Tumkuru News: ತುಮಕೂರು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣ ಶೀಘ್ರದಲ್ಲೇ ಉದ್ಘಾಟನೆ: ಡಾ.ಜಿ ಪರಮೇಶ್ವರ್
ಕನ್ನಡ ಸುದ್ದಿ  /  ಕರ್ನಾಟಕ  /  Tumkuru News: ತುಮಕೂರು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣ ಶೀಘ್ರದಲ್ಲೇ ಉದ್ಘಾಟನೆ: ಡಾ.ಜಿ ಪರಮೇಶ್ವರ್

Tumkuru News: ತುಮಕೂರು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣ ಶೀಘ್ರದಲ್ಲೇ ಉದ್ಘಾಟನೆ: ಡಾ.ಜಿ ಪರಮೇಶ್ವರ್

Dr G Parameshwar: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಲಾಯ್ತು.

ತುಮಕೂರಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಜಿ ಪರಮೇಶ್ವರ್
ತುಮಕೂರಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಜಿ ಪರಮೇಶ್ವರ್

ತುಮಕೂರು: ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ತುಮಕೂರಿನ ಹೊಸ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ದವಾಗಲಿದೆ. 16 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರಿನ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಅಂದಾಜು ರೂ.82 ಕೋಟಿ ಮೊತ್ತದಲ್ಲಿ ಇಡೀ ರಾಜ್ಯಕ್ಕೆ ಮೊದಲನೆಯದು ಎನ್ನಬಹುದಾದ ಅತ್ಯಾಧುನಿಕ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣದ ಕಾಮಗಾರಿಗೆ ಈ ಹಿಂದೆ ತಾವೇ ಅಡಿಗಲ್ಲು ಹಾಕಿದ್ದು, ಇನ್ನು ಎರಡು-ಮೂರು ತಿಂಗಳಲ್ಲಿ ಹೊಸ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ದವಾಗಲಿದೆ. 16 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರಿನ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಲಾಯ್ತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯ ಸರ್ಕಾರ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದ್ದು, ‘ಶಕ್ತಿ’ ಈ 5 ಯೋಜನೆಗಳಲ್ಲಿ ಮಹಿಳಾ ವಿಶೇಷ ಯೋಜನೆಯಾಗಿದೆ ಎಂದು ಹೇಳಿದ್ದಾರೆ.

ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಭಾನುವಾರ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಚಾಲನೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಆ ಮೂಲಕ ಕರ್ನಾಟಕದಲ್ಲಿ ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನ ಒಂದು ಭಾಗವಾಗಿ ತುಮಕೂರು ಜಿಲ್ಲೆಯನ್ನು ಪರಿಗಣಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದ್ದು, ಮೆಟ್ರೋ ರೈಲನ್ನು ತುಮಕೂರಿಗೆ ವಿಸ್ತರಿಸಲು ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಕ್ತಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕ್ಯಾತ್ಸಂದ್ರ ಹಾಗೂ ಬೆಂಗಳೂರು ಮಾರ್ಗದ ಎರಡು ಬಸ್‌ಗಳನ್ನು ಸಂಪೂರ್ಣ ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿಡಲಾಗಿದ್ದು, ಈ ಬಸ್‌ಗಳಿಗೆ ಚಾಲನೆ ನೀಡಿದ ಗೃಹ ಸಚಿವರು ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಬಸ್ ಟಿಕೇಟ್ ವಿತರಿಸಿ, ಮಹಿಳಾ ಪ್ರಯಾಣಿಕರಿಗೆ ಸಿಹಿ ವಿತರಿಸಿ ಶುಭ ಕೋರಿದರು.

ಇಡೀ ರಾಜ್ಯದಲ್ಲಿ ಲಕ್ಷಾಂತರ ಸ್ತ್ರೀಶಕ್ತಿ ಸಂಘಗಳಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸದೆ ಇದ್ದರೆ ವೇಗದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಸಬಲರಾಗಬೇಕು, ಅವರು ಎಲ್ಲೆಡೆ ಸುಲಲಿತವಾಗಿ ಪ್ರಯಾಣಿಸಬೇಕೆಂಬ ದಿಸೆಯಲ್ಲಿ ನಮ್ಮ ಪಕ್ಷ ಚುನಾವಣೆಗೂ ಮುನ್ನಾ ಪ್ರಣಾಳಿಕೆಯಲ್ಲಿ ‘ಶಕ್ತಿ ಯೋಜನೆ’ಗೆ ತೀರ್ಮಾನ ಮಾಡಿತ್ತು ಎಂದು ತಿಳಿಸಿದರು.

ಸಂಪುಟದ ಮೊದಲನೇ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳ ಕುರಿತು ತೀರ್ಮಾನಿಸಿ ಸಂಜೆ ವೇಳೆಗೆ ಆದೇಶ ಹೊರಡಿಸಲಾಯಿತು. ಒಂದು ವರ್ಷಕ್ಕೆ ಸರಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳು ಶಕ್ತಿ ಯೋಜನೆಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಹೊಂದಿಸುವ ಯೋಜನೆ ಸಹ ರೂಪಿಸಲಾಗಿದೆ ಎಂದರು.

ನಗರ ಸಾರಿಗೆ, ಸಾಮಾನ್ಯ, ವೇಗಧೂತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರ ಪ್ರಯಾಣಕ್ಕೆ ಯಾವುದೇ ಇತಿಮಿತಿ ಇರುವುದಿಲ್ಲ. ಹೊರ ರಾಜ್ಯದವರು ಈ ಯೋಜನೆ ಉಪಯೋಗ ಪಡೆಯದಿರಲಿ ಎಂಬ ಉದ್ದೇಶದಿಂದ ರಾಜ್ಯದ ಮಹಿಳೆಯರಿಗೆ ಗುರುತಿನ ಚೀಟಿ ಕೇಳಲಾಗುತ್ತದೆ ಎಂದು ತಿಳಿಸಿದರು.

ಪ್ರತಿ ದಿನ ಇಡೀ ರಾಜ್ಯದ ಸಾರಿಗೆ ನಿಗಮಗಳ ಆದಾಯ ಅಂದಾಜು 26 ಕೋಟಿ ರೂಪಾಯಿಗಳಾಗಿರುತ್ತದೆ. ಶಕ್ತಿ ಯೋಜನೆಗೆ ಬೇಕಾಗಬಹುದಾದ ಅಂದಾಜು 5 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರದ ಖಜಾನೆಯಿಂದ ಸಾರಿಗೆ ನಿಗಮ ಮತ್ತು ಸಂಸ್ಥೆಗಳಿಗೆ ಭರಿಸಲಾಗುವುದು ಎಂದರು.

ಮಹಿಳೆ ಸಬಲೆ ಮತ್ತು ಸಶಕ್ತಳಾದಲ್ಲಿ ಸಮಾಜದ ಸ್ವಾಸ್ಥ್ಯ ಸುಧಾರಣೆಯಾಗುತ್ತದೆ. ಫೈಟರ್ ಜೆಟ್ ಮತ್ತು ವಿಮಾನಗಳನ್ನು ಓಡಿಸುವ ಸಾಮರ್ಥ್ಯವನ್ನು ಮಹಿಳೆ ಇಂದು ಪಡೆದುಕೊಂಡಿದ್ದಾಳೆ. ಐಟಿ-ಬಿಟಿ ಸೇರಿದಂತೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ. ಇದು ಸಮಾಜದ ಅಭಿವೃದ್ಧಿಗೆ ಪೂರಕ ಬೆಳವಣಿಗೆ ಎಂದರು.

ವರದಿ: ಈಶ್ವರ್‌, ತುಮಕೂರು

Whats_app_banner