Tumkuru News: ತುಮಕೂರಿನಲ್ಲಿ ಅದ್ದೂರಿ ದಸರಾ ಆಚರಣೆ, ಆನೆ ಮೇಲೆ ಚಾಮುಂಡಿ ದೇವಿ ಮೆರವಣಿಗೆ ಉತ್ಸವ
ಕನ್ನಡ ಸುದ್ದಿ  /  ಕರ್ನಾಟಕ  /  Tumkuru News: ತುಮಕೂರಿನಲ್ಲಿ ಅದ್ದೂರಿ ದಸರಾ ಆಚರಣೆ, ಆನೆ ಮೇಲೆ ಚಾಮುಂಡಿ ದೇವಿ ಮೆರವಣಿಗೆ ಉತ್ಸವ

Tumkuru News: ತುಮಕೂರಿನಲ್ಲಿ ಅದ್ದೂರಿ ದಸರಾ ಆಚರಣೆ, ಆನೆ ಮೇಲೆ ಚಾಮುಂಡಿ ದೇವಿ ಮೆರವಣಿಗೆ ಉತ್ಸವ

ತುಮಕೂರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 33ನೇ ವರ್ಷದ ದಸರಾ ಉತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ಆನೆ ಮೇಲೆ ಚಾಮುಂಡಿ ದೇವಿ ಮೆರವಣಿಗೆ ಉತ್ಸವ ನೆರವೇರಿತು. ಇದರ ವಿವರ ಇಲ್ಲಿದೆ.

ತುಮಕೂರು ದಸರಾ ಜಂಬೂ ಸವಾರಿ ಮತ್ತು ವೇದಿಕೆ ಕಾರ್ಯಕ್ರಮ
ತುಮಕೂರು ದಸರಾ ಜಂಬೂ ಸವಾರಿ ಮತ್ತು ವೇದಿಕೆ ಕಾರ್ಯಕ್ರಮ

ತುಮಕೂರು: ದಸರಾ ಉತ್ಸವಕ್ಕೆ ಶತಮಾನಗಳ ಇತಿಹಾಸವಿದ್ದು, ವಿಜಯನಗರ ಅರಸರ ಕಾಲದಿಂದಲೂ ಇಂದಿನವರೆಗೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ರಾಷ್ಟ್ರಕ್ಕೆ ಬಿಂಬಿಸುವ ದಸರಾ ಉತ್ಸವ ಸಾಂಸ್ಕೃತಿಕ ಹಬ್ಬಗಳಲ್ಲಿಯೇ ಮಹತ್ವ ಪಡೆದು ಕೊಂಡಿದೆ ಎಂದು ತುಮಕೂರು ತಾಲೂಕು ದಂಡಾಧಿಕಾರಿ ಸಿದ್ದೇಶ್ ತಿಳಿಸಿದ್ದಾರೆ.

ತುಮಕೂರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ದಸರಾ ಸಮಿತಿ ಆಯೋಜಿಸಿದ್ದ 33ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಬನ್ನಿ ಮರದ ಶಮಿ ಪೂಜೆ ನೆರವೇರಿಸಿದ ನಂತರ, ಶುಭ ಸಂದೇಶ ನೀಡಿದ ಅವರು, ಕ್ರಿಶ್ತ ಶಕ 1410ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಪಾರಂಭವಾದ ದಸರಾವನ್ನು ಸರಕಾರವೇ ನಾಡಹಬ್ಬವನ್ನಾಗಿ ಆಚರಿಸಿ ಕೊಂಡು ಬರುತ್ತಿದೆ, ಮಹಾಭಾರತ, ರಾಮಾಯಣದಲ್ಲಿಯೂ ನವರಾತ್ರಿ ಉತ್ಸವದ ಉಲ್ಲೇಖವಿದೆ. ಅಧರ್ಮದ ವಿರುದ್ದ ಧರ್ಮದ ಜಯವೆಂದೇ ವಿಜಯದಶಮಿಯನ್ನು ಬಿಂಬಿಸಿಕೊಂಡು ಬರಲಾಗುತ್ತಿದೆ. ತುಮಕೂರು ದಸರಾ ಸಮಿತಿಯ ಎಲ್ಲರೂ ಒಗ್ಗೂಡಿ ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ತುಮಕೂರು ದಸರಾ ಮೆರವಣಿಗೆ
ತುಮಕೂರು ದಸರಾ ಮೆರವಣಿಗೆ

ಪತ್ರಕರ್ತೆ ಲಕ್ಷ್ಮಿ ರಾಜಕುಮಾರ್ ಮಾತನಾಡಿ, ದಸರಾ ಆಚರಣೆಗೆ ಎಂಬುದು ಕುರುಡು ನಂಬಿಕೆಯಿಂದ ಮಾಡುವಂತಹದ್ದಲ್ಲ. ತಾಯಿ ಚಾಮುಂಡಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ಆಚರಿಸಿದರೆ ಅದಕ್ಕೆ ಹೆಚ್ಚಿನ ಅರ್ಥ ಬರುತ್ತದೆ.ತುಮಕೂರಿಗೆ ತನ್ನದೇ ಆದ ಇತಿಹಾಸವಿದೆ. ಇದು ತ್ರಿವಿಧ ದಾಸೋಹದ ಮೂಲಕ ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿ ಕೊಂಡು ಡಾ. ಶ್ರೀ ಶಿವಕುಮಾರಸ್ವಾಮೀಜಿ ನಡೆದಾಡಿದ ನೆಲ. ಕೆಲ ಹಿರಿಯ ಜೀವಿಗಳು ಸೇರಿ ಕಳೆದ 33 ವರ್ಷಗಳಿಂದ ಸ್ವಾರ್ಥವಿಲ್ಲದೆ ದಸರಾ ಹಬ್ಬ ನಡೆಸಿಕೊಂಡು ಬರುತ್ತಿದ್ದಾರೆ. ಇದು ನಿಜವಾದ ಧರ್ಮ, ಕತ್ತಿ ಹಿಡಿದು, ಭಾರತ್ ಮಾತಾಕೀ ಜೈ ಎನ್ನುವುದಲ್ಲ ಧರ್ಮ. ನಿಸ್ವಾರ್ಥ ಸೇವೆಯೇ ನಿಜವಾದ. ಅದನ್ನು ತುಮಕೂರಿನಲ್ಲಿ ಕಾಣುತ್ತಿದ್ದೇನೆ ಎಂದರು.

ತುಮಕೂರು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್ ಮಾತನಾಡಿ,ವಿಜೃಂಭಣೆಯಿಂದ ನಡೆಯುತ್ತಿರುವ ಈ ದಸರಾ ಉತ್ಸವಕ್ಕಾಗಿ ನೂರಾರು ಜನರು ಕಳೆದ ಮೂರು ತಿಂಗಳಿನಿಂದ ಹಗಲಿರುಳು ದುಡಿದಿದ್ದಾರೆ. ತುಮಕೂರು ದಸರಾ ಉತ್ಸವ ಅಚ್ಚಕಟ್ಟಾಗಿ ನಡೆಯಬೇಕು ಎಂಬ ಕಾರಣಕ್ಕೆ 28 ಉಪಸಮಿತಿಗಳನ್ನು ರಚಿಸಿ,ಅವುಗಳಿಗೆ ಇಂತಿಷ್ಟು ಜವಾಬ್ದಾರಿ ವಹಿಸಿ,ನಿರಂತರ ಮೇಲುಸ್ತುವಾರಿ ನೋಡಿಕೊಂಡ ಪರಿಣಾಮ ಸಹಸ್ರಾರು ಜನರು ದಸರಾ ಉತ್ಸವ ನೋಡಿ ಕಣ್ತುಂಬಿಕೊಳ್ಳುವಂತಾಗಿದೆ.

ಇದಕ್ಕೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜೋತಿಗಣೇಶ್ ಸಹಕಾರ ಮುಖ್ಯವಾಗಿದೆ. ಕೊನೆಯ ಕ್ಷಣದಲ್ಲಿ ಎದುರಾದ ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸುವ ಮೂಲಕ ದಸರಾ ಉತ್ಸವ ನಿರ್ವಿಘ್ನವಾಗಿ ನಡೆಯಲು ಎಲ್ಲಾ ರೀತಿಯ ಸಹಕಾರ ಜಿಲ್ಲಾಡಳಿತದಿಂದ ದೊರೆಯಿತು. ಇದಕ್ಕಾಗಿ ದುಡಿದ ಎಲ್ಲರಿಗೂ ಶುಭಾಷಯ ಹೇಳುವುದಾಗಿ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ನೊಣವಿನಕೆರೆ ಶ್ರೀಕಾಡುಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿಗಳು,ರಾಜ್ಯದಲ್ಲಿ ಮಳೆ ಬೆಳೆ ಕೊರತೆ ಇದೆ.ಇದು ನಿಜಕ್ಕೂ ನೋವಿನ ಸಂಗತಿ. ನಿಮ್ಮೆಲ್ಲರ ಪ್ರಾರ್ಥನೆ ಆ ಚಾಮುಂಡೇಶ್ವರಿಗೆ ತಲುಪಿ,ಮಳೆ ಬರುವಂತಾಗಲಿ ಎಂದ ಶ್ರೀಗಳು, ಸರಕಾರ ಮುಜರಾಯಿ ದೇವಾಲಯಗಳಲ್ಲಿ ಬ್ರಾಹ್ಮಿ ಮೂರ್ಹತದಲ್ಲಿ ಪೂಜೆಗಳು ನಡೆದರೆ, ಮಳೆಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಂಸದ ಜಿ.ಎಸ್.ಬಸವರಾಜು, ದಸರಾ ಸಮಿತಿ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ, ಖಜಾಂಚಿ ಜಿ.ಎಸ್.ಬಸವರಾಜು, ಕಾರ್ಯದರ್ಶಿ ಮಹೇಶ್, ಸೌಮ್ಯ, ರೂಪ, ಜಿ.ಕೆ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಆನೆಯ ಮೇಲೆ ಇರಿಸಿ, ನಗರ ಹಾಗೂ ಸುತ್ತಮುತ್ತಲ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಉತ್ಸವ ಕೋಡಿ ಬಸವೇಶ್ವರ ದೇವಾಲಯ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತ್ತು.

Whats_app_banner