ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ ಆರೋಪಿ ಸೆರೆ, ಒಂದೇ ದಿನದಲ್ಲಿ ಸೆರೆ ಸಿಕ್ಕ ವ್ಯಕ್ತಿ; ಮದ್ಯದ ಅಮಲಿನಲ್ಲಿ ಕೃತ್ಯ ಶಂಕೆ
Bangalore News: ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲನ್ನು ಕೊಯ್ದು ಅಮಾನೀಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಶನಿವಾರ ರಾತ್ರಿ ಹಸುಗಳ ಕೆಚ್ಚಲು ಕೊಯ್ದು ಭಾರೀ ವಿವಾದ ಹುಟ್ಟು ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ಬೆಂಗಳೂರು ನಗರ ಪೊಲೀಸರು ಆರೋಪಿಯನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಮಾನವೀಯ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾದ ನಂತರ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಹಿನ್ನೆಲೆಯಲ್ಲಿ ತಂಡ ರಚಿಸಿದ್ದ ಬೆಂಗಳೂರಿನ ಕಾಟನ್ ಪೇಟೆ ಠಾಣೆ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿಯೇ ಬಂಧಿಸಿದ್ದಾರೆ. ಬಿಹಾರದ ಚಂಪಾರಣ್ ಜಿಲ್ಲೆಯ ಶೇಕ್ ನಸ್ರು (30) ಬಂಧಿತ ಆರೋಪಿಯಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯಾವ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎನ್ನುವ ವಿವರವನ್ನು ಸಂಗ್ರಹಿಸುತ್ತಿದ್ದಾರೆ.
ಸಿಸಿಕ್ಯಾಮರಾ ಫೂಟೇಜ್‌ಗಳನ್ನು ಸಂಗ್ರಹಿಸಿದ್ದ ಪೊಲೀಸರು ವ್ಯಕ್ತಿಯ ಚಲನವಲನ ಆಧರಿಸಿ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಶೇಕ್ ನಸ್ರು ಈ ಕೃತ್ಯ ಎಸಗಿರುವುದು ಮಾಹಿತಿಯಿಂದ ಖಚಿತವಾಗಿತ್ತು. ಆತನನ್ನು ವಾಸವಿದ್ದ ಮನೆಯಲ್ಲಿ ಬಂಧಿಸಲಾಗಿದೆ.
ಪ್ಲಾಸ್ಟಿಕ್ ಹಾಗೂ ಬಟ್ಟೆಯ ಬ್ಯಾಗ್‌ಗಳನ್ನು ಹೊಲಿಯುವ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶೇಕ್ ನಸ್ರು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಇನ್ನಷ್ಟು ವಿಚಾರಣೆಯನ್ನೂ ಈ ಕುರಿತು ಪೊಲೀಸರು ನಡೆಸುತ್ತಿದ್ದಾರೆ.
ಚಾಮರಾಜಪೇಟೆಯ ವಿನಾಯಕನಗರದಲ್ಲಿ ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಹಸುಗಳ ಮಾಲೀಕ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿಯ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರತಿಭಟನೆ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಬೆಳಕಿಗೆ ಬಂದ ನಂತರ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಗೋಮಾತೆಯ ಮೇಲೆ ಅಮಾನವೀಯವಾಗಿ ನಡೆದುಕೊಂಡಿರುವವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದರು. ಬೆಂಗಳೂರು, ಮಂಡ್ಯ ಸಹಿತ ಹಲವು ಕಡೆ ಪ್ರತಿಭಟಿಸಲಾಗಿತ್ತು.
ಅಶೋಕ್ ಆಕ್ರೋಶ
ಹಸುಗಳ ಕೆಚ್ಚಲು ಕೊಯ್ದ ಜಿಹಾದಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸದಿದ್ದರೆ, ರಾಜ್ಯದಾದ್ಯಂತ ಕರಾಳ ಸಂಕ್ರಾಂತಿ ಆಚರಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದರು.
ಇಡೀ ದೇಶ ಗೋವನ್ನು ಪವಿತ್ರ ಎಂದು ಪರಿಗಣಿಸಿದೆ. ಸಂಕ್ರಾಂತಿ ಹಬ್ಬದಲ್ಲೂ ಗೋವನ್ನು ಪೂಜಿಸಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಹೊಸ ವರ್ಷಕ್ಕೆ ಬೆಲೆ ಏರಿಕೆಯ ಕೊಡುಗೆ ನೀಡಿದೆ. ಅದೇ ರೀತಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಸುವಿನ ಕೆಚ್ಚಲು ಕೊಯ್ದುಹಾಕುವ ಕೊಡುಗೆಯನ್ನು ನೀಡಿದೆ. ಇಂತಹ ಜಿಹಾದಿ ಮನಸ್ಥಿತಿಯನ್ನು ನಾನು ಈವರೆಗೆ ನೋಡಿಲ್ಲ. ನೂರಾರು ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಪಶು ಆಸ್ಪತ್ರೆ ಇದೆ. ಈ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪ್ರಯತ್ನ ನಡೆದಿತ್ತು. ಆಗ ಸರ್ಕಾರದ ವಿರುದ್ಧ ಪ್ರತಿಭಟಿಸುವುದರ ಜೊತೆಗೆ, ಕೋರ್ಟ್ ಮೊರೆ ಹೋಗಲಾಯಿತು. ಪ್ರತಿಭಟನೆಯ ಸಮಯದಲ್ಲಿ ಇವೇ ಹಸುಗಳನ್ನು ತೋರಿಸಲಾಗಿತ್ತು. ಅದಕ್ಕಾಗಿಯೇ ಮಚ್ಚು, ಡ್ರ್ಯಾಗರ್ ಬಳಸಿ ಹಸುಗಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಒಂದು ಹಸು 20 ಲೀಟರ್ ಹಾಲು ನೀಡುತ್ತಿತ್ತು. ಈಗ ಯಾವುದೇ ಹಸುಗಳು ಬದುಕುವ ಸ್ಥಿತಿಯಲ್ಲೇ ಇಲ್ಲ. ಪಶು ಸಂಗೋಪನೆ ಮಾಡುವವರಿಗೆ ನಾವು ಕೂಡ ಸಹಾಯ ಮಾಡುತ್ತೇವೆ. ಸರ್ಕಾರ ಕೂಡ ನೆರವು ನೀಡಬೇಕೆಂದು ಆಗ್ರಹಿಸಿದ್ದರು.
ಸಿಎಂ ಸೂಚನೆ
ಚಾಮರಾಜಪೇಟೆಯಲ್ಲಿ ದನಗಳಿಗೆ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಣಿ ಹಿಂಸೆ ಮಾಡುವುದು ಅಪರಾಧ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದರು.
ತಪ್ಪಿತಸ್ಥರ ಮಾಹಿತಿ ದೊರೆತಿಲ್ಲ. ಪೊಲೀಸ್ ಆಯುಕ್ತರು ತಪ್ಪಿತಸ್ಥರನ್ನು ಪತ್ತೆ ಹಚ್ಚಿ , ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಹಿಂದೂ ಸಂಘಟನೆಗಳ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದರು.
