ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು; ಮನೆಯೊಳಗಿನ ಅತಿ ಭದ್ರತಾ ವ್ಯವಸ್ಥೆಯೇ ದುರಂತಕ್ಕೆ ಕಾರಣವಾಯ್ತೇ?
ಕನ್ನಡ ಸುದ್ದಿ  /  ಕರ್ನಾಟಕ  /  ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು; ಮನೆಯೊಳಗಿನ ಅತಿ ಭದ್ರತಾ ವ್ಯವಸ್ಥೆಯೇ ದುರಂತಕ್ಕೆ ಕಾರಣವಾಯ್ತೇ?

ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು; ಮನೆಯೊಳಗಿನ ಅತಿ ಭದ್ರತಾ ವ್ಯವಸ್ಥೆಯೇ ದುರಂತಕ್ಕೆ ಕಾರಣವಾಯ್ತೇ?

ಉಡುಪಿ ಅಂಬಲಪಾಡಿಯ ಮನೆಯಲ್ಲಿ ನಡೆದ ಅಗ್ನಿ ದುರಂತದಿಂದ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೇಲ್ನೋಟಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದ ನಡೆದಿದೆ ಎನ್ನಲಾದ ಘಟನೆಯಿಂದ, ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟ ಹೆಸರು ಮಾಡಿದ್ದ ಅಶ್ವಿನಿ ಶೆಟ್ಟಿ ಹಾಗೂ ಪತಿ ರಮಾನಂದ ಶೆಟ್ಟಿ ಸಾವನ್ನಪ್ಪಿದ್ದಾರೆ.

ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು
ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು

ಉಡುಪಿ: ಸೋಮವಾರ ಬೆಳಗ್ಗೆ ಉಡುಪಿಯ ಅಂಬಲಪಾಡಿ ಎಂಬಲ್ಲಿ ನಡೆದ ಅಗ್ನಿದುರಂತದಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಪತಿ ರಮಾನಂದ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಅಶ್ವಿನಿ ಶೆಟ್ಟಿ ಮಂಗಳವಾರ ಮಧ್ಯಾಹ್ನ ಜೀವನ್ಮರಣ ಹೋರಾಟದ ಬಳಿಕ ಅಸು ನೀಗಿದ್ದಾರೆ.

ರಮಾನಂದ ಶೆಟ್ಟಿ ದಂಪತಿಯು ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಾಗಿದ್ದ ರಮಾನಂದ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಚೇತನಾ ಘಟಕದ ಕೋಶಾಧಿಕಾರಿ, ಪಂದುಬೆಟ್ಟು ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸೇರಿ ನಾನಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರು. ಸಿಂಗಾಪುರದಲ್ಲೂ ಅವರು ಉದ್ಯಮ ಹೊಂದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಅಶ್ವಿನಿ ಶೆಟ್ಟಿ

ಅಶ್ವಿನಿ ಶೆಟ್ಟಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 90 ಸಾವಿರ ಫಾಲೋವರ್‌ಗಳಿದ್ದಾರೆ. ಅಶ್ವಿನಿ ಶೆಟ್ಟಿ ತಮ್ಮ ಖಾತೆಯ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುತ್ತಿರುವುದಲ್ಲದೆ ಖಾದ್ಯವೈವಿಧ್ಯಗಳನ್ನೂ ಅನಾವರಣಗೊಳಿಸುತ್ತಿದ್ದರು. Ballal's Caboose ಯೂಟ್ಯೂಬ್ ತಾಣದ ಮೂಲಕ ಪ್ರಸಿದ್ಧರಾಗಿದ್ದರು. ಸಾಮಾಜಿಕ, ಆಧ್ಯಾತ್ಮ, ಬದುಕು, ಜೀವನಶೈಲಿಯ ಕುರಿತು ಅವರ ವಿಡಿಯೋ ಕಂಟೆಂಟ್‌ಗಳು ಜನಪ್ರಿಯವಾಗಿದ್ದವು. ಅವರ ನಿಧನದ ಬಳಿಕ ಅಭಿಮಾನಿಗಳು ಅಶ್ವಿನಿ ಶೆಟ್ಟಿ ಅವರ ವಿಡಿಯೋಗಳನ್ನು ಶೇರ್ ಮಾಡಿ ಕಂಬನಿ ಮಿಡಿಯುತ್ತಿದ್ದಾರೆ.

ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದ ಅಶ್ವಿನಿ ಶೆಟ್ಟಿ, ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿದ್ದರು. ಬಂಟರ ಸಂಘದಲ್ಲಿ ಅವರು ಸಕ್ರಿಯವಾಗಿದ್ದರು.

56 ವರ್ಷದ ರಮಾನಂದ ಶೆಟ್ಟಿ, 48ರ ಹರೆಯದ ಪತ್ನಿ ಅಶ್ವಿನಿ ಶೆಟ್ಟಿ ಮತ್ತು 20ರ ಹರೆಯದ ಹಂಸಿಜಾ ಮತ್ತು 16ರ ಹರೆಯದ ಅಭಿಕ್ ಜೊತೆ ಅಂಬಲಪಾಡಿಯ ಮನೆಯಲ್ಲಿ ವಾಸವಾಗಿದ್ದರು. ಬೆಳಗ್ಗೆ ಸುಮಾರು 5.50ರ ವೇಳೆ ದುರಂತ ನಡೆದ ಕುರಿತು ಅಗ್ನಿಶಾಮಕದಳಕ್ಕೆ ದೂರವಾಣಿ ಕರೆ ಬಂದಿತ್ತು. ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿತ್ತು.

ಅಗ್ನಿಶಾಮಕದಳ ಮನೆಗೆ ತಲುಪಿದ ವೇಳೆ ಮನೆ ಬಾಗಿಲು ತೆರೆಯಲೂ ಆಗಿರದ ಸ್ಥಿತಿ ನಿರ್ಮಾನವಾಗಿತ್ತು. ಕಿಟಕಿ ಗಾಜುಗಳನ್ನು ಉಪಕರಣಗಳ ಮೂಲಕ ಒಡೆದು ಸಿಬಂದಿ ಪ್ರವೇಶಿಸಿದ ವೇಳೆ ರಮಾನಂದ ಶೆಟ್ಟಿ ಬಾಗಿಲ ಬಳಿ ಬಿದ್ದಿದ್ದರೆ, ಅಶ್ವಿನಿ ಬೆಡ್ ರೂಮ್‌ನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಹೊರತಂದು, ಪ್ರಾಥಮಿಕ ಚಿಕಿತ್ಸೆ ನೀಡಿ ಮಣಿಪಾಲ ಕೆಎಂಸಿಗೆ ದಾಖಲಿಸಲಾಯಿತು. ಶೌಚಾಲಯದೊಳಗೆ ದಂಪತಿಯ 20 ವರ್ಷದ ಪುತ್ರಿ ಮತ್ತು 16 ವರ್ಷದ ಮಗ ಇದ್ದರು. ಮನೆಯೊಳಗೆ ಸಂಪೂರ್ಣ ಭದ್ರತೆ ಇದ್ದ ಕಾರಣ ಬಾಗಿಲುಗಳು ಸ್ವಯಂಲಾಕ್ ಆಗಿದ್ದವು. ಸುರಕ್ಷತೆಯ ಗ್ಲಾಸ್‌ಗಳನ್ನು ಅಳವಡಿಸಿದ್ದ ಕಾರಣದಿಂದ ಅವುಗಳನ್ನು ಒಡೆಯುವುದು ಕಷ್ಟವಾಗಿತ್ತು. ಮನೆಯೊಳಗೆ ಸಂಪೂರ್ಣವಾಗಿ ಮರದ ವಸ್ತುಗಳಿಂದ ವಿನ್ಯಾಸಗೊಂಡಿದ್ದ ಹಿನ್ನೆಲೆಯಲ್ಲಿ ಬೆಂಕಿ ಎಲ್ಲವನ್ನೂ ಆಹುತಿಗೆ ತೆಗೆದುಕೊಂಡಿತ್ತು.

ಅತ್ಯಾಧುನಿಕ ವ್ಯವಸ್ಥೆಯಿದ್ದರೂ ತಪ್ಪದ ಅನಾಹುತ

ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯೊಳಗೆ ಸಂಪೂರ್ಣ ಹೊಗೆ ಆವರಿಸಿದೆ. ಮರದ ಪರಿಕರಗಳು ಹೊತ್ತಿ ಉರಿದಿವೆ. ಮೂರು ಮಹಡಿಗಳ ಮನೆಯ ತುಂಬಾ ಹೊಗೆ ಆವರಿಸಿದೆ. ಈ ವೇಳೆ ಬಾಗಿಲು ತೆರೆಯಲು ರಮಾನಂದ ಶೆಟ್ಟಿ ಪ್ರಯತ್ನಿಸಿದ್ದಾರೆ. ಆದರೆ ಭದ್ರತೆ ಕಾರಣದಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಮನೆಯನ್ನು ಅತ್ಯಾಧುನಿಕ ಫರ್ನೀಚರ್‌ಗಳಿಂದ ವಿನ್ಯಾಸಗೊಳಿಸಲಾಗಿತ್ತು. ಸೆಂಟ್ರಲ್ ಎಸಿ ಇತ್ತು. ಮನೆಗೆ ಡಬಲ್ ಡೋರ್ ಭದ್ರತೆ ಇತ್ತು. ಗಾಜುಗಳೂ ಸುಲಭವಾಗಿ ಒಡೆಯುವಂಥದ್ದಾಗಿರಲಿಲ್ಲ. ಇವೆಲ್ಲವೂ ಅಚ್ಚುಕಟ್ಟಾಗುತ್ತ. ಆದರೆ ಇಷ್ಟೆಲ್ಲಾ ಭದ್ರತಾ ವ್ಯವಸ್ಥೆಗಳು ಇದ್ದರೂ ವೆಂಟಿಲೇಶನ್‌ಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಅಗ್ನಿ ಅವಘಡ ಸಂಭವಿಸುವ ವೇಳೆ ಎಚ್ಚರಿಸುವ ಅಲಾರಂ ಕೂಡ ಇರಲಿಲ್ಲ. ಇಷ್ಟೆಲ್ಲಾ ನಡೆದರೂ ಮನೆಯ ಹೊರಭಾಗದಲ್ಲಿ ಮೂರು ಗ್ಯಾಸ್ ಸಿಲಿಂಡರ್ ಇತ್ತು. ಅದು ಸ್ಫೋಟಗೊಂಡಿರಲಿಲ್ಲ. ಮನೆಯೊಳಗೆ ಗಾಳಿ ಸಂಚಾರಕ್ಕೆ ಆದ ಅಡಚಣೆಯಿಂದಾಗಿಯೇ ಪತಿ-ಪತ್ನಿ ಪ್ರಾಣ ಕಳೆದುಕೊಳ್ಳಬೇಕಾಯಿತು.

ಅಭಿಮಾನಿಗಳ ಅಶ್ರುತರ್ಪಣ

ಇತ್ತೀಚೆಗೆ ಅಶ್ವಿನಿ ಶೆಟ್ಟಿಯವರ ಒಂದು ವಿಡಿಯೋ ನೋಡ್ತಾ ಇದ್ದೆ, ಮನೆಯ ಹಿತ್ತಲಲ್ಲಿರುವ ಬಾಳೆ ಗಿಡದಿಂದ ಒಂದು ಕೊಡಿ ಬಾಳೆ ಎಲೆ ಕತ್ತರಿಸಿ ಮನೆಯ ಒಳಗೆ ಕೊಂಡು ಹೋಗುವಾಗ ಇಡೀ ಬಾಳೆಎಲೆ ಕೊಂಡು ಹೋಗಬಾರದು, ಸಾವು ನಡೆದ ಮನೆಯಲ್ಲಿ ಮಾತ್ರ ಇಡೀ ಬಾಳೆ ಎಲೆ ಕೊಂಡು ಹೋಗುವುದು ಎಂದು ಅವರ ಮಗನ ಬಳಿ ಹೇಳಿ ಇಡೀ ಎಲೆ ತೆಗೆದರೂ ಅದರ ಒಂದು ಸಣ್ಣ ತುಂಡು ಆದರೂ ಕತ್ತರಿಸಿ ನಂತರ ಕೊಂಡು ಹೋಗಬೇಕು ಎಂದಿದ್ದರು , ಆದರೆ ಆ ಸಾವು ಅವರ ಮನೆಗೇ ಬರುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ. ಛೇ... ಹೀಗಾಗಬಾರದಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಸಂದೀಪ್ ಲೋಬೊ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.