Udupi Crime: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!
Udupi News: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ. ಘಟನೆಯಿಂದ ಕೃಷ್ಣನಗರಿಯ ಜನ ಆತಂಕಕ್ಕೊಳಗಾಗಿದ್ದಾರೆ.
ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ.
ತೃಪ್ತಿ ನಗರದಲ್ಲಿ ಈ ಕೃತ್ಯ ನಡೆದಿದ್ದು, ಸಾವನ್ನಪ್ಪಿದವರಲ್ಲಿ ತಾಯಿ ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಹತ್ಯೆಯಾದವರನ್ನು ತಾಯಿ ಹಸೀನಾ ಹಾಗೂ ಮಕ್ಕಳಾದ ಅಫ್ನಾನ್, ಅಯ್ನಾಝ್ ಮತ್ತು ಅಸೀಮ್ ಎಂದು ಗುರುತಿಸಲಾಗಿದೆ. ಮನೆಯೊಳಗಿದ್ದ ಮತ್ತೋರ್ವ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದು ಕೃತ್ಯ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಸಹಿತ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಮತ್ತು ಆಸೀಮ್ (12) ಮೃತ ದುರ್ದೈವಿಗಳು. ಚೂರಿಯಿಂದ ಚುಚ್ಚಿ ಕೊಲೆಗೈದು ಹಂತಕರು ಪರಾರಿ ಆಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಮೊದಲು ಮನೆ ಯಜಮಾನಿಗೆ ಚೂರಿ ಇರಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಳಿಕ ಮಕ್ಕಳಾದ ಅಫ್ನಾನ್,ಅಯ್ನಾಝ್ಗೆ ಚಾಕುವಿನಿಂದ ಇರಿದಿದ್ದಾರೆ. ಸದ್ದು ಕೇಳಿ ಆಟವಾಡುತ್ತಿದ್ದ ಆಸಿಮ್ ಒಳ ಬರುತ್ತಿದ್ದಂತೆ ಆತನನ್ನು ಕೂಡಾ ಕೊಂದಿದ್ದಾರೆ. ಇವರ ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.