ಬೆಂಗಳೂರಿನ ಸಮಸ್ಯೆಗೆ ಬೆಂಗಳೂರಿನಿಂದಾಚೆಗೆ ಯೋಚಿಸುವುದೇ ಪರಿಹಾರ; ಉಡುಪಿಯಲ್ಲಿ ಐಟಿ ಕಂಪನಿ ಕಟ್ಟಿ ಬೆಳೆಸಿದ ಉದ್ಯಮಿಯ ಸಲಹೆ
ಸಿಲಿಕಾನ್ ವ್ಯಾಲಿ ಬೆಂಗಳೂರಿನ ಸಮಸ್ಯೆಗೆ ಬೆಂಗಳೂರಿನಿಂದಾಚೆಗೆ ಯೋಚಿಸುವುದೇ ಪರಿಹಾರ ಎಂದು ಉಡುಪಿಯಲ್ಲಿ ಐಟಿ ಕಂಪನಿ ಕಟ್ಟಿ ಬೆಳೆಸಿದ ಉದ್ಯಮಿಯೊಬ್ಬರು ಸಲಹೆ ನೀಡಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿ ಉಳಿಸಿಕೊಂಡೇ ಅಭಿವೃದ್ಧಿ ಸಾಧ್ಯ ಎಂಬುದನ್ನು ನಿರೂಪಿಸಿದ ಇವರು ಮಾದರಿಯಾಗಿದ್ದಾರೆ. (ವರದಿ: ಎಚ್.ಮಾರುತಿ)
ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನ ಜಡಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಸ್ಯೆ ಈ ವರ್ಷ ಹುಟ್ಟಿಕೊಂಡಿದ್ದಲ್ಲ, ಪ್ರತಿ ವರ್ಷದ ಮಳೆಗಾಲದಲ್ಲಿ ಮಳೆಯಿಂದ ಆಗುವ ಅನಾಹುತ, ಅವಘಡಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಸಾರ್ವಜನಿಕರ ಗೋಳಾಟ, ಗೊಣಗಾಟ ತಪ್ಪಿದ್ದೇನಲ್ಲ. ಈ ಸಮಸ್ಯೆಗೆ ಕಾರಣ ಬೆಂಗಳೂರಿನ ಯತ್ವಾತದ್ವ ಬೆಳವಣಿಗೆ. ಕಡಿವಾಣವೇ ಇಲ್ಲದ ಹಾಗೆ ಅಷ್ಟ ದಿಕ್ಕುಗಳಲ್ಲಿ ಕಾಂಕ್ರಿಟ್ ಕಾಡು ತಲೆ ಎತ್ತುತ್ತಲೇ ಇದೆ.
ಆಡಳಿತ ನಡೆಸುವ ಸರ್ಕಾರಗಳು ಬೆಂಗಳೂರು ಹೊರತುಪಡಿಸಿ 2 ಮತ್ತು 3ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಎಲ್ಲ ಸಾಧ್ಯತೆಗಳಿವೆ. ಐಟಿಬಿಟಿ ವಾಣಿಜ್ಯ, ಕೈಗಾರಿಕೆ ಸೇರಿದಂತೆ ಎಲ್ಲ ಉದ್ಯಮಗಳನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ತಾಪಿಸಲು ವಿಫುಲ ಅವಕಾಶಗಳಿವೆ. ಬಹುತೇಕ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರು ಮತ್ತು ಇತರ ನಗರಗಳಿಗೆ ವಿಮಾನಯಾನ ಸಂಪರ್ಕವಿದೆ. ರೈಲು, ರಸ್ತೆಯಂತಹ ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ. ಜಗತ್ತಿನ ಯಾವುದೇ ಪ್ರದೇಶದ ಯಾವುದೇ ವ್ಯಕ್ತಿಯನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸುವಷ್ಟು ತಂತ್ರಜ್ಞಾನ ಬೆರಳ ತುದಿಯಲ್ಲಿದೆ.
ಈ ಪೀಠಿಕೆ ಏಕೆಂದು ಮುಂದಿನ ಕತೆ ಓದಿದಾಗ ನಿಮಗೆ ಅರ್ಥವಾದೀತು. ರೋಹಿತ್ ಭಟ್ ಎಂಬುವವರು ಉಡುಪಿಯಲ್ಲಿ ರೋಬೋಸಾಫ್ಟ್ ಎಂಬ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರು ಪ್ರಕೃತಿಯನ್ನು ಶೋಷಣೆ ಮಾಡದೆ ಅಭಿವೃದ್ದಿ ಸಾದ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಆಗಲೇ ಹೇಳಿದಂತೆ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಕಾಲು ಮುರಿದುಕೊಂಡು ಬಿದ್ದಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಹೊಸ ಕಂಪನಿಗಳನ್ನು ಸ್ಥಾಪಿಸಲು ಸಾಧ್ಯ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಪ್ರಕೃತಿಯನ್ನು ಹಾಳುಗೆಡವದೆ ಅಭಿವೃದ್ಧಿ ಸಾಧ್ಯ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ಮಂಗಳೂರು-ಉಡುಪಿ ನಗರಗಳನ್ನು ತಂತ್ರಜ್ಞಾನ ಹಬ್ ಆಗಿ ರೂಪಿಸಬಹುದು
ಎಕ್ಸ್‌ನಲ್ಲಿ ಸಕ್ರಿಯರಾಗಿರುವ ಒಬ್ಬರು ಉಡುಪಿಯಂತಹ ಜಿಲ್ಲಾ ಕೇಂದ್ರದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿ ಯಶಸ್ಸು ಗಳಿಸಿದ ರೋಹಿತ್ ಭಟ್ ಮತ್ತು ಝೋಹೊ ಸ್ಥಾಪಕ ಶ್ರೀಧರ್ ವೆಂಬು ಅವರ ಉದಾಹರಣೆ ನೀಡುತ್ತಾರೆ. ಬೆಂಗಳೂರಿನ ಸಮಸ್ಯೆಗೆ ಬೆಂಗಳೂರಿನಿಂದಾಚೆಗೆ ಯೋಚಿಸುವುದು ಮಾತ್ರ ಪರಿಹಾರ ಎನ್ನುವುದು ಅವರ ವಾದ. ಮಂಗಳೂರು-ಉಡುಪಿಯಂತಹ 2,3ನೇ ಹಂತದ ನಗರಗಳನ್ನು ತಂತ್ರಜ್ಞಾನ ಹಬ್ ಆಗಿ ರೂಪಿಸಬಹುದು. ಮೇಲಿನ ಇಬ್ಬರು ಉದ್ಯಮಿಗಳು ಉತ್ತಮ ಉದಾಹರಣೆ ಎಂದು ಹೇಳುತ್ತಾರೆ.
ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಭಟ್ ಅವರು ಉದ್ದಿಮೆದಾರರು, ಪರಿಣಿತಿಗಿಂತ ಮೌಲ್ಯಕ್ಕೆ ಆದ್ಯತೆ ನೀಡಬೇಕು. ಪ್ರಕೃತಿಯನ್ನು ನಾಶ ಮಾಡದೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಐಟಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸಲಹೆ
ಈ ಹಿಂದೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸಹ 2,3ನೇ ಹಂತದ ನಗರಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು. ಬೆಂಗಳೂರು ನಗರದಾಚೆಗೂ ಚಿಂತಿಸಿ ರಾಜ್ಯದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಇದಕ್ಕೆ ಯಾವುದೇ ಗಡಿಗಳನ್ನು ಹಾಕಿಕೊಳ್ಳಬೇಡಿ. ಬೆಂಗಳೂರು ಹೊರತುಪಡಿಸಿ ಎಲ್ಲೇ ಉದ್ಯಮಗಳು ಸ್ಥಾಪನೆಯಾದರೂ ಸರ್ಕಾರ ಪೂರಕ ವಾತಾವರಣವನ್ನು ನಿರ್ಮಿಸಿ ಕೊಡುತ್ತೆ ಎಂದು ಭರವಸೆ ನೀಡಿದ್ದರು.
ಬೆಂಗಳೂರಿನ ಮಳೆ ಮತ್ತು ಸಂಚಾರ ದಟ್ಟಣೆಯನ್ನು ಅನುಭವಿಸುವವರು, ಒಮ್ಮೊಮ್ಮೆ ಬೆಂಗಳೂರಿನಿಂದ ಆಚೆಯೂ ಕಂಪನಿಗಳನ್ನು ಸ್ಥಾಪಿಸಬೇಕು ಎಂದು ಅಂದುಕೊಳ್ಳುತ್ತಾರೆ. ಕೊನೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ನಗರಗಳನ್ನು ಬಿಟ್ಟು ಹೋಗುವುದಿಲ್ಲ ಎನ್ನುವುದು ವಿಪರ್ಯಾಸ.