ತುಂಗಭದ್ರಾ ಡ್ಯಾಂ ಗೇಟ್‌ ಮುರಿದು ನದಿಗೆ ಹರಿಯುತ್ತಿದೆ ಅಪಾರ ನೀರು; ಕಟ್ಟೆಚ್ಚರ ವಹಿಸಲು ನದಿಪಾತ್ರದ ಜನರಿಗೆ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ತುಂಗಭದ್ರಾ ಡ್ಯಾಂ ಗೇಟ್‌ ಮುರಿದು ನದಿಗೆ ಹರಿಯುತ್ತಿದೆ ಅಪಾರ ನೀರು; ಕಟ್ಟೆಚ್ಚರ ವಹಿಸಲು ನದಿಪಾತ್ರದ ಜನರಿಗೆ ಸೂಚನೆ

ತುಂಗಭದ್ರಾ ಡ್ಯಾಂ ಗೇಟ್‌ ಮುರಿದು ನದಿಗೆ ಹರಿಯುತ್ತಿದೆ ಅಪಾರ ನೀರು; ಕಟ್ಟೆಚ್ಚರ ವಹಿಸಲು ನದಿಪಾತ್ರದ ಜನರಿಗೆ ಸೂಚನೆ

ನದಿಯಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ಇರುವ ಜನರು ಎಚ್ಚರ ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ. ಪ್ರಸ್ತುತ ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಗೇಟ್‌ ಮುರಿದು ನದಿಗೆ ಅಪಾರ ನೀರು ಹರಿಯುತ್ತಿದೆ.
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಗೇಟ್‌ ಮುರಿದು ನದಿಗೆ ಅಪಾರ ನೀರು ಹರಿಯುತ್ತಿದೆ.

ಬೆಂಗಳೂರು: ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್‌ (19ನೇ ಗೇಟ್) ಮುರಿದು ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ಇರುವ ಜನರು ಎಚ್ಚರ ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ. ಪ್ರಸ್ತುತ ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ನೀರು ಹರಿಸುವ ಪ್ರಮಾಣ 2.50 ಲಕ್ಷ ಕ್ಯೂಸೆಕ್‌ಗೆ ಹೆಚ್ಚಾದರೆ ಪ್ರವಾಹದ ಭೀತಿ ಆವರಿಸಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತುಂಗಭದ್ರಾ ಜಲಾಶಯದಲ್ಲಿ ಒಟ್ಟು 29 ಗೇಟ್‌ಗಳಿವೆ. ನದಿಗೆ ಪ್ರಸ್ತುತ 90 ಸಾವಿರದಿಂದ 1 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿಸಲಾಗುತ್ತಿದೆ. ಕೊಚ್ಚಿಹೋಗಿರುವ 19ನೇ ಗೇಟ್‌ ಜಾಗದಲ್ಲಿ ಹೊಸದೊಂದು ಗೇಟ್ ಅಳವಡಿಸುವ ಕೆಲಸ ಆರಂಭಿಸುವ ಉದ್ದೇಶದಿಂದ ಜಲಾಶಯದಲ್ಲಿ ನೀರು ಕಡಿಮೆ ಮಾಡಬೇಕಾಗಿದೆ. ಹೀಗಾಗಿ ನದಿಗೆ 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿಸುವ ಸಾಧ್ಯತೆ ಕುರಿತು 'ತುಂಗಭದ್ರಾ ಜಲಾಶಯ ಮಂಡಳಿ' (ಟಿಬಿ ಡ್ಯಾಂ ಬೋರ್ಡ್) ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಅಣೆಕಟ್ಟೆಯ ಸುರಕ್ಷೆ ಕಾಪಾಡುವ ದೃಷ್ಟಿಯಿಂದ ಬದಲಿ ಗೇಟ್ ಅಳವಡಿಕೆ ಕೆಲಸವನ್ನು ಶೀಘ್ರ ಆರಂಭಿಸಬೇಕಿದೆ. ಹೀಗಾಗಿ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಬೇಕಾಗಬಹುದು. ನದಿಗೆ 2 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದ ನೀರು ಹರಿಸಿದರೆ ಮಾತ್ರ ಅಪಾಯ ಎದುರಾಗಬಹುದು. ಸದ್ಯಕ್ಕೆ ಅಂಥ ಪರಿಸ್ಥಿತಿಯಿಲ್ಲ. ಜನರು ಆತಂಕಕ್ಕೆ ಒಳಗಾಗಬಾರದು' ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಮತ್ತಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)

Whats_app_banner