ಉಡುಪಿಯಲ್ಲಿ ಗ್ಯಾಂಗ್ ವಾರ್; ಸಿನಿಮೀಯ ಮಾದರಿಯ ಘಟನೆಯಲ್ಲಿ ಕಾರುಗಳ ಗುದ್ದಾಟ, ತಲವಾರು ದಾಳಿ, ಇಬ್ಬರನ್ನು ಬಂಧಿಸಿದ ಪೊಲೀಸರು
ಉಡುಪಿಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಉಡುಪಿ ಮಣಿಪಾಲ್ ಹೆದ್ದಾರಿಯಲ್ಲಿ ನಡೆದ ಸಿನಿಮೀಯ ಮಾದರಿಯ ಘಟನೆಯಲ್ಲಿ ಕಾರುಗಳ ಗುದ್ದಾಟ, ತಲವಾರು ದಾಳಿಯ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಉಡುಪಿ: ಜಿಲ್ಲಾ ಕೇಂದ್ರವಾದರೂ ಮಹಾನಗರಕ್ಕೆ ಇನ್ನೂ ಅಭಿವೃದ್ಧಿಗೊಳ್ಳಬೇಕಾದ ಕಡಲನಗರಿ ಉಡುಪಿಯಲ್ಲಿ ಎರಡು ಕಾರುಗಳ ನಡುವಿನ ಗುದ್ದಾಟ ಹಾಗೂ ಬಳಿಕ ಕಾರುಗಳಲ್ಲಿದ್ದವರು ತಲವಾರಿನಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ವಾರದ ಹಿಂದೆ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸಿನಿಮೀಯ ಮಾದರಿಯಲ್ಲಿ ಉಡುಪಿ ನಗರದ ಕುಂಜಿಬೆಟ್ಟು ರಸ್ತೆಯಲ್ಲಿ ರಾತ್ರಿ ವೇಳೆ ಹೊಡೆದಾಡಿಕೊಂಡ ದೃಶ್ಯವಿದು.
ಬಿಳಿ ಮತ್ತು ಕಪ್ಪು ಬಣ್ಣದ ಕಾರ್ಗಳಲ್ಲಿ ಇದ್ದ ಎರಡು ತಂಡಗಳು ರಸ್ತೆ ಮಧ್ಯದಲ್ಲಿ ಜಗಳ ಮಾಡಿಕೊಂಡಿವೆ. ಅದಾದ ಬಳಿಕ ಗಲಾಟೆ ತಾರಕಕ್ಕೇರಿ ಕಾರ್ನಿಂದ ಇನ್ನೊಂದು ಕಾರ್ಗೆ ಒಂದು ತಂಡ ಗುದ್ದಿದೆ. ಆಗ ಒಬ್ಬ ಮತ್ತೊಂದು ಕಾರಿನಲ್ಲಿದ್ದಾತನ ಮೇಲೆ ತಲವಾರ್ ಬೀಸಿದ್ದಾನೆ. ಆತ ಬೀಸಿದ ತಲವಾರ್ ಏಟು ಕಾರ್ಗೆ ಬಿದ್ದು ಕಾರ್ ಗಾಜು ಪುಡಿ ಪುಡಿಯಾಗಿದೆ. ಮೂಲಗಳ ಪ್ರಕಾರ ಇವರು ಕಾಪು ಮೂಲದವರು ಎನ್ನಲಾಗಿದೆ. ಉಡುಪಿಯ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯಾದ ಕುಂಜಿಬೆಟ್ಟುವಿನಲ್ಲಿ ಈ ಘಟನೆ ನಡೆದ ಸಂದರ್ಭ ರಾತ್ರಿಯಾಗಿದ್ದು, ಯಾರೋ ಮೇಲ್ಭಾಗದಿಂದ ವಿಡಿಯೋ ಮಾಡಿದ್ದಾರೆ. ಅದೀಗ ವೈರಲ್ ಆಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳುವುದೇನು?
ಉಡುಪಿ ಟೌನ್ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ವಾರದ ಕೆಳಗೆ ಒಂದೆ ಗ್ಯಾಂಗಿನ ಇಬ್ಬರ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಮೇ 20ರಂದು ಘಟನೆ ನಡೆದಿದ್ದು, ಈ ಕುರಿತು ಎಫ್.ಐ.ಆರ್. ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.
ವಿಡಿಯೋವನ್ನು ಗಮನಿಸಿ ಕೇಸ್ ದಾಖಲು ಮಾಡಲಾಗಿದೆ. ಆರೋಪಿಗಳಾದ ಆಶಿಕ್ ಮತ್ತು ರಾಕಿಬ್ ಎಂಬವರು ಒಂದೇ ಗ್ಯಾಂಗ್ ಗೆ ಸೇರಿದವರಾಗಿದ್ದಾರೆ. ಅದನ್ನು ಗರುಡಾ ಗ್ಯಾಂಗ್ ಎನ್ನಲಾಗಿದೆ. ಉಳಿದವರು ನಾಪತ್ತೆಯಾಗಿದ್ದಾರೆ. ಎರಡು ಸ್ವಿಫ್ಟ್ ಕಾರುಗಳು, ಎರಡು ಬೈಕುಗಳು, ಒಂದು ತಲವಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಾ. ಅರುಣ್ ಮಾಹಿತಿ ನೀಡಿದ್ದಾರೆ.
ಸ್ಥಳೀಯರಲ್ಲಿ ಆತಂಕ, ಹೈವೆ ಪಾಟ್ರೋಲ್ ಪೊಲೀಸ್ ಎಲ್ಲಿ ಎಂದು ಪ್ರಶ್ನೆ:
ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಬೆಚ್ಚಿಬೀಳಿಸಿದೆ. ಉಡುಪಿಯಲ್ಲಿ ಹತ್ಯೆ ಘಟನೆಗಳು, ದಾಳಿಗಳು ನಡೆಯುವುದು ಹೊಸದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ ಕಾರುಗಳನ್ನು ಡಿಕ್ಕಿ ಹೊಡೆದುಕೊಂಡು ದಾಳಿ ಮಾಡುವ ಇಂಥ ಘಟನೆಗಳು ನಡೆದ ಸಂದರ್ಭ ಹೈವೆ ಪಾಟ್ರೋಲ್ ಪೊಲೀಸರು ಎಲ್ಲಿ ಹೋಗಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡತೊಡಗಿದ್ದಾರೆ. ಇನ್ನು ಹೊಸ ಹೊಸ ಗ್ಯಾಂಗುಗಳು ಉದ್ಭವವಾಗುತ್ತಿವೆ. ಗರುಡಾ ಗ್ಯಾಂಗ್ ಎಂಬುದು ಹೊಸತಾಗಿ ಇತ್ತೀಚೆಗೆ ಆರಂಭಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇವುಗಳ ಕ್ರೈಮ್ ಹಿಸ್ಟರಿ ಇನ್ನೂ ಅರಿಯಬೇಕಷ್ಟೇ. ಈ ಹೆಸರಿಟ್ಟುಕೊಂಡು ಯುವಕರು ಏನೇನು ಮಾಡುತ್ತಿದ್ದರು ಎಂಬುದನ್ನು ಪೊಲೀಸರು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಬಂಧಿತ ಆಶಿಕ್ ಮತ್ತು ರಾಕಿಬ್ ಹೆಸರಿನ ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆಶಿಕ್ ಕಾಪು ಮೂಲದವರು ಮತ್ತು ರಾಕಿಬ್ ಗುಜ್ಜರಬೆಟ್ಟದವನೆಂದು ಹೇಳಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.