Udupi Chikmagalur Result: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು; ಕಾಂಗ್ರೆಸ್‌ಗೆ ಸೋಲು
ಕನ್ನಡ ಸುದ್ದಿ  /  ಕರ್ನಾಟಕ  /  Udupi Chikmagalur Result: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು; ಕಾಂಗ್ರೆಸ್‌ಗೆ ಸೋಲು

Udupi Chikmagalur Result: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು; ಕಾಂಗ್ರೆಸ್‌ಗೆ ಸೋಲು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಸೋಲೊಪ್ಪಿಕೊಂಡಿದ್ದಾರೆ. Lok Sabha Elections Result.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತಎಣಿಕೆ ಚುರುಕಾಗಿ ಸಾಗಿದ್ದು, ಭಾರಿ ಕುತೂಹಲ ಮೂಡಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Udupi Chikmagalur Lok Sabha MP Election 2024 Result) ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 259175 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ್ದು, ಮತ ಎಣಿಕೆ ಕೆಂದ್ರದ ಬಳಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಿದ್ದರೂ, ಬಿಜೆಪಿ ಗೆಲುವು ಫಲಿತಾಂಶಕ್ಕೂ ಮುನ್ನವೇ ಖಚಿತವಾಗಿತ್ತು. ಈ ಬಾರಿ ಹಾಗಿರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಪೈಪೋಟಿ ನಿರೀಕ್ಷೆ ಇತ್ತು. ಬಿಜೆಪಿ ಪರ ಈ ಬಾರಿ ಹೊಸ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಣಕ್ಕಿಳಿದಿದ್ದರು. ಇವರಿಗೆ ಎದುರಾಗಿ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅವರನ್ನು ಕಣಕ್ಕಿಳಿಸಲಾಗಿತ್ತು.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ 3 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಸೋಲು ಕಂಡಿದ್ದರು. ಈ ಬಾರಿ ಎರಡೂ ಪಕ್ಷಗಳು ಸರಳ ಜನನಾಯಕರನ್ನು ಕಣಕ್ಕಿಳಿಸಿದ್ದು, ಕ್ಷೇತ್ರದ ಚುನಾವಣೆ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಈ ಫಲಿತಾಂಶದ ಲೆಕ್ಕಾಚಾರ ಅಷ್ಟು ಸುಲಭವಾಗಿರಲಿಲ್ಲ.

ಉಡುಪಿ-ಚಿಕ್ಕಮಗಳೂರು ಎಲೆಕ್ಷನ್ ರಿಸಲ್ಟ್‌ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಉಡುಪಿ-ಚಿಕ್ಕಮಗಳೂರು

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

  • ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ): 732234 ಮತಗಳು
  • ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌): 473059 ಮತಗಳು
  • ಗೆಲುವಿನ ಅಂತರ: 259175 ಮತಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಕೋಟ ಶ್ರೀನಿವಾಸ ಪೂಜಾರಿ ಪರಿಚಯ

ಕರಾವಳಿ ಕರ್ನಾಟಕದ ಸರಳ ಸಜ್ಜನಿಕೆಯ ಜನನಾಯಕ ಎಂದೇ ಜನಪ್ರಿಯರಾಗಿರುವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಸಚಿವರಾದವರು. ಇದೀಗ ಸಂಸತ್‌ ಪ್ರವೇಶಿಸಲು ಸಜ್ಜಾಗಿದ್ದಾರೆ. ಒಂದು ಕಾಲದಲ್ಲಿ ಫೊಟೋಗ್ರಾಫರ್ ಆಗಿದ್ದ ಶ್ರೀನಿವಾಸ ಪೂಜಾರಿ ಹಂತಹಂತವಾಗಿ ರಾಜಕೀಯದಲ್ಲಿ ಮೇಲೆ ಬಂದವರು. ಸರಳ ವ್ಯಕ್ತಿತ್ವದಿಂದಲೇ ಗಮನ ಸೆಳೆದ ನಾಯಕ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಪ್ರಬಲ ನಾಯಕ.

7ನೇ ತರಗತಿ ಓದಿದರೂ ರಾಜಕೀಯದಲ್ಲಿ ನಿಪುಣ. 1993ರಲ್ಲಿ ಗ್ರಾಮ ಪಂಚಾಯಿತ್ ಸದಸ್ಯರಾಗಿದ್ದ ಕೋಟಾ, 1996ರಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದರು. 2006ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದರು. 2009ರಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಹೀಗೆ ಹಂತಹಂತವಾಗಿ ಕೋಟ ಬಿಜೆಪಿಯಲ್ಲಿ ಬೆಳೆದವರು. 2009ರಲ್ಲಿ ವಿಧಾನಪರಿಷತ್ ಸದಸ್ಯರಾದ ಅವರಿಗೆ 2012ರಲ್ಲಿ ಸಚಿವ ಸ್ಥಾನ ನೀಡಲಾಯ್ತು. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಗಮನ ಸೆಳೆದರು.

ಒಟ್ಟು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕರಾವಳಿ ಕುವರ, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿದ್ದರು. ಸದನದಲ್ಲಿ ಪರಿಣಾಮಕಾರಿ ಚರ್ಚೆಗಳ ಮೂಲಕ ಗಮನ ಸೆಳೆಯುತ್ತಿದ್ದ ಕೋಟ, ಇದೀಗ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿ ಸಂಸತ್‌ ಪ್ರವೇಶಿಸಲು ಬಾರಿಸಿದ್ದಾರೆ.

ಚುನಾವಣಾ ಕಣ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪರಿಚಯ

2002ರಲ್ಲಿ ಡಿಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಮೇಲೆ 2008ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ರಚನೆಯಾಯಿತು. ಈ ಕ್ಷೇತ್ರದಿಂದ 2009ರಲ್ಲಿ ನಡದ ಮೊದಲ ಚುನಾವಣೆಯಲ್ಲಿ ಕರಾವಳಿ ಕುವರ ಡಿವಿ ಸದಾನಂದ ಗೌಡ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು. ಸಿಎಂ ಆಗಿ ಆಯ್ಕೆಯಾದ ಬಳಿಕ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಣಕ್ಕಿಳಿದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಗೆದ್ದು ಗೆಲುವು ಸಾಧಿಸಿದರು. ಆ ಬಳಿಕ ಈ ಕ್ಷೇತ್ರದಲ್ಲಿ 2014 ಹಾಗೂ 2019ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಸತತವಾಗಿ ಪ್ರಸ್ತುತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದ ದಾಖಲೆ ಹೊಂದಿದ್ದಾರೆ.

ಲೋಕಸಭಾ ಚುನಾವಣೆ 2024ರ ಕುರಿತ ಎಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner