HD Kumaraswamy: ಶೆಟ್ಟರ್ ಮುಗಿಸಲು ಯಡಿಯೂರಪ್ಪ ಹೊರಟಿರುವುದು ಹಾಸ್ಯಾಸ್ಪದ; ಹೆಚ್‌ಡಿ ಕುಮಾರಸ್ವಾಮಿ
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿದ್ದಾರೆ. ದೇವೇಗೌಡರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿ ಎಂದು ಹೆಚ್‌ಡಿಕೆ ಕರೆ ನೀಡಿದ್ದಾರೆ.
ತುಮಕೂರು: ಜಗದೀಶ್ ಶೆಟ್ಟರ್ ಮುಗಿಸಲು ಯಡಿಯೂರಪ್ಪ ಹೊರಟಿರುವುದು ಹಾಸ್ಯಾಸ್ಪದ. ಹಾಗಿದ್ದರೆ, 2005-06ರಲ್ಲಿ ಇದೇ ಯಡಿಯೂರಪ್ಪ ಅವರು ನಮ್ಮ ಬಳಿಗೆ ಬಂದು ಸಚಿವ ಸ್ಥಾನ ಕೇಳಿದ್ದು ಸುಳ್ಳಾ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಇಂದು(ಗುರುವಾರ, ಏಪ್ರಿಲ್ 27) ಕಾಂಗ್ರೆಸ್‌ನ ಮಾಜಿ ಶಾಸಕ ಷಫಿ ಅಹಮದ್ ಮತ್ತು ಬೆಂಬಲಿಗರು ಜೆಡಿಎಸ್ ಸೇರ್ಪಡೆಗೊಂದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯವರು ಹಿಂದುಳಿದವರ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡು ಮತ ಕೇಳುತ್ತಿದ್ದಾರೆ. ಇವರ ಬಗ್ಗೆ ಎಚ್ಚರ ವಹಿಸಿ ಎಂದು ಕರೆ ನೀಡಿದರು.
ಮೂರು ದಿನಕ್ಕೆ ಒಂದು ಮನೆ ಕಟ್ಟುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಅದು ಎಲ್ಲಿ ಕಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು. ರಾಜ್ಯದ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆ ಹಾಕಿಕೊಂಡಿದ್ದೇನೆ. ನನ್ನ ಕೈ ಬಲಪಡಿಸಿ, ನಾನು ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುವೆ ಎಂದರು.
ರಾಜ್ಯಕ್ಕೆ ಯೋಗಿ, ಮೋದಿ, ನಡ್ಡಾ ಸೇರಿ ಹಲವರು ಬಂದು ರೋಡ್ ಶೋ ಮಾಡುತ್ತಿದ್ದಾರೆ. ಮಂಡ್ಯಕ್ಕೂ ಮೋದಿಗೂ ಏನು ಸಂಬಂಧ? ಬುಲ್ಡೋಜರ್ ಯೋಗಿಯಿಂದ ರಾಜ್ಯದ ಜನರಿಗೆ ಏನು ಉಪಯೋಗ ಎಂದು ಪ್ರಶ್ನಿಸಿದರು. ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳು ಜನರನ್ನು ವಂಚಿಸುತ್ತಿವೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ನೂರಾ ಇಪ್ಪತ್ತು ಸೀಟು ಗಳಿಸುವ ವಿಶ್ವಾಸವಿದೆ. ಜನರು ಹಾಗೂ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ತುಮಕೂರು ಜಿಲ್ಲೆಯಲ್ಲಿ ಹನ್ನೊಂದು ಸ್ಥಾನ ಗೆಲ್ಲಲಿದ್ದೇವೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಜೆಡಿಎಸ್ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಾನು ರೈತರ ಸಾಲ ಮನ್ನಾ ಮಾಡಿದೆ. ಅಲ್ಲಿ ನಾನು ಯಾವುದೇ ಪರ್ಸೆಂಟೇಜ್ ಪಡೆಯಲಿಲ್ಲ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿದ್ದಾರೆ. ದೇವೇಗೌಡರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿ. ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ದೇವೇಗೌಡರು ಜಗ್ಗದೆ, ಕುಗ್ಗದೆ ಪಕ್ಷ ಕಟ್ಟಿದ್ದಾರೆ. ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಮೊದಲ ಕನ್ನಡಿಗ ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಯಾಕೆ ಕೆಳಗಿಸಿದ್ರಿ ಹೇಳಿಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದರು.
ಬಿಜೆಪಿಯವರು ಏರ್ ಇಂಡಿಯಾ ಮಾರಿದ್ದಾರೆ. ನಾನು ವಿಮಾನಯಾನ ಸಚಿವನಾಗಿದ್ದಾಗ ಐವತ್ತು ಕೋಟಿ ಲಾಭ ಮಾಡಿದ್ದೆ. ಆದರೆ ದೇಶವನ್ನೇ ಅವರು ಮಾರುವ ಸ್ಥಿತಿಗೆ ತಂದಿದ್ದಾರೆ. ದೊಡ್ಡ ಗಿಡ ಕತ್ತರಿಸಿ ಚಿಕ್ಕ ಗಿಡ ನೆಡೋದು ಕಾಂಗ್ರೆಸ್ ಸಂಸ್ಕೃತಿ. ಜಾಫರ್ ಷರೀಫ್, ಗುಲಾಮ್ ನಬಿ ಅಜಾದ್‌ರಂಥವರನ್ನೇ ಅವರು ಬಿಡಲಿಲ್ಲ. ಇನ್ನು ಅವರಿಗೆ ಷಫಿ ಅಹಮದ್ ಯಾವ ಲೆಕ್ಕ ಎಂದು ಕಿಡಿಕಾರಿದರು.
ಜೆಡಿಎಸ್ ರೈತರ ಪಕ್ಷ. ಒಂದು ಬೀಜ ಬಿತ್ತಿ ನೂರು ಗಿಡ ಬೆಳೆಸುತ್ತೆ. ಆದರೆ ಕಾಂಗ್ರೆಸ್ ಜಾಗೂ ಬಿಜೆಪಿ ಯಾರನ್ನೂ ಬೆಳೆಸಲ್ಲ. ಬಿಜೆಪಿ ಇಂದು ಬಿಜೆಪಿಯಾಗಿ ಉಳಿದಿಲ್ಲ. ಪಂಜಾಬ್‌ನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ. ಇಂಥ ದೇವೇಗೌಡರನ್ನು ತುಮಕೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್‌ನಲ್ಲಿ ಸ್ಥಾನ ಇಲ್ಲದಿದ್ದರೂ ಮಾನ ಇದೆ. ಕಾಂಗ್ರೆಸ್‌ನಲ್ಲಿ ಸ್ಥಾನವೂ ಇಲ್ಲ, ಮಾನವೂ ಇಲ್ಲ ಎಂದು ಟೀಕಿಸಿದರು.