ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿಹೋದ ಗೇಟ್: ಏನಿದು ಚೈನ್ ಲಿಂಕ್? ಗೇಟ್ ತುಂಡಾಗಲು ಏನು ಕಾರಣ? ರಿಪೇರಿ ಹೇಗೆ? -ನೀವು ತಿಳಿಯಬೇಕಾದ 6 ಅಂಶಗಳಿವು
ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ಒಂದು ನದಿಗೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಲಾಗುತ್ತಿದೆ. ದುರಸ್ತಿಗಾಗಿ ಜಲಾಶಯದ ನೀರು ಖಾಲಿ ಮಾಡಬೇಕಾಗಿದೆ. ಟಿಬಿ ಡ್ಯಾಂ ಕ್ರೆಸ್ಟ್‌ಗೇಟ್ ಕೊಚ್ಚಿದ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗಿನ 6 ಅತಿಮುಖ್ಯ ಬೆಳವಣಿಗೆಗಳು ಇಲ್ಲಿದೆ.
ಬೆಂಗಳೂರು: ರಾಜ್ಯದ ಬೃಹತ್ ಜಲಾಶಯಗಲ್ಲಿ ಒಂದಾಗಿರುವ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಭಾರೀ ಅವಘಡ ಸಂಭವಿಸಿದೆ. ಕ್ರೆಸ್ಟ್‌ಗೇಟ್ ಒಂದು ನದಿಗೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಕೆಳ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ. ದುರಸ್ತಿಗಾಗಿ ಜಲಾಶಯದ ನೀರು ಖಾಲಿ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ಬೆಳೆ ನಿರ್ವಹಣೆ ಹೇಗೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಟಿಬಿ ಡ್ಯಾಂ ಕ್ರೆಸ್ಟ್‌ಗೇಟ್ ಕೊಚ್ಚಿದ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗಿನ 6 ಅತಿಮುಖ್ಯ ಬೆಳವಣಿಗೆಗಳು ಇಲ್ಲಿದೆ.
1) ಜಲಾಶಯದಲ್ಲಿ ಎಷ್ಟಿತ್ತು ನೀರು?
1,633 ಅಡಿ ಎತ್ತರದಷ್ಟು ನೀರು ನಿಲ್ಲುವ ತುಂಗಭದ್ರಾ ಜಲಾಶಯವು ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದು. ಪ್ರಸ್ತುತ ಜಲಾಶಯವು ಭರ್ತಿಯಾಗಿದ್ದು, 105.78 ಟಿಎಂಸಿಯಷ್ಟು (ಪೂರ್ಣ ಸಾಮರ್ಥ್ಯಕ್ಕೆ) ನೀರು ನಿಂತಿತ್ತು. ಶನಿವಾರದ (ಆಗಸ್ಟ್ 10) ಒಳಹರಿವು 40,925 ಕ್ಯೂಸೆಕ್ ಇತ್ತು. ಜಲಾಶಯಕ್ಕೆ 28,133 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿತ್ತು. ಆಗಸ್ಟ್ 11 ರ ತಡರಾತ್ರಿಯಲ್ಲಿ 19 ನೇ ಗೇಟ್ ತುಂಡಾಗಿದ್ದರಿಂದ ಏಕಾಏಕಿ ಅದೊಂದೇ ಗೇಟ್‌ನತ್ತು ಹೆಚ್ಚಿನ ನೀರು ರಭಸವಾಗಿ ನುಗ್ಗಿತು. ಮತ್ತೇನಾದರೂ ಅನಾಹುತವಾದೀತು ಎನ್ನುವ ಮುನ್ನೆಚ್ಚರಿಕೆಯಿಂದ ಅಧಿಕಾರಿಗಳು ಇತರ ಗೇಟ್‌ಗಳನ್ನು ತೆರೆದು ನೀರಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿದರು. ಪ್ರಸ್ತುತ ಜಲಾಶಯದ ಹೊರಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ.
2) ಗೇಟ್ ಕುಸಿಯಲು ಏನು ಕಾರಣ? ಏನಿದು ಚೈನ್ ಲಿಂಕ್?
ತುಂಗಭದ್ರಾ ಜಲಾಶಯ ಯೋಜನೆಯು 1953 ರಲ್ಲಿ ಪೂರ್ಣಗೊಂಡಿತು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಜಲಾಶಯದ ಆಡಳಿತ ಮತ್ತು ನಿರ್ವಹಣೆಯ ಜವಾವ್ದಾರಿ ಹೊತ್ತುಕೊಂಡಿವೆ. ಇದೀಗ ತುಂಡಾಗಿರುವ ಚೈನ್‌ಲಿಂಕ್ ಗೇಟ್ ಅನ್ನು 70 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಒಂದು ಕಬ್ಬಿಣದ ಹಲಗೆಯನ್ನು ಮತ್ತೊಂದು ಕಬ್ಬಿಣದ ಹಲಗೆಗೆ ಬೆಸುಗೆ (ವೆಲ್ಡಿಂಗ್) ಹಾಕಿ ಚೈನ್ ಲಿಂಕ್ ಗೇಟ್ ರೂಪಿಸಲಾಗುತ್ತದೆ. ಇಂಥ ಬೆಸುಗೆ ಸಡಿಲವಾದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
3) ರಿಪೇರಿ ಕಾಮಗಾರಿ ಹೇಗೆ ನಡೆಯುತ್ತೆ?
ತುಂಗಭದ್ರಾ ಜಲಾಶಯದತ್ತ ಈಗಾಗಲೇ ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳಿಂದ ತಜ್ಞರ ತಂಡ ದೌಡಾಯಿಸಿದೆ. ತುಂಡಾಗಿರುವ ಜಲಾಶಯದ ಗೇಟ್ ನದಿಯಲ್ಲಿ ಕೊಚ್ಚಿ ಹೋಗಿದೆ. ಜಲಾಶಯಕ್ಕೆ ಇದೀಗ ಹೊಸ ಕ್ರಸ್ಟ್‌ಗೇಟ್ ಅಳವಡಿಸಬೇಕಾಗುತ್ತದೆ. ಈ ಗೇಟ್‌ನ ಎತ್ತರ 60 ಅಡಿ, ಅಗಲ 20 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ. 12 ಅಡಿ ಎತ್ತರದ 5 ಕಬ್ಬಿಣದ ಹಲಗೆಗಳನ್ನು ಜೋಡಿಸಿ, ಬೆಸುಗೆ ಹಾಕಿ ಈ ಗೇಟ್ ರೂಪಿಸಲು ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
4) ಯಾವೆಲ್ಲ ಜಿಲ್ಲೆಗಳಿಗೆ ಸಮಸ್ಯೆ
ಜಲಾಶಯದ ನೀರಿನ ಮಟ್ಟ ಕಡಿಮೆಯಾಗದೆ ದುರಸ್ತಿ ಕಾಮಗಾರಿ ಆರಂಭಿಸಲು ಸಾಧ್ಯವಾಗುವುದಿಲ್ಲ. ಆದರೆ ನೀರು ಖಾಲಿಯಾಗಿ ಮತ್ತೆ ಮಳೆಯಾಗದಿದ್ದರೆ ಜಲಾಶಯವು ಭರ್ತಿಯಾಗುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಒದಗಿಸುವುದು ಹೇಗೆ ಎಂಬ ಪ್ರಶ್ನೆ ನದಿ ನೀರನ್ನು ಆಶ್ರಯಿಸಿರುವ ರೈತರನ್ನು ಕಾಡುತ್ತಿದೆ. ಕರ್ನಾಟಕದ ಬಳ್ಳಾರಿ, ರಾಯಚೂರು ಆಂಧ್ರ ಪ್ರದೇಶದ ಕಡಪ, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳಿಗೆ ಈ ತುಂಗಭದ್ರಾ ಜಲಾಶಯದ ನೀರು ಒದಗಿಸಲಾಗುತ್ತಿದೆ. ಇದೀಗ ಡ್ಯಾಂನ ಗೇಟ್ ತುಂಡಾಗಿರುವುದರಿಂದ ಕರ್ನಾಟಕವಷ್ಟೇ ಅಲ್ಲ, ನೆರೆಯ ಆಂಧ್ರ ಪ್ರದೇಶದಲ್ಲಿಯೂ ಜನರು ಆತಂಕ ಎದುರಿಸುತ್ತಿದ್ದಾರೆ.
5) ಜಲಾಶಯದತ್ತ ಡಿ.ಕೆ.ಶಿವಕುಮಾರ
ಕರ್ನಾಟಕ ಸರ್ಕಾರದ ಬೃಹತ್ ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಆಂಧ್ರ ಪ್ರದೇಶ ಹಣಕಾಸು ಸಚಿವ ಪಯ್ಯಾವುಳ ಕೇಶವ್ ಅವರು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
6) ಜಲಾಶಯದಲ್ಲಿ 2ನೇ ಅನಾಹುತ
ತುಂಗಭದ್ರಾ ಜಲಾಶಯದಲ್ಲಿ ಇದು 2ನೇ ಅನಾಹುತ ಎನಿಸಿದೆ. ಐದು ವರ್ಷಗಳ ಹಿಂದೆ, ಅಂದರೆ 2019 ರಲ್ಲಿ ಜಲಾಶಯದ ಎಡದಂಡೆ ಕಾಲುವೆಯ ಗೇಟ್ ತುಂಡಾಗಿತ್ತು. ಆಗ ಕಾಲುವೆಗೆ ನೀರು ದೊಡ್ಡಮಟ್ಟದಲ್ಲಿ ಹರಿದು, ಮುನಿರಾಬಾದ್ ಪಟ್ಟಣಕ್ಕೂ ನೀರು ನುಗ್ಗಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಘಟನೆ ನಡೆದಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಭಾಗ