ತುಮಕೂರಿನ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರದ ಶಾಸನ ಪತ್ತೆ, ಶಾರದಾ ಸ್ತುತಿಯಿಂದ ಆರಂಭವಾಗುವ ಶಾಸನದಲ್ಲೇನಿದೆ?-tumkuru news vijayanagar period copper inscription discovered in madhugiri alagi sanskrit and telugu language ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರದ ಶಾಸನ ಪತ್ತೆ, ಶಾರದಾ ಸ್ತುತಿಯಿಂದ ಆರಂಭವಾಗುವ ಶಾಸನದಲ್ಲೇನಿದೆ?

ತುಮಕೂರಿನ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರದ ಶಾಸನ ಪತ್ತೆ, ಶಾರದಾ ಸ್ತುತಿಯಿಂದ ಆರಂಭವಾಗುವ ಶಾಸನದಲ್ಲೇನಿದೆ?

ತುಮಕೂರಿನ ಮಧುಗಿರಿಯ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರ ಶಾಸನವೊಂದು ಪತ್ತೆಯಾಗಿದೆ. ಸಂಸ್ಕೃತ ಶ್ಲೋಕದಿಂದ ಆರಂಭವಾಗುವ ಈ ಶಾಸನವು ಒಟ್ಟು 49 ಸಾಲುಗಳಿಂದ ಕೂಡಿದೆ. ಈ ಶಾಸನದಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ. (ವರದಿ: ಈಶ್ವರ್‌ ಎಂ. )

ತುಮಕೂರಿನ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರದ ಶಾಸನ ಪತ್ತೆ, ಶಾರದಾ ಸ್ತುತಿಯಿಂದ ಆರಂಭವಾಗುವ ಶಾಸನದಲ್ಲೇನಿದೆ?
ತುಮಕೂರಿನ ಅಗಳಿಯಲ್ಲಿ ವಿಜಯನಗರ ಕಾಲದ ತಾಮ್ರದ ಶಾಸನ ಪತ್ತೆ, ಶಾರದಾ ಸ್ತುತಿಯಿಂದ ಆರಂಭವಾಗುವ ಶಾಸನದಲ್ಲೇನಿದೆ?

ತುಮಕೂರು: ಮಧುಗಿರಿ ತಾಲ್ಲೂಕಿನ ಗಡಿಭಾಗದ ಅಗಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದ ಹರತಿ-ನಿಡುಗಲ್ ಪಾಳೇಗಾರ ದೇವಪ್ಪನಾಯಕನ ಕಾಲದ ತಾಮ್ರ ಶಾಸನ ಪತ್ತೆಯಾಗಿದೆ, ಈ ಶಾಸನವನ್ನು ಅಗಳಿಯ ಗ್ರಾಮಸ್ಥರಾದ ಸದಾಶಿವಯ್ಯ ಅವರು ಸಂರಕ್ಷಿಸಿಟ್ಟುಕೊಂಡಿದ್ದಾರೆ.

ಇದನ್ನು ತಾಮ್ರಲೋಹದ ಹಲಗೆಯ ಎರಡೂ ಮುಖದಲ್ಲಿ ಕನ್ನಡ ಲಿಪಿಯಲ್ಲಿ ಬರೆದಿದ್ದರೂ ಭಾಷೆ ಮಾತ್ರ ಸಂಸ್ಕೃತ ಮತ್ತು ತೆಲುಗು ಆಗಿದೆ. ಈ ತಾಮ್ರ ಶಾಸನವು ಒಟ್ಟು 49 ಸಾಲುಗಳಿಂದ ಕೂಡಿದೆ ಎಂದು ತುಮಕೂರಿನ ಇತಿಹಾಸ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ತಿಳಿಸಿದ್ದಾರೆ.

ಈ ತಾಮ್ರ ಶಾಸನವನ್ನು ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದ್ದು ವಿಜಯ ನಗರದ ಚಕ್ರವರ್ತಿ ಬುಕ್ಕರಾಯನನ್ನು (1399- 1406) ಉಲ್ಲೇಖಿಸುತ್ತದೆ. ಶಾರದಾ ಸ್ತುತಿಯಿಂದ ಆರಂಭವಾಗುವ ಈ ಶಾಸನವು ಸಂಸ್ಕೃತ ಶ್ಲೋಕಗಳಿಂದ ಕೂಡಿದ್ದು ಅನಂತರ ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ ಎಂದಿದ್ದಾರೆ.

ಈ ತಾಮ್ರ ಶಾಸನವು ಅಗಳಿ ಗ್ರಾಮದ ಶಂಕರೇಶ್ವರ ದೇವರಿಗೆ ಸಂಬಂಧಪಟ್ಟಿದ್ದಾಗಿದ್ದು ಹರತಿ- ನಿಡುಗಲ್ ಪಾಳೇಗಾರರ ವಂಶದವನಾದ ದೇವಪ್ಪನಾಯಕನು ತನ್ನ ರಾಜ್ಯಕ್ಕೆ ಸೇರಿದ್ದ ಅಗಳಿಯ ಶಂಕರೇಶ್ವರ ದೇವರಿಗೆ ದೇವಮಾನ್ಯವಾಗಿ ಆ ಊರಿಗೆ ಸೇರಿದ್ದ ಕೆರೆ, ಕಟ್ಟೆ, ಕುಂಟೆ, ಬಾವಿ, ಹೊಲ, ಗದ್ದೆಯ ಜೊತೆಗೆ ಆ ಊರಿನ ಜನರಿಂದ ಸಂಗ್ರಹವಾದ ತೆರಿಗೆಯನ್ನು ದಾನ ಮಾಡಿದ್ದನು. ಈ ದಾನವನ್ನು ಆತ ಆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿದ್ದ ಹದಿನೆಂಟು ಜನರಿಗೆ ಒಂದೊಂದು ವೃತ್ತಿಯನ್ನಾಗಿ ವಿಂಗಡಿಸಿ ನೀಡಿದನೆಂದು ಉಲ್ಲೇಖಿಸಲಾಗಿದೆ.

ಅನಂತರ ಈ ದಾನವನ್ನು ಮತ್ತೆ ಹದಿಮೂರು ಜನರಿಗೆ ವಿಸ್ತರಿಸಿ ನೀಡಿದ್ದನ್ನು ದಾಖಲಿಸಿರುವುದರಿಂದ ಅದಕ್ಕೆ ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದೆ. ಅದನ್ನು ಪಡೆದವರೆಂದರೆ ತೆಲುಗು ಬಣಜಿಗ ಮದನ ಗೌಡ (ಗೌಡ), ವುಳಿ ಕುಂಚಿಟಿಗ ರಂಗನ ಗೌಡ (ಪಟೇಲ), ಕರಣಂಭದ್ರಪ್ಪ (ಶ್ಯಾನುಭೋಗ), ಜಾಯಸ್ಯ ನಾರಾಯಣ ಭಟ್ಟ (ಜ್ಯೋತಿಷ), ತಲಾರ ಮಾಧ (ಪಹರೆ, ತಳವಾರ), ಕಮ್ಮಾರ ಚನ್ನಯ್ಯ, ಬಡಗಿ ಕೆಂಪಯ್ಯ, ಚಾಕಲ ಚನ್ನ (ಅಕ್ಕಸಾಲಿ), ಮಂಗಳ ಭದ್ರ (ನಾಯಿಂದ), ಅಂಗಜಾಲ ಕೊಂಡ (ರಕ್ಷಕ), ಕುಂಬಾರ ಮಲ್ಲ 12, ತೋಟಿ ಕದ್ರಿ (ಸೇವಕ, ಜಾಡಮಾಲಿ), ಎಡಗೈ ಓಬ ಇವರೆಲ್ಲ ದೇವರ ಕಾರ್ಯವನ್ನು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಹೋಗಬೇಕೆಂದು ಮಧನಗೌಡ, ವುಳಿ ರಂಗನಗೌಡನ ಹೆಸರಿನಲ್ಲಿ ಹೆಚ್ಚಿನ ಜಯ ಪತ್ರಿಕೆಯನ್ನು ಬರೆದು ಕೊಡಲಾಗಿದೆ.

ಈಗಲೂ ಸಹ ಆ ಊರಿನಲ್ಲಿ ಮಹಾನವಮಿ ಹಬ್ಬದ ಸಂದರ್ಭದಲ್ಲಿ ತಾಮ್ರ ಶಾಸನದಲ್ಲಿ ತಿಳಿಸಿರುವ ವ್ಯಕ್ತಿಗಳ ವಂಶಸ್ಥರು ಶಂಕರೇಶ್ವರ ದೇವಾಲಯದ ಆವರಣದಲ್ಲಿ ಸಭೆ ಸೇರಿ ಮಹಾ ನವಮಿಯ (ದಸರಾ ಹಬ್ಬ) ಒಂಭತ್ತು ದಿನದ ಧಾರ್ಮಿಕ ಆಚರಣೆಯ ಬಗ್ಗೆ ಚರ್ಚಿಸಿ ತಮಗೆ ನಿಗದಿಯಾಗಿರುವ ಸೇವೆ ಮಾಡುತ್ತಿದ್ದಾರೆ. ಈಗ ಇವರನ್ನೆಲ್ಲಾ ದೇವರ ಕೈವಾಡದವರು ಎಂದು ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಪರಂಪರೆ ಆ ಊರಿನಲ್ಲಿ ಈಗಲೂ ಮುಂದುವರಿಯುತ್ತಿರುವುದು ವಿಶೇಷವಾಗಿದೆ.