ಕನ್ನಡ ಸುದ್ದಿ  /  ಕರ್ನಾಟಕ  /  Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

ಉಡುಪಿಯಲ್ಲಿ ಲಾರ್ವಾ ಸಮೀಕ್ಷೆ ಆರಂಭವಾಗಿದೆ. ಜ್ವರ ಪ್ರಕರಣಗಳಲ್ಲಿ ಡೆಂಗ್ಯೂ ಇರುವ ಪ್ರಕರಣಗಳೂ ಕಾಣಿಸಿದ ಕಾರಣ, ಆರೋಗ್ಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ.

ಉಡುಪಿಯಲ್ಲಿ ಡೆಂಗ್ಯೂ ಹಾವಳಿ ಕಾಣಿಸಿಕೊಂಡಿದೆ
ಉಡುಪಿಯಲ್ಲಿ ಡೆಂಗ್ಯೂ ಹಾವಳಿ ಕಾಣಿಸಿಕೊಂಡಿದೆ

ಉಡುಪಿ: ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿತ್ತು. ತತ್ಪರಿಣಾಮವಾಗಿ ಈಗ ಕೆಲವೆಡೆ ಡೆಂಗ್ಯೂ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರು ಹೆಚ್ಚಾಗಿ ಇರುವ ಪ್ರದೇಶಗಳ ಸಹಿತ ಈ ಪ್ರಕರಣಗಳು ಕಂಡುಬರುವ ಜಾಗಗಳಲ್ಲಿ ಆರೋಗ್ಯ ಇಲಾಖಾಧಿಕಾರಿಗಳು ನಿಗಾ ವಹಿಸಿದ್ದಾರೆ. ಉಡುಪಿಯಲ್ಲಿ ಲಾರ್ವಾ ಸಮೀಕ್ಷೆ ಆರಂಭವಾಗಿದೆ. ಜ್ವರ ಪ್ರಕರಣಗಳಲ್ಲಿ ಡೆಂಗ್ಯೂ ಇರುವ ಪ್ರಕರಣಗಳೂ ಕಾಣಿಸಿದ ಕಾರಣ, ಆರೋಗ್ಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸಮಗ್ರ ಲಾರ್ವಾ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಮಳೆಯ ನಂತರ ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದೆ. ಈವರೆಗೆ 47 ಪ್ರಕರಣಗಳು ಈವರೆಗೆ ದಾಖಲಾಗಿವೆ. ನಗರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ಜಿಲ್ಲೆಯಾದ್ಯಂತ ಲಾರ್ವಾ ನಿವಾರಕ ಹಾಗೂ ಸೊಳ್ಳೆ ನಿರ್ಮೂಲನಾ ಕಾರ್ಯಕ್ರಮ ಆರಂಭಿಸಿದೆ.

ಈ ವರ್ಷದ ಜನವರಿಯಿಂದ ಉಡುಪಿಯಲ್ಲಿ ಈಗಾಗಲೇ 47 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷದ ಒಟ್ಟು ಪ್ರಕರಣಗಳ ಸಂಖ್ಯೆ 635. ಉಡುಪಿಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆಯು ಮಳೆಗಾಲ ಸಮೀಪಿಸುತ್ತಿರುವಂತೆ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

ಬೇಸಿಗೆ ಮಳೆಯು ಬಿಟ್ಟುಬಿಟ್ಟು ಸುರಿಯುತ್ತಿರುವುದು ಈ ಸಮಸ್ಯೆಗೆ ಕಾರಣವೆನ್ನಲಾಗಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚಳಕ್ಕೆ ಇಂಥ ವಾತಾವರಣ ಪೂರಕವಾಗಿರುತ್ತವೆ. ಡೆಂಗ್ಯೂ ಹರಡುವ ಈಡಿಸ್ಈಜಿಪ್ಟೈ ಸೊಳ್ಳೆಯ ಸಂತಾನೋತ್ಪತ್ತಿ ಹೆಚ್ಚಾಗುತ್ತಿದೆ. ಮನೆ, ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ತಡೆಯಬೇಕು.

ಹೆಣ್ಣು ಈಡಿಸ್ಈಜಿಪ್ಟೈ ಸೊಳ್ಳೆ ಕಡಿತವಾದರೆ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆಯು ಡೆಂಗ್ಯೂ ವೈರಸ್ ವಾಹಕವಾಗಿದ್ದು, ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಹಗಲಿನಲ್ಲಿ ಈ ಸೊಳ್ಳೆ ಕಡಿಯುತ್ತದೆ. ಆದರೆ ತಕ್ಷಣಕ್ಕೆ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಏಳು ದಿನಗಳ ಬಳಿಕ ಒಂದೊಂದೇ ರೋಗ ಲಕ್ಷಣಗಳಾದ ತಲೆನೋವು, ಮೈಕೈನೋವು, ಕೀಲುನೋವು, ವಾಕರಿಕೆ, ವಾತ, ತುರಿಕೆ, ಕಣ್ಣುಗಳ ಹಿಂಭಾಗ ನೋವು ಕಾಣಿಸಿಕೊಳ್ಳಲಾರಂಭಿಸುತ್ತವೆ. ಈ ಸಂದರ್ಭ ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರು ಕುಡಿಯುವುದು ಅತ್ಯಂತ ಜರೂರಿ. ಜ್ವರ ಬಾಧಿತರು ಸ್ನಾನಕ್ಕೂ ಬಿಸಿನೀರನ್ನೇ ಬಳಸಬೇಕು. ಹಾಗೆಯೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ಮಾಡಿದೆ.

ಬಳಕೆಯಾಗದ ಸಿಹಿನೀರು, ಏರ್ ಕೂಲರ್‌ಗಳು ಮತ್ತು ಬಿಸಾಡಿದ ಟೈರ್‌ಗಳಲ್ಲಿ ಲಾರ್ವಾಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಸಂತಾನಾಭಿವೃದ್ಧಿ ಸ್ಥಳಗಳ ಆರಂಭಿಕ ಪತ್ತೆ ಮತ್ತು ನಿರ್ಮೂಲನೆಯು ನಿರ್ಣಾಯಕವಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಡುಪಿ ನಗರ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳ ಉಲ್ಬಣವಾಗಿತ್ತು. ಬಳಿಕ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು, ಸಮುದಾಯ ವೈದ್ಯಕೀಯ ಇಲಾಖೆ, ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ (DVBDCP), ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸೊಳ್ಳೆ ನಿಯಂತ್ರಣ ಉಪಕ್ರಮಗಳನ್ನು ನಡೆಸಲಾಯಿತು.

ಡೆಂಗ್ಯೂ ಹರಡುವುದನ್ನು ತಡೆಯಲು ಈ ವರ್ಷವೂ ಇದೇ ರೀತಿಯ ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೀಗಿವೆ. 2022ರಲ್ಲಿ 513 ಪ್ರಕರಣಗಳು, 2021ರಲ್ಲಿ 380 ಪ್ರಕರಣಗಳು, 2020ರಲ್ಲಿ 139 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ವಸತಿ ಸಮುಚ್ಚಯಗಳಲ್ಲೂ ಹೆಚ್ಚುವರಿ ಜಾಗರೂಕತೆಯ ಅಗತ್ಯವಿರುತ್ತದೆ. ಹೀಗಾಗಿ ಡೆಂಗೂ ಕುರಿತು ಜಾಗೃತಿ ಮೂಡಿಸಬೇಕಾಗಿರುವುದು ಅಗತ್ಯವಾಗಿದೆ.

IPL_Entry_Point