ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025; ಆನೂರು ಶಿವು, ಡಾ ಎಲ್ ಸುಬ್ರಮಣ್ಯಂ ಸೇರಿ ಸಾಧಕರ ಸಂಗೀತ ಕಛೇರಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025; ಆನೂರು ಶಿವು, ಡಾ ಎಲ್ ಸುಬ್ರಮಣ್ಯಂ ಸೇರಿ ಸಾಧಕರ ಸಂಗೀತ ಕಛೇರಿ

ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025; ಆನೂರು ಶಿವು, ಡಾ ಎಲ್ ಸುಬ್ರಮಣ್ಯಂ ಸೇರಿ ಸಾಧಕರ ಸಂಗೀತ ಕಛೇರಿ

ಬೆಂಗಳೂರು: ‘ಉಡುಪ ಸಂಗೀತೋತ್ಸವ’ ಆರನೇ ಆವೃತ್ತಿ ಇಂದು (ಮೇ 22) ಮತ್ತು ನಾಳೆ (ಮೇ 23) ಆಯೋಜನೆಯಾಗಿದ್ದು, ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ಸಂಗೀತ ರಸದೌತಣ ಸಿಗಲಿದೆ. ಕಲಾ ದಿಗ್ಗಜರಾದ ಆನೂರು ಶಿವು, ಡಾ. ಎಲ್. ಸುಬ್ರಮಣ್ಯಂ, ಪಂಡಿತ್ ವೆಂಕಟೇಶ ಕುಮಾರ್ ಪಾಂಡಿತ್ಯ ಅನಾವರಣವಾಗಲಿದೆ. (ವರದಿ- ಶಿವಮೊಗ್ಗ ರಾಮ್)

ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025 ಕಾರ್ಯಕ್ರಮದ ಸಂಭ್ರಮ, ಸಡಗರ.
ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025 ಕಾರ್ಯಕ್ರಮದ ಸಂಭ್ರಮ, ಸಡಗರ.

ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ‘ಉಡುಪ ಸಂಗೀತೋತ್ಸವ’ ಆರನೇ ಆವೃತ್ತಿ ಯು ಸಂಗೀತ ರಸದೌತಣವನ್ನು ನೀಡಲು ಅಣಿಯಾಗಿದೆ. ಮಹಾನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ. 22 ಮತ್ತು 23ರಂದು ಸಂಜೆ 7 ಕ್ಕೆ ಸಂಗೀತ ಸಮಾರಾಧನೆ ಸಂಪನ್ನಗೊಳ್ಳಲಿದೆ. ಈ ಬಾರಿಯೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರೊಳಗೊಂಡ ವಿಭಿನ್ನ ತಂಡವು ಸಂಗೀತ ಧಾರೆಯನ್ನು ಶ್ರೋತೃಗಳ ಮನ ಮಂದಿರಕ್ಕೆ ಎರೆಯಲು ಸಿದ್ಧತೆಗಳು ಪೂರ್ಣಗೊಂಡಿವೆ.

ಉಡುಪ ಸಂಗೀತೋತ್ಸವ 2025; ಯಾವಾಗ ಏನು ಕಾರ್ಯಕ್ರಮ

ಮೇ 22ರ ಸಂಜೆ 7ಕ್ಕೆ ತಾಳವಾದ್ಯ- ಕಛೇರಿ ಆಯೋಜನೆಗೊಂಡಿದೆ. ಪ್ರಖ್ಯಾತ ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ (ಶಿವು) ಅವರ ಮೃದಂಗ, ಪಂಡಿತ್ ಬಿಕ್ರಮ್ ಘೋಷ್ ಅವರ ತಬಲಾ ಮತ್ತು ವಿದ್ವಾನ್ ಸಿ. ಪಿ. ವ್ಯಾಸ ವಿಠ್ಠಲ ಅವರ ಖಂಜಿರಾ ವಾದನ ಅನುರಣಿಸಲಿದೆ. ನಂತರ ವಿಶ್ವಮಾನ್ಯ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಗಾಯನವಿದೆ. ಶ್ರೀ ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಮತ್ತು ಕೇಶವ ಜೋಶಿ ( ತಬಲಾ) ಪಕ್ಕವಾದ್ಯಸಾಥ್ ನೀಡಲಿದ್ದಾರೆ.

ಮೇ 23ರ ಸಂಜೆ 7ಕ್ಕೆ ವಿದ್ವಾನ್ ಡಾ. ಎಲ್. ಸುಬ್ರಮಣ್ಯಂ ಅವರ ಪಿಟೀಲು ವಾದನ ಕಛೇರಿ ಸಂಪನ್ನಗೊಳ್ಳಲಿದೆ. ಇವರೊಂದಿಗೆ ವಿದ್ವಾಂಸರಾದ ಅಂಬಿ ಸುಬ್ರಮಣ್ಯಂ (ಪಿಟೀಲು), ವಿ. ವಿ. ರಮಣ ಮೂರ್ತಿ (ಮೃದಂಗ), ಉಸ್ತಾದ್ ಫಜಲ್ ಖುರೇಷಿ ( ತಬಲಾ), ತ್ರಿಪುಣಿತುರ ಎನ್. ರಾಧಾಕೃಷ್ಣನ್ ( ಘಟಂ) ಮತ್ತು ವಿದುಷಿ ಲತಾ ರಾಮಾಚಾರ್ ( ಖಂಜಿರಾ.)ದಲ್ಲಿ ರಂಜಿಸಲಿದ್ದಾರೆ.

ಉಡುಪ ಪ್ರತಿಷ್ಠಾನದ ದಶಮಾನೋತ್ಸವ

ವಿಶ್ವ ಖ್ಯಾತಿಯ ಘಟಂ ವಿದ್ವಾಂಸ ಗಿರಿಧರ ಉಡುಪ ರವರಿಂದ 2015ರಲ್ಲಿ ಸ್ಥಾಪನೆಗೊಂಡ ಉಡುಪ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆ ಮತ್ತು ಸಂಸ್ಕೃತಿಗಳನ್ನು ಉತ್ತೇಜಿಸುವ ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿದೆ. ಪ್ರತಿಷ್ಠಾನವು ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆ ಮಾಡುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 300ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 150ಕ್ಕೂ ಅಧಿಕ ಸಂಗೀತ ಕಛೇರಿಗಳನ್ನು ಆಯೋಜನೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ ಎಂದು 6ನೇ ಆವೃತ್ತಿ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ವಿಶ್ವ ಮಟ್ಟದಲ್ಲಿ ಉತ್ತುಂಗದ ‘ಗಿರಿ’....

ತಂದೆ ಮತ್ತು ಗುರುವೂ ಆದ ಮೃದಂಗ ವಿದ್ವಾನ್ ಉಳ್ಳೂರು ನಾಗೇಂದ್ರ ಉಡುಪ ಅವರ ಹೆಮ್ಮೆಯ ಪುತ್ರ ಗಿರಿಧರ ಉಡುಪ ಅವರು ದಿ ಕಿಂಗ್ ಆಫ್ ಪಾಟ್ ಮ್ಯೂಸಿಕ್- ಎಂದೇ ಖ್ಯಾತರು. ದೇಶ- ವಿದೇಶದಲ್ಲಿ ವಿಖ್ಯಾತರು. ಇವರು ನುಡಿಸದೇ ಇರುವ ವಿಶ್ವ ಮಟ್ಟದ ವೇದಿಕೆಗಳೇ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು. ಘಟಂ ಎಂದರೆ ವಿಶ್ವ ಮಟ್ಟದಲ್ಲಿ ಗಿರಿಧರ ಉಡುಪ ಎಂದೇ ವಿಖ್ಯಾತಿ ಎಂಬುದನ್ನು ಸಂಗೀತ ಪ್ರಪಂಚವೇ ಅನುಮೋದಿಸಿದೆ. ಅಷ್ಟರ ಮಟ್ಟಿಗೆ ವಿಶ್ವ ಮಟ್ಟದ ತಾಳವಾದ್ಯ ವಿದ್ಮನ್ಮಣಿಗಳ ಸಾಲಿನಲ್ಲಿ ಇವರು ಮೇರು ‘ಗಿರಿ’ ಯೇ ಆಗಿರುವುದು ನಾಡಿನ ಸುಕೃತವಾಗಿದೆ.

(ವರದಿ- ಶಿವಮೊಗ್ಗ ರಾಮ್)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.