ತುಮಕೂರು: ಡಿಸೆಂಬರ್ 7,8 ಕ್ಕೆ ಗೂಳೂರು ಗಣೇಶ ಮೂರ್ತಿ ನಿಮಜ್ಜನ; ಅದ್ದೂರಿ ಮಹೋತ್ಸವಕ್ಕೆ ಸಕಲ ಸಿದ್ಧತೆ
Tumkur: ಕಳೆದ ಬಲಿಪಾಡ್ಯಮಿಯಂದು ಪ್ರತಿಷ್ಠಾಪಿಸಲಾಗಿದ್ದ ತುಮಕೂರು ಜಿಲ್ಲೆ ಗೂಳೂರು ಗಣೇಶ ಮೂರ್ತಿ ನಿಮಜ್ಜನಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಡಿಸೆಂಬರ್ 7 ಹಾಗೂ 8ಕ್ಕೆ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸುತ್ತಮುತ್ತಲಿನ ಗ್ರಾಮಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಗಣೇಶನ ನಿಮಜ್ಜನ ಮಹೋತ್ಸವ ಡಿಸೆಂಬರ್ 7ರ ಶನಿವಾರ ಮತ್ತು ಡಿಸೆಂಬರ್ 08ರ ಭಾನುವಾರ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀಮಹಾ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ. ಬಲಿಪಾಡ್ಯಮಿಯ ದಿನ ಸ್ಥಾಪಿಸಲಾಗುವ ಗಣೇಶ ಮೂರ್ತಿಗೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಬಲಿಪಾಡ್ಯಮಿ ದಿನದಿಂದ 1 ತಿಂಗಳ ಕಾಲ ನಡೆಯುವ ಪೂಜೆ
ಈ ಗೂಳೂರು ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಪ್ರತಿದಿನ ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ, 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿ ಸಲಿಸಿ, ನಿಮಜ್ಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 07ರ ಶನಿವಾರ ರಾತ್ರಿ 10 ಗಂಟೆಗೆ ವಿದ್ಯುತ್ ಅಲಂಕಾರ ಮತ್ತು ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಶ್ರೀಮಹಾ ಗಣಪತಿ ಉತ್ಸವ ಆರಂಭವಾಗಲಿದೆ. ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ, ಮಂಡದ ಕಲಾ ತಂಡದಿಂದ ಕರಡಿ ವಾಧ್ಯ, ನಾಸಿಕ್ ಡೋಲ್, ಮಹಿಳಾ, ಪುರುಷ ವೀರಗಾಸೆ ತಂಡಗಳು, ಕೀಲು ಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಾಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜ ಬೀದಿಗಳಲ್ಲಿ ಗಣಪತಿಯ ಉತ್ಸವ ನಡೆಯಲಿದೆ.
ನಿಮಜ್ಜನದ ಅಂಗವಾಗಿ ವಿವಿಧ ಕಾರ್ಯಕ್ರಮ
ಗಣೇಶೋತ್ಸವದ ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥ ಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗೂ ಕುಮಟ ನಾಯಕ ಅವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ನಡೆಲಿದೆ. ಡಿಸೆಂಬರ್ 8ರ ಭಾನುವಾರ ಮಧ್ಯಾಹ್ನದಿಂದ ಗ್ರಾಮದ ಮಧ್ಯ ಭಾಗದಿಂದ ಶ್ರೀಮಹಾ ಗಣಪತಿ ಉತ್ಸವ ಆರಂಭಗೊಂಡು ಸಂಜೆ 5 ಗಂಟೆಯವರೆಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ಗಣಪತಿಯ ನಿಮಜ್ಜನ ಮಾಡಲಾಗುವುದು, ಈ ವೇಳೆ ನುರಿತ ಸಿಡಿಮದ್ದು ಸಿಡಿಸುವವವರಿಂದ 500 ಅಡಿ ಉದ್ದದ ಜೋಗ್ ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್‌ಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕುರುಕ್ಷೇತ್ರ ನಾಟಕ ಪ್ರದರ್ಶನ
ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಒಂದು ತಿಂಗಳ ಕಾಲ ಪೂಜಿಸಲಾದ ಗಣಪತಿಯ ನಿಮ್ಮಜ್ಜನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರಲ್ಲದೆ ಹೊರ ರಾಜ್ಯದ ಭಕ್ತರು ಪಾಲ್ಗೊಳ್ಳುವುದು ವಾಡಿಕೆ. ಡಿಸೆಂಬರ್ 9ರ ಸೋಮವಾರ ಶ್ರೀಮಹಾ ಗಣಪತಿ ನಿಮಜ್ಜನ ಮಹೋತ್ಸವದ ಅಂಗವಾಗಿ ಬೆಳಗ್ಗೆ 11 ಗಂಟೆ ಶ್ರೀಮಹಾ ಗಣಪತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಕುರುಕ್ಷೇತ್ರ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು, ಗಣಪತಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿ ನಿಮ್ಮಜನ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಹಾ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಗೂಳೂರು ಶಿವಕುಮಾರ್ ಮನವಿ ಮಾಡಿದ್ದಾರೆ.
ವರದಿ: ಈಶ್ವರ್, ತುಮಕೂರು