವ, ಕೃಷಿ ಹಾಗೂ ಕೈಗಾರಿಕಾ ವಸ್ತುಪ್ರದರ್ಶನಗಳು ಇರಲಿವೆ. ಈಗಾಗಲೇ ತುಮಕೂರು ಮಾತ್ರವಲ್ಲದೇ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಚಿತ್ರದುರ್ಗ, ಹಾಸನ ಭಾಗದಿಂದಲೂ ನೂರಾರು ರಾಸುಗಳು ದನಗಳ ಪರಿಷೆಗೆ ಬಂದಿವೆ. ವಸ್ತುಪ್ರದರ್ಶನದಲ್ಲೂ ಮಳಿಗೆಗಳ ಕಾರ್ಯ ಪೂರ್ಣಗೊಂಡಿದೆ. ಸಿದ್ದಗಂಗಾ ಮಠದ ಆವರಣ ಮುಂದಿನ ಎರಡು ವಾರ ಕಾಲ ಭಕ್ತರಿಂದ ತುಂಬಿರಲಿದೆ. ದೀಪಾಲಂಕಾರದ ಜತೆಗೆ ಸಂಸ್ಕೃತಿಯ ಅಂಗಳವಾಗಿ ಮಿಂಚಲಿದೆ.

ಹಳೆಯ ಜಾತ್ರೆ

ತುಮಕೂರಿನ ಸಿದ್ದಗಂಗಾ ಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಹಲವಾರು ದಶಕಗಳಿಂದ ಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್‌ ತಿಂಗಳಲ್ಲಿ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತದೆ. ಈ ಬಾರಿಯೂ ಫೆಬ್ರವರಿ 20ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಆದರೆ ಅದಕ್ಕೂ ಮೊದಲೇ ರಾಸುಗಳ ಪ್ರದರ್ಶನ ಶುರುವಾಗಲಿದೆ. ಅಲ್ಲದೇ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವೂ ಮಂಗಳವಾರ ಉದ್ಘಾಟನೆಗೊಳ್ಳಲಿದೆ. ಸಂಸ್ಕೃತಿಯ ಸಂಗಮದಂತಿರುವ ಜಾತ್ರೆಯು ಹಲವು ಆಚರಣೆಗಳ ಭಾಗವೂ ಹೌದು. ನಿತ್ಯ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಇಲ್ಲಿನ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವರು. ಭಕ್ತರಿಗೆ ನಿತ್ಯ ದಾಸೋಹವೂ ಜಾತ್ರೆ ವೇಳೆ ಇರಲಿದೆ.

ವಸ್ತು ಪ್ರದರ್ಶನ ವಿಶೇಷ

ಸಿದ್ಧಗಂಗಾ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಬಹುತೇಕ ಸಿದ್ದಗೊಂಡಿದೆ. ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಟ್ರಸ್ಟ್‌ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸುವ ಶ್ರೀ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಕ್ಕಾಗಿ ಮಳಿಗೆಗಳನ್ನು ಅಣಿಗೊಳಿಸಲಾಗಿದೆ. ಬಗೆಬಗೆಯ ವಸ್ತುಗಳ ಪ್ರದರ್ಶನ, ಮಾರಾಟವೂ ಆಕರ್ಷಣೆಯಾಗಲಿದೆ. ದೇವರಾಯನ ದುರ್ಗದ ಅರಣ್ಯ ಇಲಾಖೆಯ ಮಳಿಗೆಯೂ ಕೂಡ ಗಮನ ಸೆಳಯುತ್ತಿದೆ.

ದನಗಳ ಪರಿಷೆ ಆಕರ್ಷಣೆ

ಸಿದ್ದಗಂಗಾ ಜಾತ್ರಾ ಮಹೋತ್ಸವದಲ್ಲಿ ದನಗಳ ಪರಿಷೆಯೂ ಸಿದ್ದವಾಗಿದೆ. ಮೂರ್ನಾಲ್ಕು ದಿನಗಳಿಂದಲೂ ಕೃಷಿಕರು ತಮ್ಮ ರಾಸುಗಳನ್ನು ಪ್ರದರ್ಶನಕ್ಕೆ ತರುತ್ತಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ರಾಸುಗಳ ಅಲಂಕಾರ, ಮೆರವಣಿಗೆ ವೈಭವವೂ ಜೋರಿದೆ. ಸೋಮವಾರ ದನಗಳ ಪರಿಷೆ ಉದ್ಘಾಟನೆಗೊಳ್ಳಲಿದೆ.

ಪ್ರತಿ ವರ್ಷ ನಾವು ಸಿದ್ದಗಂಗಾ ಜಾತ್ರೆಯ ದನಗಳ ಪರಿಷೆಗೆ ಬರುತ್ತೇವೆ. ಕರ್ನಾಟಕದ ನಾನಾ ಭಾಗಗಳಿಂದ ರೈತರು ಇಲ್ಲಿ ರಾಸುಗಳನ್ನು ಖರೀದಿಸಲು ಬರುತ್ತಾರೆ. ನಮ್ಮ ರಾಸುಗಳಿಗೆ ಉತ್ತಮ ಬೆಲೆಯೂ ಇಲ್ಲಿ ಸಿಗುತ್ತದೆ. ಈ ಬಾರಿಯೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ರೈತರೊಬ್ಬರು ಹೇಳಿಕೊಂಡರು.

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾಮಹೋತ್ಸವ ಅಂಗವಾಗಿ ಫೆಬ್ರವರಿ 18ರಿಂದ ಮಾರ್ಚ್‌ 01ರ ಶನಿವಾರದವರೆಗೆ ಪ್ರಾರ್ಥನಾ ಸಭಾ ಆವರಣದ ಶ್ರೀ ಉದ್ದಾನೇಶ್ವರ ವೇದಿಕೆಯಲ್ಲಿ ಪ್ರತಿದಿನ ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭಗಳು, ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ-ಪ್ರವಚನಗಳು ನಡೆಯುತ್ತವೆ. ಕರ್ನಾಟಕ ನಾಟಕ ಅಕಾಡೆಮಿಯು ಸಹಯೋಗದೊಂದಿಗೆ ಶ್ರೀ ಸಿದ್ಧಗಂಗಾ ಜಾತ್ರಾ ಮಹೋತ್ಸವ ಅಂಗವಾಗಿ 18 ಮತ್ತು 19 ರಂದು ಸಿದ್ದಗಂಗಾ ಮಠದಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ 2 ದಿನಗಳ ನಾಟಕೋತ್ಸವವನ್ನು ಆಯೋಜಿಸುತ್ತಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner