ಉಡುಪಿಯಲ್ಲಿ ನಾಲ್ವರ ಹತ್ಯೆ ಕೇಸ್​: 15 ನಿಮಿಷಗಳಲ್ಲೇ ಕೃತ್ಯ ಮುಗಿಸಿದ್ದ ಬೋಳುತಲೆಯ ಹಂತಕ ಯಾರು?
ಕನ್ನಡ ಸುದ್ದಿ  /  ಕರ್ನಾಟಕ  /  ಉಡುಪಿಯಲ್ಲಿ ನಾಲ್ವರ ಹತ್ಯೆ ಕೇಸ್​: 15 ನಿಮಿಷಗಳಲ್ಲೇ ಕೃತ್ಯ ಮುಗಿಸಿದ್ದ ಬೋಳುತಲೆಯ ಹಂತಕ ಯಾರು?

ಉಡುಪಿಯಲ್ಲಿ ನಾಲ್ವರ ಹತ್ಯೆ ಕೇಸ್​: 15 ನಿಮಿಷಗಳಲ್ಲೇ ಕೃತ್ಯ ಮುಗಿಸಿದ್ದ ಬೋಳುತಲೆಯ ಹಂತಕ ಯಾರು?

ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿ ಹಸೀನಾ, ಅಫ್ನಾನ್,ಅಯ್ನಾಝ್ ಗೆ ಮೊದಲು ಇರಿದಿದ್ದಾನೆ. ಬೊಬ್ಬೆ ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ಆತನನ್ನೂ ಇರಿದು ಕೊಲ್ಲಲಾಗಿದೆ. ಒಬ್ಬರ ಮೇಲೆ ದ್ವೇಷದಿಂದ ಸಾಕ್ಷ್ಯ ನಾಶ ಮಾಡಲು ಉಳಿದ ಮೂವರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಒಂದೇ ಕುಟುಂಬ ನಾಲ್ವರು
ಕೊಲೆಯಾದ ಒಂದೇ ಕುಟುಂಬ ನಾಲ್ವರು

ಉಡುಪಿ: ಭಾನುವಾರ (ನ.12) ನೇಜಾರುವಿನ ತೃಪ್ತಿ ನಗರದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದು, ಕೇವಲ 15 ನಿಮಿಷಗಳಲ್ಲಿ ಹತ್ಯೆ ಮಾಡಿದ ಬೋಳು ತಲೆಯ ವ್ಯಕ್ತಿಯ ತಲಾಷೆಯಲ್ಲಿದ್ದಾರೆ.

ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಗಳಾದ ಹಸೀನಾ (48) ಮತ್ತು ಅವರ ಮಕ್ಕಳಾದ ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) ಹಾಗೂ 8 ನೇ ತರಗತಿಯ ಅಸೀಮ್(12) ಕೊಲೆಯಾದವರು. ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ (70) ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟವರಲ್ಲಿ ಓರ್ವರು ಅಥವಾ ಕುಟುಂಬದ ಜೊತೆ ಹಂತಕನು ಪರಿಚಿತನಾಗಿದ್ದನೇ ಅಥವಾ ಈತ ಸುಪಾರಿ ಕಿಲ್ಲರ್ ಆಗಿದ್ದನೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಏಕೆಂದರೆ, ಮನೆಗೆ ಹೋಗಿ, ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿರುವ ರೀತಿ ನೋಡಿದರೆ, ಇದೊಂದು ಪೂರ್ವದ್ವೇಷದ ಕೊಲೆ ಎಂದೇ ಕಂಡುಬರುತ್ತದೆ ಎನ್ನಲಾಗಿದೆ.

ಆರೋಪಿಯ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆ

ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಎಸ್ಪಿ ಡಾ.ಅರುಣ್, ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ನಾವು ತನಿಖೆ ಮಾಡಿ ಶೀಘ್ರ ಇದರ ಹಿಂದಿನ‌ ಕಾರಣ ಪತ್ತೆ ಹಚ್ಚುತ್ತೇವೆ. ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ನಮಗೆ ಮಾಹಿತಿ ಬಂದಿದ್ದು, ಮಾಹಿತಿ ಬಂದ ತತ್ ಕ್ಷಣ ಬಂದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದೇವೆ. ಕೊಲೆಗೆ ಏನು ಕಾರಣ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ. ಈ ಕುರಿತು ಹಲವು ತಂಡಗಳನ್ನು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಫ್ನಾನ್

ಹತ್ಯೆಗೀಡಾದ ಯುವತಿ ಅಫ್ನಾನ್ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿಯಷ್ಟೇ ರಜೆಯಲ್ಲಿ ಉಡುಪಿಗೆ ಬಂದಿದ್ದರು. ಮನೆಯ ಯಜಮಾನ ನೂರ್ ಮಹಮ್ಮದ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಹಸೀನಾ ಗೃಹಿಣಿಯಾಗಿದ್ದರು. ಅಯ್ನಾಝ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿದ್ದರೆ, ಆಸಿಂ ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದ.

ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿ ಹಸೀನಾ, ಅಫ್ನಾನ್,ಅಯ್ನಾಝ್ ಗೆ ಮೊದಲು ಇರಿದಿದ್ದಾನೆ. ಬೊಬ್ಬೆ ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ಆತನನ್ನೂ ಇರಿದು ಕೊಲ್ಲಲಾಗಿದೆ. ಸ್ಥಳಕ್ಕೆ ಬಂದ ಪಕ್ಕದ ಮನೆ ಯುವತಿಯನ್ನೂ ಬೆದರಿಸಿದ ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಅತ್ತೆಗೂ ತೀವ್ರ ತರದ ಗಾಯವಾಗಿದೆ. ಒಬ್ಬರ ಮೇಲೆ ದ್ವೇಷದಿಂದ ಸಾಕ್ಷ್ಯ ನಾಶ ಮಾಡಲು ಉಳಿದ ಮೂವರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎರಡು ಮಸೀದಿಗಳಲ್ಲಿ ಅಂತ್ಯಕ್ರಿಯೆ

ಉಡುಪಿ ಜಾಮೀಯಾ ಮಸೀದಿಯಲ್ಲಿ ತಾಯಿ ಮತ್ತು ಹಿರಿಯ ಪುತ್ರಿ ಹಾಗೂ ಇಂದ್ರಾಳಿ ಮಸೀದಿಯಲ್ಲಿ ಕಿರಿಯ ಪುತ್ರಿ, ಉಡುಪಿ ಖಬರಸ್ತಾನದಲ್ಲಿರುವ ಕೋಣೆಯಲ್ಲಿ ಮಗನ ಪಾರ್ಥಿವ ಶರೀರಗಳ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಅಲ್ಲಿಂದ ನೇಜಾರಿನ ಮನೆಗೆ ತೆಗೆದುಕೊಂಡು ಹೋಗಲಾಯಿತು. ಮೃತ ಹಸೀನಾ ಅವರ ಪತಿ ನೂರ್ ಮೊಹಮ್ಮದ್, ಸೌದಿ ಅರೇಬಿಯಾದಿಂದ ಸೋಮವಾರ ಬೆಳಗ್ಗೆ ೬ ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಿದ್ದಾರೆ. ಉಡುಪಿ ನಗರದ ಎರಡು ಮಸೀದಿಗಳಲ್ಲಿ ನಾಲ್ಕು ಶವಗಳ ಪ್ರತ್ಯೇಕ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. ಸೌದಿ ಅರೇಬಿಯಾದಲ್ಲಿದ್ದ ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು, ಉಡುಪಿಯ ಜಾಮೀಯ ಮಸೀದಿಗೆ ಆಗಮಿಸಿದರು. ಅಲ್ಲದೆ ಈ ಸಂದರ್ಭ ಹಲವು ಮಂದಿ ಪೊಲೀಸರು, ಕೆಲವು ಸಂಬಂಧಿಕರು ಉಪಸ್ಥಿತರಿದ್ದರು.

ಘಟನೆಗೆ ಪೂರ್ವದ್ವೇಷ ಕಾರಣವೇ, ಹಣಕಾಸು ವ್ಯವಹಾರವೇ?

ಕೌಟುಂಬಿಕ ಕಾರಣ, ಪೂರ್ವದ್ವೇಷ ಅಥವಾ ವ್ಯವಹಾರ ಮತ್ತಿತರ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ಕೊಲೆಯಾದ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವ ಕಡೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಘಟನೆ ಕುರಿತು ಆಟೊ ಚಾಲಕ ಮಾಧ್ಯಮಗಳಿಗೆ ಹೇಳಿದ್ದೇನು?

ಘಟನೆ ಕುರಿತು ಮಾಧ್ಯಮಗಳಿಗೆ ಆಟೊ ಚಾಲಕ ನೇಜಾರಿನ ಶಾಮ್ ಪ್ರತಿಕ್ರಿಯೆ ನೀಡಿದ್ದು ಹೀಗೆ. ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ. ದೃಢಕಾಯದ ವ್ಯಕ್ತಿ, 45ರ ಆಸುಪಾಸಿನ ವಯಸಿನವನಾಗಿದ್ದಾನೆ. ಬ್ರೌನ್ ಕಲರ್ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ. ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ. ಕೊಲೆ ಆರೋಪಿ, ಬೋಳು ತಲೆ, ಬಿಳಿ ಬಣ್ಣದ ವ್ಯಕ್ತಿಯಾಗಿದ್ದರು. ಕನ್ನಡ ಭಾಷೆ ಮಾತನಾಡುತ್ತಿದ್ದರು. ಮಾಸ್ಕ್ ಧರಿಸಿದ್ದರು. ಬ್ಯಾಗ್ ಹಾಕಿಕೊಂಡು ಇದ್ದರು. ಆಟೊದಲ್ಲಿ ನನಗೆ ದಾರಿ ತಪ್ಪಿದಾಗ ಅವರೇ ಬೋರ್ಡ್ ತೋರಿಸಿ, ಇಲ್ಲೇ ಬಿಡಿ ಅಂದಿದ್ದರು. ನಾನು ಮೀಟರ್ ಚಾರ್ಜ್ ನಷ್ಟು ಬಾಡಿಗೆ ತೆಗೆದುಕೊಂಡು ಅಲ್ಲಿಂದ ವಾಪಸ್ ಬಂದಿದ್ದೆ ಎಂದರು. ಸಂತೆಕಟ್ಟೆ ಬಳಿ ಇದ್ದಾಗ ಹೂವಿನ ಮಾರ್ಕೆಟ್ ಬಳಿ ವ್ಯಕ್ತಿಯೊಬ್ಬ ನನ್ನ ಆಟೊ ನಿಲ್ಲಿಸಿ, ತೃಪ್ತಿ ಲೇಔಟ್ ಬಳಿ ಬಿಡುವಂತೆ ತಿಳಿಸಿದ್ದಾರೆ. ಬಳಿಕ ನಾನು ಅವರನ್ನು ಹತ್ತಿಸಿಕೊಂಡು ಮನೆಯ ಗೇಟ್ ಬಳಿ ಬಿಟ್ಟು, ಬಾಡಿಗೆ ತೆಗೆದುಕೊಂಡು ಹೊರಟು ವಾಪಸ್ ತೆರಳಿದೆ. ಆದರೆ ೧೫ ನಿಮಿಷಗಳಲ್ಲೇ ಅದೇ ವ್ಯಕ್ತಿ ಸಂತೆಕಟ್ಟೆಯಲ್ಲಿನ ಆಟೊ ಸ್ಟ್ಯಾಂಡ್ ಗೆ ಮರಳಿ ಬಂದರು. ಆಗ ೧೦ ನಿಮಿಷ ಅಲ್ಲಿಯೇ ನಿಲ್ಲಿ ಅಂದಿದ್ದರೆ, ನಾನೇ ನಿಂತು ಮರಳಿ ಕರೆತರುತ್ತಿದ್ದೆನಲ್ಲ ಎಂದು ಹೇಳಿದೆ. ಆಗ ಅವರು ಪರವಾಗಿಲ್ಲ ಎಂದು ಹೇಳುತ್ತಾ ಮತ್ತೊಂದು ಆಟೊದಲ್ಲಿ ತೆರಳಿದ್ದಾರೆ. ಮಾರ್ಗಮಧ್ಯೆ ವೇಗವಾಗಿ ಹೋಗುವಂತೆ ಆಟೊ ಚಾಲಕನಿಗೆ ಆ ವ್ಯಕ್ತಿ ಹೇಳುತ್ತಿದ್ದನಂತೆ. ಆದರೆ ಟ್ರಾಫಿಕ್ ಇದ್ದ ಕಾರಣ ಜಾಸ್ತಿ ವೇಗವಾಗಿ ಹೋಗಲಾಗದು ಎಂದು ಚಾಲಕ ಹೇಳಿದ್ದಾನೆ ಎಂದು ಶಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾತ್ ರೂಮ್ ನಲ್ಲಿ ಅವಿತುಕೊಂಡ ಅತ್ತೆ, ಮನೆಯೊಳಗೆ ಏನಾಗುತ್ತಿದೆ ಎಂದು ನೋಡಲು ಹೋಗಿ ಸಾವಿಗೀಡಾದ ಬಾಲಕ

ಕೃತ್ಯವನ್ನು ತಡೆಸಿಸಿಟಿವಿ ದೃಶ್ಯಾವಳಿಗಳ ಆಧರಿಸಿ ತನಿಖೆ:ಯಲು ಬಂದ ಹಸೀನಾ ಅವರ ಅತ್ತೆಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸೊಂಟಕ್ಕೂ ಇರಿದು ಕೊಲೆಗೆ ಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಸೀನಾ ಅವರ ಅತ್ತೆ ದುಷ್ಕರ್ಮಿಯಿಂದ ತಪ್ಪಿಸಿಕೊಂಡ ಶೌಚಾಲಯದಲ್ಲಿ ಅವಿತು ಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಮೃತ ಅಸೀಮ್ ಬ್ರಹ್ಮಾವರ ಖಾಸಗಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೆರೆ ಮನೆಯ ಸ್ನೇಹಿತರೊಂದಿಗೆ ಆಟವಾಡಲು ಈ ಬಾಲಕ ಸೈಕಲ್‌ನಲ್ಲಿ ತೆರಳಿದ್ದ. ಬೆಳಗ್ಗೆ 8.30 ರ ಸುಮಾರಿಗೆ ತಿಂಡಿ ತಿನ್ನುವುದಕ್ಕೆ ಮನೆಗೆ ಬಂದಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಮೂವರನ್ನು ಆರೋಪಿ ಕೊಲೆಗೈದಿದ್ದ. ಕೂಗಾಟದ ಸದ್ದು ಕೇಳಿದ ಬಾಲಕ ಮನೆಯ ಅಂಗಳದಲ್ಲೇ ಸೈಕಲ್ ಬಿಟ್ಟು ಮನೆಯೊಳಗೆ ಓಡಿದ್ದ. ಈ ವೇಳೆ ಕೃತ್ಯ ಎಸಗಿ ಹೊರಗಡೆ ಬರುತ್ತಿದ್ದ ಆರೋಪಿಯು, ಬಾಲಕ ಅಸೀಮ್ ಮನೆಯೊಳಗೆ ಬರುತ್ತಿದ್ದಂತೆಯೇ ಹಾಲ್‌ನಲ್ಲೇ ಆತನ ಹೊಟ್ಟೆಗೆ ಚೂರಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಸೀಮ್ ಅಲ್ಲೇ ಅಸುನೀಗಿದ್ದಾನೆ.

ಕೃತ್ಯ ನಡೆಸಿದ ಆರೋಪಿ ಮನೆಯಿಂದ ಪರಾರಿಯಾಗಿ ಸಂತೆಕಟ್ಟೆ ಜಂಕ್ಷನ್‌ನಿಂದ ಬಲಾಯಿ ಪಾದೆ ಅಲ್ಲಿಂದ ಉದ್ಯಾವರ ತನಕ ತೆರಳಿರುವ ದೃಶ್ಯಾವಳಿಗಳನ್ನು ಪೊಲೀಸರು ಕಲೆ ಹಾಕಿದ್ದು, ಉಡುಪಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner