Udupi Crime: ಬ್ರಹ್ಮಾವರ ಸಮೀಪ ಮನೆಗೆ ನುಗ್ಗಿ ಯುವಕನ ಗುಂಡಿಕ್ಕಿ ಹತ್ಯೆ
Brahmavara Murder News: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಬಾರ್ಕೂರಿನ ಸಮೀಪ ಹನೆಹಳ್ಳಿ ಎಂಬಲ್ಲಿ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. (ಹರೀಶ ಮಾಂಬಾಡಿ)
ಉಡುಪಿ: ಯುವಕನೋರ್ವನನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಬಾರ್ಕೂರಿನ ಸಮೀಪ ಹನೆಹಳ್ಳಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ. ಈತ ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದು, ಶನಿವಾರ ರಾತ್ರಿ ಮನೆಗೆ ಬಂದಿದ್ದ. ಸುಮಾರು 9.30ಕ್ಕೆ ಊಟ ಮಾಡುತ್ತಿದ್ದ ವೇಳೆ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಿದ ಆಗಂತುಕರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯರಿಗೆ ರಾತ್ರಿ ಫೈರಿಂಗ್ ಶಬ್ದ ಕೇಳಿದೆ. ಆದರೆ ಅದು ಪಟಾಕಿ ಶಬ್ದ ಇರಬಹುದು ಎಂದು ನಂಬಿದ್ದರು. ಮುಂಜಾನೆ ಅದು ಗುಂಡಿನ ಶಬ್ದ ಎಂದು ತಿಳಿದುಬಂದಿದೆ.
ಸ್ಥಳೀಯರು ಕೆಲವರಿಗೆ ಗುಂಡಿನ ಶಬ್ದ ಕೇಳಿತ್ತು. ಅದು ಪ್ರಾಣಿಗಳನ್ನು ಓಡಿಸಲು ಪಟಾಕಿ ಬಿಟ್ಟಿರಬಹುದು ಎಂದು ಆಸುಪಾಸಿನವರು ಸುಮ್ಮನಿದ್ದರು. ಆದರೆ, ಬೆಳಗ್ಗೆ ಹೋಗಿ ನೋಡಿದಾಗ ಕೃಷ್ಣ ಅವರು ರಕ್ತದ ಮಡುವಿನಲ್ಲಿ ಶವವಾಗಿ ಮಲಗಿದ್ದರು. ಹಾಗಿದ್ದರೆ ರಾತ್ರಿ ಆ ಮನೆಗೆ ಬಂದು ಶೂಟ್ ಮಾಡಿ ಕೃಷ್ಣ ಅವರನ್ನು ಸಾಯಿಸಿದ್ದು ಯಾರು ಎನ್ನುವುದು ನಿಗೂಢ. ಕೃಷ್ಣ ಅವರು ತಾವೇ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಂತೆ ಕಾಣುತ್ತಿಲ್ಲ. ಬದಲಾಗಿ ಯಾರೋ ಬಂದು ಅವರಿಗೆ ಗುಂಡಿಕ್ಕಿದಂತೆ ಕಾಣುತ್ತಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಭೇಟಿ ನೀಡಿದ್ದಾರೆ.
ಕ್ರೀಡಾಪಟುವೂ ಆಗಿದ್ದ ಕೃಷ್ಣ ಏಕಾಂಗಿಯಾಗಿ ಮನೆಯಲ್ಲಿ ವಾಸವಾಗಿದ್ದ. ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದ ಈತ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆರ್ಥಿಕವಾಗಿ ದೊಡ್ಡ ಮಟ್ಟಿನ ವ್ಯವಹಾರವನ್ನೂ ಈತ ಮಾಡುತ್ತಿರಲಿಲ್ಲ. ಹಾಗಾದರೆ, ಏಕಾಏಕಿ ಈತನನ್ನು ಗುಂಡು ಹಾರಿಸಿ ಕೊಲ್ಲಲು ಕಾರಣವೇನು ಎಂಬುದು ನಿಗೂಢವಾಗಿದೆ. ಹಂತಕರು ಎಲ್ಲಿಂದ ಬಂದರು, ಅಥವಾ ಒಬ್ಬನೇ ಹಂತಕನೋ ಎಂಬುದು ಇನ್ನೂ ತಿಳಿಯಬೇಕಿದೆ. ಯಾವುದಾದರೂ ವಾಹನದಲ್ಲಿ ದುಷ್ಕರ್ಮಿಗಳು ಬಂದರೇ, ಅಥವಾ ಬಂದವರು ಕೃಷ್ಣನಿಗೆ ಪರಿಚಿತರೇ ಎಂಬುದು ಇನ್ನೂ ಗೊತ್ತಾಗಿಲ್ಲ. ಈತನ ಮನೆಯ ಹತ್ತಿರ ಮನೆಗಳು ಇದ್ದರೂ ಗುಂಡಿನ ಸದ್ದು ದಟ್ಟವಾಗಿ ಕೇಳಿಲ್ಲ. ಹಾಗೆಯೇ ಹಳ್ಳಿ ಪ್ರದೇಶವಾದ ಕಾರಣ ಸಿಸಿ ಟಿವಿ ಕ್ಯಾಮರಾಗಳೂ ಅಷ್ಟೊಂದಿಲ್ಲದಿರುವುದು ತನಿಖೆಗೆ ತೊಡಕಾಗುತ್ತಿದೆ. ಆದರೂ ಉಡುಪಿ ಪೊಲೀಸರು ಹಂತಕರ ಜಾಡು ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು