ಕನ್ನಡ ಸುದ್ದಿ  /  Karnataka  /  Udupi News Holi Festival Celebrated Not With Colors Here Gumte Instrument Dance Share Joy Across Community Kub

Holi 2024: ಇದು ಮಲೆನಾಡ ಹೋಳಿ, ಇಲ್ಲಿ ಬಣ್ಣವಿಲ್ಲ, ಗುಮ್ಟೆ ಸದ್ದಿನೊಂದಿಗೆ ಸಂತಸ ಹಂಚುವ ಖುಷಿ, ಹಬ್ಬದ ವಿಡಿಯೋ ನೋಡಿ

ಉತ್ತರ ಕರ್ನಾಟಕದಲ್ಲಿ ಹೋಳಿ ಎಂದರೆ ಬಣ್ಣದಾಟ. ಆದರೆ ಮಲೆನಾಡಿನ ಶಂಕರನಾರಾಯಣದಲ್ಲಿ ಮಾತ್ರ ನೃತ್ಯ ವೈಭವ. ಇಲ್ಲಿದೇ ರೇಖಾಪ್ರಭಾಕರ್‌ ಕುಲಾಲ್‌ ಅವರ ಲೇಖನ.

ಮಲೆನಾಡಿ ಹೋಳಿ ಹಬ್ಬದ ಗುಮ್ಟೆ ನೃತ್ಯದ ಕ್ಷಣ.
ಮಲೆನಾಡಿ ಹೋಳಿ ಹಬ್ಬದ ಗುಮ್ಟೆ ನೃತ್ಯದ ಕ್ಷಣ.

ಹೋಳಿ ಎಂದಾಕ್ಷಣ ಬಹುತೇಕರಿಗೆ ತಟ್ಟನೆ ನೆನಪಾಗುವುದೇ ಬಣ್ಣಗಳು. ಬಣ್ಣದ ಓಕುಳಿಯಾಟ. ಒಬ್ಬರಿಂದೊಬ್ಬರಿಗೆ ಬಣ್ಣ ಎರಚಿ ಸಂತಸ ಪಡುವ ಹಬ್ಬ ಎಂದು. ಆದರೆ, ನನಗೆ ಈ ಬಣ್ಣಗಳನ್ನು ಎರಚುವ ಹೋಳಿ ಇದೆ ಎಂದು ಅನುಭವಕ್ಕೆ ಬಂದಿದ್ದು ಹೊಸನಗರ ತಾಲೂಕಿನ ನಗರಕ್ಕೆ ಶಿಕ್ಷಕಿಯಾಗಿ ಬಂದ ಮೇಲೆ‌. ನನಗೆ ಬಣ್ಣಗಳ ಎರಚಾಟದ ಹೋಳಿ ಖುಷಿ ಕೊಡುವುದೇ ಇಲ್ಲ. ಕಾರಣ ಘಟ್ಟದ ಕೆಳಗೆ ಈ ಬಣ್ಣಗಳ ಎರಚಾಟ ಇಲ್ಲ. ಇಲ್ಲಿ ಹೋಳಿ ಹಬ್ಬ ಎಂದರೆ ಬಣ್ಣಗಳಾಚೆಯ ಒಂದು ಸಾಂಪ್ರದಾಯಿಕ ಕಲೆ ಮೇಳೈಸುವ ಸಂಭ್ರಮ.

ಹೌದು ನಮ್ಮೂರ ಲ್ಲಿ ಹೋಳಿ ಎಂದರೆ, ಮರಾಠಿ ಮತ್ತು ಕುಡುಬಿ ಜನಾಂಗದವರು ಮನೆ ಮನೆಗೆ ಸಂಭ್ರಮ ಹೊತ್ತು ತರುತ್ತಾರಲ್ಲ ಅದು.ನನ್ನೂರು ಶಂಕರನಾರಾಯಣ. ಅಲ್ಲಿ ಕುಪ್ಪಾರಿನ ನಾಯ್ಕರ ಮನೆಯ ಒಂದು ತಂಡ ಪ್ರತೀ ವರ್ಷ ಈ ಹೋಳಿ ತಂಡದವರೊಂದಿಗೆ ಬರುತ್ತಾರೆ. ಅವರ ಆಕರ್ಷಕ ಬಿಳಿ ಉಡುಪಿನ ವಿನ್ಯಾಸ, ತಲೆಗೆ ಮುಂಡಾಸು ಮತ್ತೆ ಅದಕ್ಕೆ ಹೂವಿನ ಅಲಂಕಾರ. ಕೊರಳಿಗೂ ಸಹ ಅಬ್ಬಲಿಗೆ ಹಾಗು ಸುರಗಿ ಮಾಲೆ ಹಾಕಿಕೊಂಡು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ವಿಶೇಷ ಗುಮ್ಟೆ ಹಿಡಿದು ಮನೆ ಮನೆಗೆ ತೆರಳುತ್ತಾರೆ.

ಹೋಳಿಯವರ ತಂಡ ಎಲ್ಲರ ಮನೆಗೆ ಬಂದಾಗ ವಿಶೇಷವಾಗಿ ನಾವು ಅವರಿಗೆ ಬೆಲ್ಲ,ನೀರು ಕೊಟ್ಟು ಆದರಿಸುತ್ತೇವೆ. ಅವರು ಗುಮ್ಟೆ ಹಿಡಿದು ಮರಾಠಿ ಭಾಷೆಯ ಹಾಡಿಗೆ ವಿಶಿಷ್ಟವಾದ ಹೆಜ್ದೆ ಹಾಕಿ ಕುಣಿಯುವುದನ್ನು ನೋಡುವುದೇ ಚೆಂದ. ಗುಮ್ಟೆ ಕುಣಿತದ ನಂತರ ಅದೇ ತಂಡದಿಂದ ಕೋಲಾಟ ಸಹ ನಡೆಯುತ್ತದೆ.ಸುರಗಿ ಸುರ ಸಂಪಿಗೆ ಕೋಲು ಕೋಲಣ್ಣ ಕೋಲೆ. ಎಂದು ಹೇಳುವ ಅವರ ಕೋಲಾಟವು ಸಹ ವಿಶೇಷವಾಗಿ ಆಕರ್ಷಿಸುತ್ತದೆ. ಇಲ್ಲಿ ಮರಾಠಿ ಮತ್ತು ಕುಡುಬಿ ಜನಾಂಗದ ನಡುವೆ ವೇಷಭೂಷಣ, ನರ್ತನ ಹಾಗು ಕೋಲಾಟಗಳಲ್ಲಿ ಸಹ ಭಿನ್ನತೆ ಇದೆ.

ನಾವು ಹೋಳಿ ಹಬ್ಬದ ದಿನಗಳಲ್ಲಿ ಬಹು ಕಾತರದಿಂದ ಕಾಯುತ್ತಿದ್ದದ್ದು ಈ ಕುಣಿತ,ಹಾಡು ವೇಷಭೂಷಣ ಕ್ಕೆ ಮಾತ್ರವಲ್ಲದೇ ಅದರಲ್ಲೊಂದು *ಅಜ್ಜ* ಇರುತ್ತಿದ್ದ. ಅವನ ಬಿಳಿಗಡ್ಡ,ಉದ್ದನೆ ಕೋಲು ಅವನು ಮಕ್ಕಳೊಂದಿಗೆ ಮಾಡುವ ಚೇಷ್ಟೆಗಳು ಬಹು ಪ್ರಿಯವಾಗಿದ್ದವು.

ನಮ್ಮ ಮನೆಗೆ ಕೇವಲ ಕುಪ್ಪಾರು ತಂಡ (ಊರ್ಮನಿ ತಂಡ) ಬರುತ್ತಿತ್ತು. ಉಳಿದ ಎರಡು ತಂಡಗಳು ಬರುತ್ತಿರಲಿಲ್ಲ. ಕಾರಣ ಇಷ್ಟೇ ಊರ್ಮನಿ ತಂಡ ಎಲ್ಲರ ಮನೆಗೂ ಹೋಗುತ್ತಾರೆ. ಉಳಿದವರು ಸ್ವಲ್ಪ ಅನುಕೂಲಸ್ಥರ ಮನೆಗೆ ಹೋಗುತ್ತಿದ್ದರು. ಅವರಿಗೆ ಒಂದಿಷ್ಟು ಮರ್ಯಾದೆ ಮಾಡಲು ಶಕ್ತಿ ಇರಬೇಕು ಎಂಬುದು ಕಾರಣವಾಗಿತ್ತು. ಆದರೆ, ಬಾಲ್ಯದಲ್ಲಿ ನಮಗೆ ಇದರ ಅರಿವಿರಲಿಲ್ಲ. ಪಕ್ಕದ ಮನೆಗೆ ಮೂರು ತಂಡದವರು ಬರುತ್ತಾರೆ. ನಮ್ಮನೆಗೂ ಬರೋಕೆ ಹೇಳಿ ಎಂದು ಅಮ್ಮನ ಹತ್ತಿರ ರಗಳೆ ಮಾಡುತ್ತಿದ್ದೆ. ಅಪ್ಪನ ಹತ್ತಿರ ಹೇಳಲು ಧೈರ್ಯ ಇರಲಿಲ್ಲ ಬಿಡಿ.

ಒಂದು ವರ್ಷ ಏನಾಯಿತು ಎಂದರೆ, ಮಾರ್ಚ್ ಅಲ್ಲಿ ಪರೀಕ್ಷೆ ದಿನಗಳು ಆಗ ನಮ್ಮನೆಗೆ ಇನ್ನೂ ಕರೆಂಟ್ ಬಂದಿರಲಿಲ್ಲ. ನಾನು ಕೋಣೆಯ ಕಿಟಕಿ ಪಕ್ಕ ದೀಪ ಇಟ್ಟಿಕೊಂಡು ಓದುತ್ತಾ ಇದ್ದೆ.ಉಳಿದವರೆಲ್ಲಾ ಮಲಗಿ ಆಗಿದೆ. ದೂರದಲ್ಲಿ ಹೋಳಿ ತಂಡದ ಗೆಜ್ಜೆ ಯ ಶಬ್ದ ಕೇಳುತ್ತಿತ್ತು. ಹತ್ತಿರ ಹತ್ತಿರ ಶಬ್ದ ಕೇಳುತ್ತಿದ್ದ ಹಾಗೆ ನಮ್ಮನೆಗಾದರೂ ಬರಬಾರದೇ ಅಂತ ದೇವರಿಗೆ ಬೇಡಿ ಕೊಂಡೆ. ಮಕ್ಕಳ ಬೇಡಿಕೆ ಈ ದೇವರು ಬೇಗ ಈಡೇರಿಸುವುದು ಸತ್ಯ.ಹಾಗೆಯೇ ಆಯಿತು ನೋಡಿ. ದೇವರಿಗೆ ನನ್ನ ಮೊರೆ ಕೇಳಿಸಿದ್ದೇ ತಡ.. ಗೆಜ್ಜೆ ನಮ್ಮನೆ ಉಳುಗೋಲು ಹತ್ರವೇ ಕೇಳಿಸ್ತಾ ಇದೆ. ಅಂತೂ ನರಿಕೊಡ್ಲುವಿನ ತಂಡ ನಮ್ಮನೆ ಅಂಗಳದಲ್ಲಿ.ಅಪ್ಪ ಬಾಗಿಲು ತೆರೆದು ಹೊರಬಂದಾಗ ಅವರ ತಂಡದ ಒಬ್ಬ ಹಿರಿಯರು ಕ್ಷಮಿಸಿ ದೀಪ ಕಾಣಿಸಿದ ಮೇಲೆ ಮುಂದೆ ಹೋಗಬಾರದು ಅಂತ ಬಂದೆವು ನಿಮಗೆ ಏನು ಕೊಡಬೇಕೆನಿಸುತ್ತೋ ಕೊಡಿ ಸಾಕು ಅಂತ ಅವರ ಗುಮ್ಟೆ ಕುಣಿತ, ಕೋಲಾಟ ಎಲ್ಲಾ ಪ್ರದರ್ಶನ ನಡೆಯಿತು. ಅವರಿಗೆ ಪ್ರತೀ ಮನೆಯಲ್ಲಿ ಕೊಡುವ ಗೌರವ ಪೂರ್ವಕ ಉಡುಗೊರೆ ಎಂದರೆ,ಒಂದು ತೆಂಗಿನಕಾಯಿ, ಅಕ್ಕಿ, ವೀಳ್ಯದೆಲೆ, ಅಡಿಕೆ ಹಾಗೂ ಯಥಾನುಶಕ್ತಿ ಹಣ. ಆದರೆ, ಇದೊಂದು ಸಾಮಾಜಿಕ ಒಡಂಬಡಿಕೆ ಅಷ್ಟೇ.

ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಅವರ ಹಿಂದೆ ನಮ್ಮ ಮಕ್ಕಳ ಸೈನ್ಯ ಓಡುತ್ತಿತ್ತು.ಅಲ್ಲಿ ಹೋಗಿಯೂ ಅದೇ ನೃತ್ಯ ಕಣ್ತುಂಬಿಕೊಳ್ಳುವುದು. ಸುಮಾರು ಒಂದು ತಂಡದ ಜೊತೆ 10 ಮನೆಗೆ ಹೋಗಿ ನಾವು ಖಾಯಂ ವೀಕ್ಷಕರಾಗುತ್ತಿದ್ದೆವು. ಆ ತಂಡದಲ್ಲಿ ನಮ್ಮ ಸಹಪಾಠಿ, ಅವರ ತಂದೆಯೋ, ಚಿಕ್ಕಪ್ಪನೋ, ಮಾವನೋ ಇದ್ದರೆ ನಮಗೂ ಹೆಮ್ಮೆ. ಇಷ್ಟಕ್ಕೆ ಮುಗಿಯತ್ತ ನಮ್ಮ ಮಕ್ಕಳಾಟಿಕೆ ಮಾರನೆ ದಿನದಿಂದ ಕೊಡಪಾನಕ್ಕೆ ಒಂದು ದಾರ ಕಟ್ಟಿಕೊಂಡ ಗುಮ್ಟೆ ಕೈಯಲ್ಲಿರುತ್ತಿತ್ತು. ಮನೆಯಂಗಳದಲ್ಲಿ ನಮ್ಮದೇ ಹೋಳಿ ಕುಣಿತ.ಇಂದಿಗೂ ನನಗೆ ನನ್ನೂರ ಹೋಳಿ ಎಂದರೆ ನನಗೆ ಅದಮ್ಯ ಪ್ರೀತಿ.

ಊರ ಮರಾಠಿ ಜನಾಂಗದವರ ಗುರಿಕಾರರ ಮನೆಯಲ್ಲಿ ಒಂದೆಡೆ ಸೇರಿ ಇಡೀ ತಂಡವನ್ನು ಕಟ್ಟಿಕೊಂಡು ನಿಯಮಾನುಸಾರ, ಶಾಸ್ತ್ರಬದ್ಧರಾಗಿ ಪ್ರತೀವರ್ಷ ಆಚರಿಸಿಕೊಂಡು ಬರುವ ಹಲವು ಮನೆತನದವರು ನಮ್ಮೂರಲ್ಲಿದ್ದಾರೆ.

ಈ ಗುಮ್ಟೆ ಎಂದೆ ಅಲ್ವಾ,ಅದನ್ನು ಆವೆ ಮಣ್ಣಿನಿಂದ ಮಾಡಿದ ಪಾತ್ರೆ ಬಳಸಿ ಮಾಡುತ್ತಾರೆ. ಪಾತ್ರೆಯ ಅಗಲವಾದ ಬಾಯಿಗೆ ಪ್ರಾಣಿಯ ಚರ್ಮ ಬಳಸಿ ಬಿಗಿಯಾಗಿ ಭದ್ರಗೊಳಿಸುತ್ತಾರೆ. ಅದರಿಂದ ಬರುವ ಶಬ್ದವೇ ಬಲು ಚೆಂದ.

ಇಲ್ಲಿ ಇಡೀ ತಂಡದವರ ಶ್ರಮ, ಊರವರ ಸಹಕಾರ, ಒಂದೊಳ್ಳೆ ಜನಪದ ಸಂಪ್ರದಾಯದ ಉಳಿವು ಎಲ್ಲರ ಹೊಣೆ ಯಾಗಿದೆ.ಹಾಗೆಯೇ ಗೊತ್ತಿಲ್ಲದ ಒಂದಿಷ್ಟು ಜನರಿಗೆ ನಮ್ಮ ಹೆಮ್ಮೆಯ ಕಲೆಯನ್ನು ತೋರಿಸುವ ಕೆಲಸವಾಗಬೇಕಾಗಿದೆ.

ಚಿತ್ರ ಮಾಹಿತಿ: ರೇಖಾ ಪ್ರಭಾಕರ್‌ ಕುಲಾಲ್‌, ಹೊಸನಗರ

IPL_Entry_Point