Tumkuru News: ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ದಿನವೇ ಅಧ್ಯಕ್ಷೆ ನಿಧನ; ಮತ್ತೊಂದೆಡೆ ಮತ ಹಾಕದಿದ್ದಕ್ಕೆ ಸದಸ್ಯನಿಗೆ ಚಪ್ಪಲಿ ಏಟು
ಕನ್ನಡ ಸುದ್ದಿ  /  ಕರ್ನಾಟಕ  /  Tumkuru News: ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ದಿನವೇ ಅಧ್ಯಕ್ಷೆ ನಿಧನ; ಮತ್ತೊಂದೆಡೆ ಮತ ಹಾಕದಿದ್ದಕ್ಕೆ ಸದಸ್ಯನಿಗೆ ಚಪ್ಪಲಿ ಏಟು

Tumkuru News: ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ದಿನವೇ ಅಧ್ಯಕ್ಷೆ ನಿಧನ; ಮತ್ತೊಂದೆಡೆ ಮತ ಹಾಕದಿದ್ದಕ್ಕೆ ಸದಸ್ಯನಿಗೆ ಚಪ್ಪಲಿ ಏಟು

ತುಮಕೂರಿನ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಅಧ್ಯಕ್ಷೆ ರಮ್ಯಾ ಮಂಜುನಾಥ್‌ ನಿಧನರಾಗಿದ್ದಾರೆ. ಇತ್ತ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಪಂ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಮಹಿಳಾ ಸದಸ್ಯೆಯೊಬ್ಬರು ಸದಸ್ಯ ಮಂಜುನಾಥ್‌ ಎಂಬುವವರಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ.

ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯಿತಿ  ಚುನಾವಣೆ ವೇಳೆ ನಿಧನರಾದ ಗ್ರಾಪಂ ಅಧ್ಯಕ್ಷೆ ರಮ್ಯಾ ಮಂಜುನಾಥ್, ಮತ ಹಾಕಲಿಲ್ಲ ಎಂಬ ಕಾರಣಕ್ಕೆ ದಬ್ಬೇಘಟ್ಟ ಗ್ರಾಪಂನ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ ಸುಧಾ ಮಹೇಶ್‌ ಅವರಿಂದ ಚಪ್ಪಲಿ ಏಟು ತಿಂದ ಸದಸ್ಯ ಮಂಜುನಾಥ್‌
ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಿಧನರಾದ ಗ್ರಾಪಂ ಅಧ್ಯಕ್ಷೆ ರಮ್ಯಾ ಮಂಜುನಾಥ್, ಮತ ಹಾಕಲಿಲ್ಲ ಎಂಬ ಕಾರಣಕ್ಕೆ ದಬ್ಬೇಘಟ್ಟ ಗ್ರಾಪಂನ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ ಸುಧಾ ಮಹೇಶ್‌ ಅವರಿಂದ ಚಪ್ಪಲಿ ಏಟು ತಿಂದ ಸದಸ್ಯ ಮಂಜುನಾಥ್‌

Tumkuru News: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು, ಚುನಾವಣೆ ಕೆಲವು ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಗ್ರಾಮದ ಅಧ್ಯಕ್ಷರ ಚುನಾವಣೆ ದಿನವೇ ಅಧ್ಯಕ್ಷರಾಗಿ ಆಯ್ಕೆಯಾದ ರಮ್ಯ ಎಂಬುವವರು ನಿಧನರಾದರೆ, ಇನ್ನೊಂದು ಪ್ರಕರಣದಲ್ಲಿ ಮತದಾನ ಮಾಡಲಿಲ್ಲ ಎಂಬ ಕಾರಣಕ್ಕೆ ಸದಸ್ಯೆಯೊಬ್ಬರು ಸದಸ್ಯನಿಗೆ ಚಪ್ಪಲಿಯಲ್ಲಿ ಹೊಡದ ಆರೋಪವೂ ಕೇಳಿ ಬಂದಿದೆ.

ಮತ ಚಲಾಯಿಸಿಲ್ಲವೆಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಧಾ ಎಂಬುವರು ಚುನಾವಣಾ ಕೊಠಡಿಯಲ್ಲಿ ಚಪ್ಪಲಿಯಲ್ಲಿ ಹೊಡೆದರು ಎಂದು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಪಂ ಸದಸ್ಯ ಮಂಜುನಾಥ್ ಆರೋಪಿಸಿದ್ದಾರೆ.

ಚಪ್ಪಲಿಯಿಂದ ಗ್ರಾಪಂ ಸದಸ್ಯನಿಗೆ ಹೊಡೆತ

ಘಟನೆ ಬಗ್ಗೆ ಮಾತನಾಡಿರುವ ಗ್ರಾಪಂ ಸದಸ್ಯ ಮಂಜುನಾಥ್‌, ದಬ್ಬೇಘಟ್ಟ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಗೂರಲಮಠ ಕ್ಷೇತ್ರದ ಛಾಯಾ ಈಶ್ವರ್ ಹಾಗೂ ಬೆನಕನಕೆರೆ ಕ್ಷೇತ್ರದ ಸುಧಾ ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜಾ ಹಾಗೂ ತಾಯಮ್ಮ ಸ್ಪರ್ಧಿಸಿದ್ದರು.

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಮತ ಎಣಿಕೆ ವೇಳೆ ಛಾಯಾ ಈಶ್ವರ್ ಗೆಲುವು ಸಾಧಿಸಿದ್ದರು. ಪರಾಭವಗೊಂಡ ಸುಧಾ ಅವರು ನನ್ನನ್ನು ಎಲ್ಲ ಸದಸ್ಯರ ಸಮ್ಮುಖದಲ್ಲಿ ಚಪ್ಪಲಿಯಿಂದ ಹೊಡೆದರು. ಈ ವೇಳೆ ಸಹ ಸದಸ್ಯ ಕುಮಾರ್ ನನ್ನನ್ನು ಬಿಡಿಸಿಕೊಂಡರು. ಚಪ್ಪಲಿಯಲ್ಲಿ ಹೊಡೆತ ತಿಂದ ನನಗೆ ಮಾನಸಿಕವಾಗಿ ತುಂಬಾ ನೋವಾಗಿದೆ ಎಂದು ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡುವುದಾಗಿಯೂ ಹೇಳಿದ್ದಾರೆ.

ಚುನಾವಣೆ ದಿನವೇ ಅಧ್ಯಕ್ಷೆ ರಮ್ಯ ನಿಧನ

ಗ್ರಾಪಂ ಅಧ್ಯಕ್ಷರ ಚುನಾವಣೆಯ ದಿನವೇ ಗ್ರಾಪಂ ಅಧ್ಯಕ್ಷೆ ನಿಧನರಾಗಿರುವ ಆಘಾತಕಾರಿ ಸುದ್ದಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ. ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷೆ ರಮ್ಯ ಮಂಜುನಾಥ್ (30) ನಿಧನರಾದವರು.

ಇದೇ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಇನ್ನೇನು ಚುನಾವಣೆ ನಡೆಯಬೇಕು ಎನ್ನುವಷ್ಟರಲ್ಲಿ ಅಧ್ಯಕ್ಷರಾಗಬೇಕಿದ್ದ ರಮ್ಯ ಅವರು ಎದೆ ನೋವು ಎಂದು ಕುಸಿದು ಬಿದ್ದರು. ತಕ್ಷಣ ದೊಡ್ಡಎಣ್ಣೇಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದ ಕಾರಣ, ಚಿಕ್ಕನಾಯಕನ ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.

ನೂತನ ಅಧ್ಯಕ್ಷರಾಗಿ ತಾಯಮ್ಮ ಆಯ್ಕೆ

ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಚಿಕ್ಕಎಣ್ಣೇಗೆರೆಯ ತಾಯಮ್ಮ ಆಯ್ಕೆಯಾಗಿದ್ದಾರೆ. 21 ಸದಸ್ಯರಿರುವ ಈ ಪಂಚಾಯ್ತಿಯಲ್ಲಿ ಅಧ್ಯಕ್ಷೆ ರಮ್ಯ ಅವರು ನಿಧನರಾಗಿದ್ದರಿಂದ 20 ಮಂದಿ ಮತದಾನ ಮಾಡಿದರು. ತಮ್ಮ ಪ್ರತಿಸ್ಪರ್ಧಿ ರತ್ನಮ್ಮ ಅವರಿಗಿಂತ 2 ಮತ ಹೆಚ್ಚು ಪಡೆಯುವ ಮೂಲಕ ತಾಯಮ್ಮ 2 ನೇ ಅವಧಿಯ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡುವನಹಳ್ಳಿ ಲಿಂಗರಾಜು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

Whats_app_banner