Udupi News: ಕೃಷ್ಣನೂರಿನಲ್ಲಿ ಜಲ ಸಂಕಷ್ಟ, ಉಡುಪಿಯಲ್ಲೂ3 ದಿನಕ್ಕೊಮ್ಮೆ ನೀರಿನ ರೇಷನಿಂಗ್
ಕನ್ನಡ ಸುದ್ದಿ  /  ಕರ್ನಾಟಕ  /  Udupi News: ಕೃಷ್ಣನೂರಿನಲ್ಲಿ ಜಲ ಸಂಕಷ್ಟ, ಉಡುಪಿಯಲ್ಲೂ3 ದಿನಕ್ಕೊಮ್ಮೆ ನೀರಿನ ರೇಷನಿಂಗ್

Udupi News: ಕೃಷ್ಣನೂರಿನಲ್ಲಿ ಜಲ ಸಂಕಷ್ಟ, ಉಡುಪಿಯಲ್ಲೂ3 ದಿನಕ್ಕೊಮ್ಮೆ ನೀರಿನ ರೇಷನಿಂಗ್

ನೀರಿನ ಸಮಸ್ಯೆ ಕರಾವಳಿ ಭಾಗವನ್ನೂ ಬಿಟ್ಟಿಲ್ಲ. ಉಡುಪಿ( Udupi) ನಗರದಲ್ಲೂ ಮೂರು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಉಡುಪಿ( Udupi) ಯಲ್ಲೂ ಈ ಬಾರಿ ನೀರಿನ ಸಮಸ್ಯೆ ಜೋರಾಗಿದೆ.
ಉಡುಪಿ( Udupi) ಯಲ್ಲೂ ಈ ಬಾರಿ ನೀರಿನ ಸಮಸ್ಯೆ ಜೋರಾಗಿದೆ.

ಉಡುಪಿ: ಕರ್ನಾಟಕ ಕರಾವಳಿಯಲ್ಲಿ ನೀರಿಗೆ ಕೊರತೆ ಇಲ್ಲ ಎಂದು ನೇತ್ರಾವತಿ ನದಿಯ ಪಾತ್ರವನ್ನೇ ತಿರುಗಿಸಲು ಹೊರಟವರು ಈಗ ಕರಾವಳಿಯಲ್ಲೊಮ್ಮೆ ಅಡ್ಡಾಡಬೇಕು!. ಕಡಲತಡಿಯ ಪ್ರಮುಖ ನಗರ ಮಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿನ ರೇಷನಿಂಗ್ ಆರಂಭಗೊಂಡಿದೆ. ಮಂಗಳೂರಿನಲ್ಲಷ್ಟೇ ನೀರಿನ ಕೊರತೆ ಎಂದು ಉಡುಪಿಗೆ ಹೋದರೆ ಅಲ್ಲೂ ನೀರಿಲ್ಲ ಎಂಬಂತಾಗಿದೆ. ಸಮುದ್ರದಲ್ಲಿ ಅಗಾಧ ಜಲರಾಶಿಯನ್ನು ನೋಡಿ ಸುಮ್ಮನೆ ಕೂರಬೇಕಷ್ಟೇ. ಇದೀಗ ಉಡುಪಿ ನಗರಸಭಾ ವ್ಯಾಪ್ತಿಯ ಕೆಲ ಪ್ರದೇಶಗಳಿಗೆ ಬುಧವಾರದಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆಗಲಿದೆ. ಮಂಗಳೂರಾದರೋ ವಾಸಿ… ಅಲ್ಲಿ ಎರಡು ದಿನಕ್ಕೊಮ್ಮೆಯಾದರೂ ನೀರು ಪೂರೈಕೆ ಆಗುತ್ತಿದೆ!.

ರೇಷನಿಂಗ್ ಸಂಬಂಧಪಟ್ಟಂತೆ ಈಗಾಗಲೇ ಉಡುಪಿಯನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಕ್ರಮಬದ್ಧವಾಗಿ ನೀರು ಪೂರೈಕೆಯಾಗಲಿದೆ ಎಂದು ಉಡುಪಿ ನಗರಸಭೆ ಹೇಳಿದೆ. ಅದರಂತೆ ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಕಲ್ಮಾಡಿ, ಕೊಡವೂರು, ಪಾಳೆಕಟ್ಟೆ, ದೊಡ್ಡಣಗುಡ್ಡೆ, ವಿಪಿ ನಗರ ,ಹನುಮಂತನಗರ, ಕಕ್ಕುಂಜೆ, ಆದು ಉಡುಪಿಗೆ ಮೇ 8ರಂದು ಅಂದರೆ ಬುಧವಾರ ನೀರು ಪೂರೈಕೆ ಮಾಡಲಾಗುತ್ತಿದೆ. ಮೇ 9ರಂದು ಅನಂತನಗರ, ಈಶ್ವರನಗರ, ಸರಳೇಬೆಟ್ಟು, ಶೀಂಬ್ರ, ಮಣಿಪಾಲ, ವಿದ್ಯಾರತ್ನ ನಗರಕ್ಕೆ ನೀರು ಪೂರೈಸಲಾಗುವುದು. ಮೇ 10ರಂದು ಇಂದಿರಾನಗರ, ಅಜ್ಜರಕಾಡು, ಸಿಂಡಿಕೇಟ್ ಬ್ಯಾಂಕ್ ಪರಿಸರ, ಪುತ್ತೂರು, ಗೋಪಾಲಪುರ, ಸುಬ್ರಹ್ಮಣ್ಯನಗರ, ಹನುಮಂತನಗರ, ಚಿಟ್ಪಾಡಿ, ಮಿಷನ್ ಕಂಪೌಂಡು, ಬುಡ್ನಾರು, ಅಂಬಲಪಾಡಿ ಪ್ರದೇಶಗಳಿಗೆ ನೀರು ಪೂರೈಕೆ ಆಗಲಿದೆ. ಮೇ 11ರ ನಂತರ ಮತ್ತೆ ಇದೇ ಪ್ರಕ್ರಿಯೆ ಮುಂದುವರಿಯಲಿದೆ. ಅಂದರೆ ಮೇ 8ರಂದು ಪೂರೈಕೆಯಾದ ಪ್ರದೇಶಗಳಿಗೆ 11ಕ್ಕೆ, 9ರಂದು ಪೂರೈಕೆಯಾದ ಪ್ರದೇಶಗಳಿಗೆ 12ಕ್ಕೆ ಹಾಗೂ 10ರಂದು ಪೂರೈಕೆಯಾದ ಪ್ರದೇಶಗಳಿಗೆ 13ಕ್ಕೆ ನೀರು ಪೂರೈಕೆ ಮಾಡಲಾಗುವುದು. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉಡುಪಿ ನಗರಸಭೆ ತಿಳಿಸಿದೆ.

ಬಿಸಿಲ ಧಗೆ, ಹಲವೆಡೆ ಉಚಿತ ನೀರು ವಿತರಣೆ

ಕೃಷ್ಣನಗರಿಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿರುವಂತೆಯೇ ಕೆಲವೆಡೆ ಸಮಾಜಸೇವಕರು ಉಚಿತವಾಗಿ ಜ್ಯೂಸು, ನೀರು ವಿತರಿಸುತ್ತಿದ್ದಾರೆ. ಉಡುಪಿಯ ಮಾರುತಿ ವೀಥಿಕಾ ಸರ್ಕಲ್ ಬಳಿ ದಾನಿಗಳ ನೆರವು ಪಡೆದು ನಿಂಬೆ, ಕಿತ್ತಳೆ, ಜಲಜೀರ, ಬೆಲ್ಲದ ಪಾನಕ ಸಹಿತ ಹಲವು ಹಣ್ಣುಗಳ ಜ್ಯೂಸ್, ಹಾಗೂ ನೀರನ್ನು ಸಾರ್ವಜನಿಕರಿಗೆ ಉಚಿತವಾಗಿ ನಾಗರಿಕ ಹಿತರಕ್ಷಣಾ ಸಮಿತಿಯ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನೀಡಲಾಗುತ್ತಿದೆ. ದಿನವೊಂದಕ್ಕೆ 40ರಿಂದ 50 ಲೀಟರ್ ನಷ್ಟು ಜೂಸ್, ನೀರು ಸರಬರಾಜಾಗುತ್ತಿದೆ.

ಉಡುಪಿಯ ಆಯ್ದ ಕಡೆಗಳಲ್ಲಿ ಉಚಿತವಾಗಿ ನೀರು ನೀಡುವ ಕುರಿತು ಅಲ್ಲಿರುವ ಕುಡಿಯುವ ನೀರಿನ ಯಂತ್ರಗಳ ಸ್ಥಿತಿಯನ್ನು ಗಮನಿಸಿಕೊಂಡು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಉಡುಪಿ ನಗರಸಭೆ ತಿಳಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ಬೇಕು ನೀರು

ಕುಡಿಯುವ ನೀರು ಸರಬರಾಜು ಮಾಡುವುದು, ನಲ್ಲಿಗಳಲ್ಲಿ ನೀರು ಒದಗಿಸುವ ವಿಷಯ ಒಂದಾದರೆ, ಇನ್ನು ಸಾರ್ವಜನಿಕ ಸ್ಥಳದಲ್ಲೂ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಮತ್ತೊಂದು ವಿಷಯ. ಹೀಗೆ ನೋಡಿದರೆ, ಉಡುಪಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಕೆಲವು ಸಾಮಾಜಿಕ ಕಳಕಳಿ ಇರುವವರು ಉಚಿತವಾಗಿ ನೀರು ವಿತರಿಸುತ್ತಾರಾದರೂ ಹೆಚ್ಚಿನ ಕಡೆಗಳಲ್ಲಿರುವ ನೀರಿನ ಫಿಲ್ಟರ್ ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬರುತ್ತಾರೆ. ಇಲ್ಲಿ ನೀರಿನ ವ್ಯವಸ್ಥೆ ಇಲ್ಲ. ಉಡುಪಿಯ ಒಳಭಾಗಗಳಿಗೆ ತೆರಳುವ ಪ್ರಯಾಣಿಕರು ಇಲ್ಲಿ ಸೇರುತ್ತಾರೆ. ಆದರೆ ನೀರಿನ ವ್ಯವಸ್ಥೆ ಇಲ್ಲದ ಕಾರಣ ದುಡ್ಡು ಕೊಟ್ಟು ದುಬಾರಿ ನೀರನ್ನು ಕುಡಿಯಬೇಕಾದ ಸ್ಥಿತಿ ಇದೆ.

ಹಾಗೆಯೇ ಕೆಎಸ್ಸಾರ್ಟಿಸಿ ತಂಗುದಾಣ, ಕ್ಲಾಕ್ ಟವರ್ ಸಹಿತ ಪ್ರಮುಖ ಆಯಕಟ್ಟಿನ ಜಾಗಗಳಲ್ಲೂ ನೀರಿನ ವ್ಯವಸ್ಥೆ ಇಲ್ಲ. ಇನ್ನು ಪ್ರಾಣಿ, ಪಕ್ಷಿಗಳಿಗಂತೂ ನೀರೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬಜೆ ಅಣೆಕಟ್ಟಲ್ಲಿ ನೀರು ಇಳಿಮುಖ

ಉಡುಪಿ ಮಣಿಪಾಲ ಅವಳಿ ನಗರಗಳಿಗೆ ಏಕೈಕ ನೀರಿನ ಮೂಲವಾಗಿರುವ ಬಜೆ ಎಂಬಲ್ಲಿ ಸ್ವರ್ಣಾ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟುನಲ್ಲಿ ಈಗ 3.25 ಮೀಟರ್ ನಷ್ಟು ನೀರು ಲಭ್ಯ. ಒಟ್ಟು 6.30 ಮೀಟರ್ ಸಾಮರ್ಥ್ಯದ ಅಣೆಕಟ್ಟುವಿನಲ್ಲಿ ಅರ್ಧಕ್ಕರ್ಧ ನೀರು ಇಳಿಕೆಯಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಪರಿಸ್ಥಿತಿ ಚಿಂತಾಜನಕವಾದೀತು. ಸದ್ಯ ಇರುವ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಸಾಮಾನ್ಯ ಮಟ್ಟಕ್ಕೆ ಮರಳುವವರೆಗೆ ನೀರಿನ ಪಡಿತರ ಜಾರಿಯಲ್ಲಿರಲಿದೆ. ಇದನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner