Tumkur News: ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಣ್ಣರ ಕಲರವ; ಮಕ್ಕಳ ಕುಂಚದಲ್ಲಿ ಅರಳಿದ ಚಿತ್ರಕಲೆ
ತುಮಕೂರಿನ ಸಿದ್ದಾರ್ಥ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಪ್ರೀತಿಯಿಂದಲೇ ಚಿತ್ರಗಳನ್ನು ರಚಿಸಿ ಖುಷಿಪಟ್ಟರು.ವರದಿ: ಈಶ್ವರ್ ತುಮಕೂರು
ತುಮಕೂರು: ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಗೆ ತುಮಕೂರು ಜಿಲ್ಲೆಯ ನಾನಾ ಶಾಲೆಗಳಿಂದ ಮಕ್ಕಳು ಶ್ರೀಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನೆರೆದಿದ್ದರು, ಆ ದೃಶ್ಯ ಪುಟಾಣಿ ನಕ್ಷತ್ರಗಳೇ ಇಂಜಿನಿಯರಿಂಗ್ ಕಾಲೇಜಿಗೆ ಆವರಣಕ್ಕೆ ಬಂದಂತೆ ಬಾಸವಾಗುತ್ತಿತ್ತು, ಆ ಮಕ್ಕಳ ಕಲರವವೇ ಕಣ್ಣಿಗೆ ಹಬ್ಬದಂತಿತ್ತು. ಖುಷಿಯಿಂದಲೇ ವಿಶಾಲ ಕ್ಯಾಂಪಸ್‌ನಲ್ಲಿ ಕಳೆದ ಮಕ್ಕಳು ತಮ್ಮ ಎಳೆಯ ಮನಸ್ಸಿನಲ್ಲಿ ತೋಚಿದ್ದನ್ನು ಬಿಳಿಯ ಹಾಳೆಗಳ ಮೇಲೆ ಅಭಿವ್ಯಕ್ತಿಸಿದರು. ನಿಜಕ್ಕೂ ಮಕ್ಕಳ ಆ ಪ್ರೀತಿ ಕಂಡು ಹಿರಿಯರೂ ಖುಷಿಯಾದರು. ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ಶಿಕ್ಷಣ ಭೀಷ್ಮ ದಿವಂಗತ ಡಾ.ಹೆಚ್.ಎಂ.ಗಂಗಾಧರಯ್ಯ ಅವರ ಸ್ಮರಣಾರ್ಥ ತುಮಕೂರು ಜಿಲ್ಲೆಯ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಅಂತರಾಷ್ಟ್ರೀಯ ಕಲಾವಿದರಿಂದ ಚಾಲನೆ
ಸ್ಫರ್ಧೆ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಚಿತ್ರಕಲಾವಿದ ಸೂರ್ಯ ನಾರಾಯಣ್ ಉದ್ಘಾಟಿಸಿ ನಂತರ ಮಾತನಾಡಿ, ಸೃಷ್ಟಿಕರ್ತ ಪ್ರಕೃತಿಯನ್ನು ಸೃಷ್ಟಿಸಿದ್ದಾನೆ, ಸೃಷ್ಟಿಯಲ್ಲಿನ ಅಂದವನ್ನು ಚಿತ್ರಿಸಲು ಕಲಾವಿದರನ್ನು ಸೃಷ್ಟಿಸಿದ್ದಾನೆ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾಗಿ ಮಹತ್ವ ನೀಡಬೇಕು ಎನ್ನುವ ಸಲಹೆ ನೀಡಿದರು.
ಪ್ರಕೃತಿಯಲ್ಲಿ ಎಲ್ಲವೂ ಕಲಾಕೃತಿಗಳೆ, ಅದನ್ನು ಗುರುತಿಸುವ ಕಣ್ಣುಗಳು ಕಲಾವಿದನಿಗೆ ಇರಬೇಕು, ಭೂಮಿ ತುಂಬಾ ಸುಂದರವಾಗಿದೆ, ಕಾರಣ ಇಂಗ್ಲಿಷ್‌ನ ಪದದಲ್ಲಿಯೇ ಕಲೆ ಎಂಬ ಪದವಿದೆ, ಹಾಗೆಯೇ ಸಿದ್ಧಾರ್ಥ ಕಾಲೇಜಿನ ಹೆಸರಿನಲ್ಲಿಯೂ ಕಲೆ ಇದೆ, ವಿದ್ಯಾರ್ಥಿಗಳು ಚಿತ್ರಕಲೆ ಅಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಸನ, ಸೃಜನಾತ್ಮಕತೆ ಹೆಚ್ಚಾಗುತ್ತದೆ, ನಾವು ಧರಿಸುವ ಉಡುಪು, ಮಾತು, ಹಾವಭಾವ, ಬಣ್ಣ, ವಿನ್ಯಾಸ, ದೇವಾಲಯಗಳು ನಮ್ಮ ಸಂಸ್ಕೃತಿ ಎಲ್ಲದರಲ್ಲೂ ಚಿತ್ರಕಲೆ ಇದೆ. ನಾವು ಪೂಜಿಸುವ ದೇವರ ವಿಗ್ರಹ ಕೂಡ ಒಬ್ಬ ಶಿಲ್ಪಿ ನಿರ್ಮಿಸಿದ ಶಿಲ್ಪಕಲೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರಮುಖರ ಭಾಗಿ
ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರಿ ಪರಮೇಶ್ವರ, ಸಾಹೇ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ವಿಶ್ವ ವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರ ಡಾ.ವಿವೇಕ್ ವೀರಯ್ಯ, ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ, ಎಸ್‌ಎಸ್‌ಐಟಿಯ ಡೀನ್ (ಅಕಾಡೆಮಿಕ್) ಡಾ.ರೇಣುಕಾ ಲತಾ, ಸಂಯೋಜಕರಾದದ ಡಾ.ರಾಜು ಎ.ಎಸ್.ಡಾ.ಸುನಿಲ್, ಬಿಬಿಎಂ ಪ್ರಾಂಶುಪಾಲರಾದ ಡಾ ಮಮತ, ಎಂಬಿಎ ಪ್ರಾಂಶುಪಾಲ ಡಾ.ಅಜಮತ್‌ವುಲ್ಲಾ, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಇತರರು ಭಾಗವಹಿಸಿದ್ದರು.
5000 ಸಾವಿರ ಶಾಲಾ ಮಕ್ಕಳು ಭಾಗಿ
ತುಮಕೂರು ಜಿಲ್ಲೆಯ ಸುಮಾರು 120 ಶಾಲೆಯ 5000 ಸಾವಿರ ಶಾಲಾ ಮಕ್ಕಳು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಗಳ ವಿವರಗಳು ನರ್ಸರಿ ಮಕ್ಕಳಿಗೆ ತಮಗೆ ಇಷ್ಟವಾದ ಯಾವುದಾದರೂ ಚಿತ್ರ ಬಿಡಿಸಬಹುದು, 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಜಲ ಜೀವನ, 5 ರಿಂದ 7ನೇ ತರಗತಿ ವರೆಗೆ ತಮ್ಮ ಕಲ್ಪನೆಯ ಪ್ರಪಂಚ, 7ರಿಂದ 10ನೇ ತರಗತಿ ಅವರಿಗೆ ತಂತ್ರಜ್ಞಾನ ಮತ್ತು ಪ್ರಕೃತಿ, ಕಾಲೇಜು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ವಿಷಯ ನೀಡಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು.
(ವರದಿ: ಈಶ್ವರ್ ತುಮಕೂರು)
ವಿಭಾಗ