Tumkur News: ತುಮಕೂರು ಜಿಲ್ಲೆಯಲ್ಲಿ ಎತ್ತಿನ ಹೊಳೆ ಹೊಂಡಕ್ಕೆ ಬಿದ್ದ ಇಬ್ಬರು ಮಕ್ಕಳ ದುರ್ಮರಣ, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ಬಾಲಕರಿಬ್ಬರು ಎತ್ತಿನ ಹೊಳೆ ಕಾಮಗಾರಿಯ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.ವರದಿ: ಈಶ್ವರ್ ತುಮಕೂರು
ತುಮಕೂರು: ಮಕ್ಕಳು ಶಾಲೆಯಿಂದ ಬಂದವರೇ ಮನೆ ಬಳಿಯೇ ಇದ್ದ ಹೊಂಡದ ಬಳಿ ಆಟವಾಡಲು ಹೋಗಿದ್ದರು. ಆಳವಾದ ನೀರು ಅಲ್ಲಿ ನಿಂತಿದ್ದರಿಂದ ಅವರು ಜಾರಿ ಬಿದ್ದು ಅಲ್ಲಿಯೇ ಜೀವ ಕಳೆದುಕೊಂಡ ಘಟನೆಯಿದು. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ 4ನೇತರಗತಿ ವಿದ್ಯಾರ್ಥಿ ಮನೋಹರ್ (10) ಹಾಗೂ 2ನೇ ತರಗತಿ ವಿದ್ಯಾರ್ಥಿ ಯದುವೀರ್ (8) ಗ್ರಾಮದ ಪಕ್ಕದಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಕಾಮಗಾರಿಯ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಕ್ಕಳನ್ನು ಕಳೆದುಕೊಂಡ ತಂದೆ, ತಾಯಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು, ನಮಗೆ ಯಾವುದೇ ಸಂಧಾನ, ಹಣ ನೀಡುವುದು ಬೇಕಿಲ್ಲ, ನಮ್ಮ ಮಕ್ಕಳನ್ನು ಬದುಕಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಸ್ಥಳೀಯರ ಆಕ್ರೋಶ
ಈ ಕಾಮಗಾರಿ ಕೂಡಲೇ ನಿಲ್ಲಿಸಬೇಕು, ಈಗಾಗಲೇ 5 ಸಾವು ನಡೆದರು, ಸಂಬಂಧಪಟ್ಟ ಇಲಾಖೆಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಸುಮಾರು 40 ಅಡಿ ಆಳದಲ್ಲಿ ಕಾಮಗಾರಿ ನಡೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗದಲ್ಲಿ ಹಾದು ಹೋದರೆ ಕೆಳಭಾಗದಲ್ಲಿ ನಗರದಿಂದ ಗ್ರಾಮೀಣ ಭಾಗಕ್ಕೆ ಹಾದು ಹೋಗುವ ಮುಖ್ಯ ದ್ವಾರದಲ್ಲಿ ಬೈಪಾಸ್ ಹತ್ತಿರದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ, ಅಲ್ಲದೆ 4 ರಿಂದ 5 ಅಡಿ ಆಳದಲ್ಲಿ ಗುಂಡಿ ನಿರ್ಮಿಸಿದ್ದಾರೆ, ಹತ್ತಿರದಲ್ಲಿಯೇ ಸರ್ಕಾರಿ ಶಾಲೆ ಇರುವುದರಿಂದ ಮಕ್ಕಳು ಶಾಲೆ ಬಿಟ್ಟ ನಂತರ ನೋಡುವ ಕಾತುರದಲ್ಲಿ ಓಡಾಡುತ್ತಾರೆ, ಬಾಳಿ ಬದುಕಬೇಕಾದ ಮಕ್ಕಳ ಸಾವಿಗೆ ಎತ್ತಿನಹೊಳೆ ಕಾಮಗಾರಿಯೇ ಕಾರಣ ಎಂದು ದೂರಿದರು.
ಎಸ್ಪಿ ಭೇಟಿಗೆ ಪಟ್ಟು
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವವರೆಗೂ ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಹಠ ಹಿಡಿದರು, ಸ್ಥಳಕ್ಕೆ ಡಿವೈಎಸ್‌ಪಿ ವಿನಾಯಕ ಶಟೇಗೆರ ಆಗಮಿಸಿ ಯಾವುದೇ ಗಲಾಟೆ ಗದ್ದಲಗಳಿಗೆ ಅವಕಾಶ ನೀಡದೆ ಸೂಕ್ತ ಪೊಲೀಸ್ ಬಂದು ಬಸ್ತ್ ಮಾಡಿದ್ದರು, ಶಾಸಕ ಷಡಕ್ಷರಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಮಕ್ಕಳ ಶವಗಳನ್ನು ಹೊರ ತೆಗೆದರು.
ಸ್ಥಳಕ್ಕೆ ಎಸ್‌ಪಿ ದೌಡು
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಮಾತನಾಡಿ, ಗುರುವಾರ ಸಂಜೆ ಮಕ್ಕಳು ಶಾಲೆಗೆ ಹೋಗಿ ವಾಪಸ್ ಬಂದಿರದ ಕಾರಣ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ಕಂಪ್ಲೇಟ್ ನೀಡಿರುತ್ತಾರೆ, ಪ್ರಕರಣ ದಾಖಲಿಸಿಕೊಂಡಿದ್ದು ನಂತರ ಬೆಳಗ್ಗೆ ಮಕ್ಕಳು ಶವವಾಗಿ ಸಿಕ್ಕಿರುವುದು ಮಾಹಿತಿ ಸಿಕ್ಕಿರುತ್ತದೆ, ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸಾವಿನ ಬಗ್ಗೆ ಶಂಕೆ
ಮಕ್ಕಳು ನೀರಿಗೆ ಬಿದ್ದಿದ್ದರೆ ಕೈ ಕಾಲು ಸೆಟೆದು ಕೊಳ್ಳುತ್ತಿದ್ದವು, ಹೊಟ್ಟೆ ಊದಿಕೊಳ್ಳುತ್ತಿತ್ತು, ಆದರೆ ಎರಡು ಮಕ್ಕಳು ಮಲಗಿದಂತೆ ಕಾಣುತ್ತವೆ, ಕಾಮಗಾರಿಯಲ್ಲಿ ಕಬ್ಬಿಣದ ಪೀಸುಗಳು ಬಿದ್ದಿರುತ್ತವೆ, ಇದನ್ನು ತೆಗೆದುಕೊಂಡು, ಕಬ್ಬಿಣ ಕೊಳ್ಳುವವರಿಗೆ ಮಾರುವ ಆಸೆಯಿಂದ ಮಕ್ಕಳು ಇಲ್ಲಿ ಬರುತ್ತಾರೆ, ಕಾಮಗಾರಿಯವರು ಎದುರಿಸಿ ಅಥವಾ ಓಡಿಸಿಕೊಂಡು ಹೋಗುವಾಗ ನೀರಿಲ್ಲದ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿರುತ್ತಾರೆ, ನಂತರ ನೀರಿನ ಗುಂಡಿಗೆ ಹಾಕಿರಬಹುದು, ಸಾವಿನ ಬಗ್ಗೆ ಶಂಕೆ ಇದ್ದು ತನಿಖೆ ನಡೆಸಿದರೆ ಸತ್ಯಾಂಶ ತಿಳಿಯುತ್ತದೆ ಎನ್ನುವುದು ಸ್ಥಳೀಯರಾದ ನಾಗರಾಜು ಹೇಳುತ್ತಾರೆ.
ಡಿಕೆಶಿ ಸೂಚನೆ
ತಿಪಟೂರು ತಾಲೂಕಿನ ಹುಚ್ಚನಹಟ್ಟಿ ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಪ್ರದೇಶದಲ್ಲಿ ತೆಗೆದಿದ್ದ ಗುಂಡಿಯಲ್ಲಿ ಇಬ್ಬರು ಬಾಲಕರು ಬಿದ್ದು ಮೃತಪಟ್ಟ ವಿಷಯ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಘಟನಾ ಸ್ಥಳದಲ್ಲಿ ಏನಾಯಿತು ಎನ್ನುವ ಎಲ್ಲ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದಿದ್ದೇನೆ. ಸದ್ಯದಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವರದಿ: ಈಶ್ವರ್ ತುಮಕೂರು