Udupi: ಮಲ್ಪೆಯ 7 ಮೀನುಗಾರರ ಅಪಹರಣ, ಒತ್ತೆಯಾಳಾಗಿರಿಸಿದ ದುಷ್ಕರ್ಮಿಗಳು
Udupi Fishermen: ಆಳಸಮುದ್ರ ಬೋಟನ್ನು ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ಸಹಿತ ಮಲ್ಪೆಯ 7 ಮಂದಿ ಮೀನುಗಾರರನ್ನು 25 ಜನರ ತಂಡ ಅಪಹರಿಸಿದ ಘಟನೆ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ನಡೆದಿದೆ. (ವರದಿ: ಹರೀಶ ಮಾಂಬಾಡಿ)

ಉಡುಪಿ: ಮೀನುಗಾರಿಕೆ ಮುಗಿಸಿ ವಾಪಸು ಬರುತ್ತಿರುವ ಆಳಸಮುದ್ರ ಬೋಟನ್ನು ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ಸಹಿತ 7 ಮಂದಿ ಮೀನುಗಾರರನ್ನು 25 ಜನರ ತಂಡ ಅಪಹರಿಸಿದ ಘಟನೆ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ನಡೆದಿದೆ. ಮಲ್ಪೆಯ ಚೇತನ್ ಸಾಲ್ಯಾನ್ ಅವರಿಗೆ ಸೇರಿದ ಕೃಷ್ಣನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿದೆ. ಅದರಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಗರಾಜ್ ಹರಿಕಾಂತ್, ನಾಗರಾಜ್ ಎಚ್., ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಹ್ಮಣ್ಯ ಖಾರ್ವಿ ಅವರನ್ನು ಬಂಧನದಲ್ಲಿರಿಸಲಾಗಿದೆ.
ಫೆ. 26ರ ತಡರಾತ್ರಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರು ಕಡೆ ಬರುತ್ತಿರುವಾಗ ಭಟ್ಕಳ ಸಮೀಪ ಬೋಟಿನ ಬಲೆ ಫ್ಯಾನಿಗೆ ಬಿದ್ದು ಎಂಜಿನ್ ಸ್ಥಗಿತಗೊಂಡು ಬೋಟು ನಿಂತಿತ್ತು. ಬೋಟು ನಿಂತ ವೇಳೆ ಅದನ್ನು ಗಮನಿಸತೊಡಗಿದ್ದಾಗ ಎಲ್ಲಿಂದಲೋ ಬಂದ ಸುಮಾರು 25 ಮಂದಿ ಒಮ್ಮಿಂದೊಮ್ಮೆಲೆ ಬಂದು ಅಕ್ರಮಣಗೈದು ಬೋಟನ್ನು ತೀರ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬೋಟಿನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, 7,500 ಲೀ ಡೀಸೆಲ್ ಅನ್ನು ದೋಚಿದ್ದಲ್ಲದೆ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬೋಟಿನ ಮೀನುಗಾರರ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು ಅಪಹರಣಕಾರರು ಮೀನುಗಾರರನ್ನು ಬಂಧನದಲ್ಲಿರಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅನಾರೋಗ್ಯಪೀಡಿತ ಕಾರ್ಮಿಕ ಕುಸಿದು ಬಿದ್ದು ಸಾವು
ಕೆಲ ದಿನಗಳಿಂದ ತಲೆಯಲ್ಲಿ ಗಾಯವಾಗಿ ಸ್ವಯಂವೈದ್ಯಕೀಯ ಚಿಕಿತ್ಸೆ ಮಾಡಿಕೊಂಡಿದ್ದ ಕಾರ್ಮಿಕನೋರ್ವ ಕೆಲಸದ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಘಟನೆ ನಡೆದಿದೆ. ಬಿಹಾರದ ಸಮಸ್ತಿಪುರದ ಅರ್ಜುನ್ ಮೃತಪಟ್ಟವರು. ಈ ಕುರಿತು ಅವರ ಪುತ್ರ ಪೊಲೀಸರಿಗೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇತ್ರಾವತಿ ನದಿ ತೀರದಲ್ಲಿರುವ ರಸ್ತೆ ಕಾಮಗಾರಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ತಾತ್ಕಾಲಿಕ ಶೆಡ್ ಕ್ಯಾಂಪ್ನಲ್ಲಿ ವಾಸ್ತವ್ಯ ಇದ್ದ ಅರ್ಜುನ್, ಆಗಾಗ ಬರುತ್ತಿದ್ದ ವಿಪರೀತ ತಲೆನೊವಿಗೆ ಮಾತ್ರೆಗಳನ್ನು ಸೇವಿಸುತ್ತಿದ್ದರು. ಅವರು ವೈದ್ಯರಿಂದ ಯಾವುದೇ ಚಿಕಿತ್ಸೆಯನ್ನು ಪಡೆಯುತ್ತಿರಲಿಲ್ಲ. ಸುಮಾರು 12 ದಿನಗಳ ಹಿಂದೆ ತಲೆಯಲ್ಲಿ ಒಂದು ಗಾಯ ಉಂಟಾಗಿದ್ದು, ಮೆಡಿಕಲ್ ನಿಂದ ಮದ್ದು ತಂದು ಹಚ್ಚಿಕೊಂಡಿದ್ದರು. ಫೆ.25ರಂದು ರಾತ್ರಿ ಊಟ ಮಾಡಿ ಮಲಗಿದ್ದ ಅವರು ಮರುದಿನ ಶೆಡ್ ನಿಂದ ಹೊರಗೆ ಹೋಗಿದ್ದ ಸಮಯ ಕೆಳಗೆ ಬಿದ್ದಿದ್ದು, ಅವರ ಬಾಯಿಯಿಂದ ರಕ್ತ ಬರುತ್ತಿದ್ದುದನ್ನು ನೋಡಿ ಇತರರೊಂದಿಗೆ ಸೇರಿ ಚಿಕಿತ್ಸೆ ಬಗ್ಗೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭ ವೈದ್ಯರಿಗೆ ತೋರಿಸಿದಾಗ ಅರ್ಜುನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿದೆ. ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಾಗ ಉಂಟಾದ ಗಾಯದಿಂದ ಅಥವಾ ಇತರ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು

ವಿಭಾಗ