ಉಡುಪಿ: ಮುಸ್ಲಿಮನ ಮನೆಯಲ್ಲೇ ವಾಸವಿದ್ದ ಹಿಂದೂ ಮಹಿಳೆ ಇನ್ನಿಲ್ಲ, ಹಿಂದೂ ವಿಧಿ ಪ್ರಕಾರವೇ ಅಂತ್ಯಸಂಸ್ಕಾರ, ಅಂತರ್ಧರ್ಮೀಯ ಸ್ನೇಹಕ್ಕೆ ಮಾದರಿ
Rare Interfaith Friendship: ಉಡುಪಿಯ ಕಾಪುವಿನಲ್ಲಿ ವಿರಳ ಅಂತರ್ಧಮೀಯ ಸ್ನೇಹವನ್ನು ಬಿಂಬಿಸುವ ಪ್ರಕರಣ ಒಂದು ಗಮನಸೆಳೆದಿದೆ. ಮುಸ್ಲಿಮನ ಮನೆಯಲ್ಲೇ ವಾಸವಿದ್ದ ಹಿಂದೂ ಮಹಿಳೆ ವಯೋಸಹಜವಾಗಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಅವರ ಅಂತ್ಯಸಂಸ್ಕಾರವನ್ನು ಹಿಂದೂ ವಿಧಿ ಪ್ರಕಾರವೇ ನೆರವೇರಿಸಲಾಗಿದೆ. ಇದು ಅಂತರ್ಧಮೀಯ ಸ್ನೇಹಕ್ಕೆ ಮಾದರಿಯಾಗಿ ಗಮನಸೆಳೆದಿದೆ.

ಉಡುಪಿ: ಮುಸ್ಲಿಂ ಮನೆಯಲ್ಲಿ ಅವರ ಕುಟುಂಬದ ಸದಸ್ಯರಂತೆ ವಾಸವಾಗಿದ್ದ ಹಿಂದು ಮಹಿಳೆಯೊಬ್ಬರು ನಿಧನ ಹೊಂದಿದ ವೇಳೆ ಅಂತ್ಯಸಂಸ್ಕಾರವನ್ನು ಹಿಂದು ಸಂಪ್ರದಾಯದಂತೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮಲ್ಲಾರು ಎಂಬಲ್ಲಿ ನಡೆದಿದ್ದು, ಧರ್ಮವೈಷಮ್ಯದ ವಿಚಾರಗಳೇ ಹೆಚ್ಚಾಗಿ ಕಾಣಿಸುವ ಸಂದರ್ಭ, ಈ ಘಟನೆ ಎರಡೂ ಧರ್ಮೀಯರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಯತ್ನ ಮಾಡಿದೆ.
ಅಂತರ್ಧರ್ಮೀಯ ಸ್ನೇಹ ಗಟ್ಟಿಗೊಳಿಸಿದ ಪ್ರಕರಣ
ಮಲ್ಲಾರು ನಿವಾಸಿ ರಫೀಕ್ ಎಂಬವರ ತಾಯಿ ಮತ್ತು ಜಾನಕಿ ಪೂಜಾರಿ ಗೆಳತಿಯರು. ರಫೀಕ್ ತಂದೆ ಹಾಗೂ ಜಾನಕಿಯವರ ಪತಿಯೂ ಗೆಳೆಯರು. ಹೀಗೆ ಮುಸ್ಲಿಂ ಮತ್ತು ಹಿಂದು ಕುಟುಂಬದ ಗೆಳೆತನ ಮುಂದಿನ ತಲೆಮಾರಿಗೂ ಮುಂದುವರಿಯಿತು. ಪತಿ ಅಗಲಿದ ನಂತರ ಜಾನಕಿ ಅವರು ರಫೀಕ್ ತಾಯಿ ಜೊತೆ ಮುಂಬೈನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಸುಮಾರು 1980ನೇ ಇಸವಿಯಲ್ಲಿ ಮುಂಬೈ ಬಿಟ್ಟು ಉಡುಪಿಯ ಕುಕ್ಕಿಕಟ್ಟೆಯಲ್ಲಿ ರಫೀಕ್ ಕುಟುಂಬ ಬಂದ ಮೇಲೆ ಜಾನಕಿ ಅವರೊಂದಿಗೆ ಬಂದರು. 10 ವರ್ಷಗಳ ಹಿಂದೆ ಮಲ್ಲಾರು ಗರೋಡಿ ವಾರ್ಡ್‌ನಲ್ಲಿ ಮನೆ ಖರೀದಿಸಿದ ಬಳಿಕ ರಫೀಕ್ ಮನೆಯಲ್ಲೇ ಜಾನಕಿ ವಾಸವಾಗಿದ್ದರು.
ಜಾನಕಿಯವರಿಗೆ ಪುತ್ರ ಇದ್ದಾರೆ. ಆದರೆ ರಫೀಕ್ ತಾಯಿಯ ಜೊತೆಯ ಗೆಳೆತನದಿಂದಾಗಿ ಅವರು ತನ್ನ 90ನೇ ವಯಸ್ಸಿನವರೆಗೂ ರಫೀಕ್ ಮನೆಯಲ್ಲೇ ವಾಸವಾಗಿದ್ದರು. ರಫೀಕ್ ಅವರನ್ನೂ ಮಗನಂತೆಯೇ ನೋಡಿಕೊಂಡರು. ಜಾನಕಿಯವರ ವೃದ್ಧಾಪ್ಯದಲ್ಲಿ ರಫೀಕ್ ಕುಟುಂಬವೂ ಜಾನಕಿ ಅವರನ್ನು ನೋಡಿಕೊಂಡಿತ್ತು. ಜಾನಕಿ ಪೂಜಾರಿ ತಮ್ಮ 90ನೇ ವಯಸ್ಸಿನಲ್ಲಿ ವಯೋಸಹಜವಾಗಿ ಮಂಗಳವಾರ ನಿಧನ ಹೊಂದಿದರು. ಅವರ ಅಂತಿಮ ದರ್ಶನಕ್ಕೆ ಪುತ್ರ ಶೇಖರ ವಿಠಲ ಮತ್ತು ಮೊಮ್ಮಗಳು ಬಂದಿದ್ದರು.
ಕಾಪು ರುದ್ರಭೂಮಿಯಲ್ಲಿ ಜಾನಕಿಯವರ ಅಂತ್ಯಸಂಸ್ಕಾರ
ರಫೀಕ್ ಮತ್ತವರ ಸಹೋದರ ಖಾದರ್ ಅವರ ಆಶಯದಂತೆ ಹಿಂದು ಸಂಪ್ರದಾಯದ ಪ್ರಕಾರ, ಪುತ್ರ ಶೇಖರ ವಿಠಲ ಚಿತೆಗೆ ಕಾಪು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ರಮೇಶ್ ಪೂಜಾರಿ ಮಲ್ಲಾರು ಮುಂದಾಳತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಈ ವೇಳೆ ಸ್ಥಳೀಯರಾದ ಹರೀಣಾಕ್ಷಿ, ಶೈಲೇಶ್ ಅಮೀನ್, ರಫೀಕ್, ಅಬ್ದುಲ್ ಖಾದರ್, ಖಾಸಿಂ ಸಾಹೇಬ್, ಶಕೀಲ್, ಬಾಬು ಕುಂದರ್, ನಾರಾಯಣ, ಸುಕುಮಾರ್ ಮತ್ತಿತರರು ಭಾಗವಹಿಸಿದರು.
