ಇನ್‌ಸ್ಟಾಗ್ರಾಂ ಪರಿಚಯ, ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ: ಕಾರ್ಕಳ ರೇಪ್ ಕೇಸ್‌ ಬಗ್ಗೆ ಎಸ್‌ಪಿ ಹೇಳಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಇನ್‌ಸ್ಟಾಗ್ರಾಂ ಪರಿಚಯ, ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ: ಕಾರ್ಕಳ ರೇಪ್ ಕೇಸ್‌ ಬಗ್ಗೆ ಎಸ್‌ಪಿ ಹೇಳಿಕೆ

ಇನ್‌ಸ್ಟಾಗ್ರಾಂ ಪರಿಚಯ, ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ: ಕಾರ್ಕಳ ರೇಪ್ ಕೇಸ್‌ ಬಗ್ಗೆ ಎಸ್‌ಪಿ ಹೇಳಿಕೆ

ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಟುಶಬ್ದಗಳಿಂದ ಟೀಕಿಸಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

ಅಪರಾಧ ಸುದ್ದಿ
ಅಪರಾಧ ಸುದ್ದಿ

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವ ಕುರಿತು ವರದಿಯಾಗಿದ್ದು, ಕೌಡೂರು ರಂಗನಪಲ್ಕೆ ಸಮೀಪ ಆಗಸ್ಟ್ 23ರಂದು ಈ ಘಟನೆ ನಡೆದಿದೆ. ಇದು ಸಾಮೂಹಿಕ ಅತ್ಯಾಚಾರ ಎಂದು ಆರೋಪಿಸಿರುವ ಹಿಂದೂಪರ ಸಂಘಟನೆಗಳು ಇನ್ನಷ್ಟು ಆರೋಪಿಗಳು ಇದರ ಹಿಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಅಲ್ತಾಫ್ ಎಂಬುವವನಿಗೆ ಮೂರು ತಿಂಗಳ ಹಿಂದೆ ಸಂತ್ರಸ್ತ ಯುವತಿ ಪರಿಚಯವಾಗಿತ್ತು. ಆಗಸ್ಟ್ 23ರಂದು ಮಧ್ಯಾಹ್ನ 12 ಗಂಟೆಗೆ ಅಲ್ತಾಫ್ ಆಕೆಯನ್ನು ಕಾರಿನಲ್ಲಿ ಅಯ್ಯಪ್ಪನಗರದಿಂದ ಕರೆದುಕೊಂಡು ಹೋಗಿದ್ದಾನೆ. ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿನ ಕಾಡಿಗೆ ಇಬ್ಬರೂ ಹೋಗಿದ್ದಾರೆ. ಅಲ್ಲಿ ಇತರ ಇಬ್ಬರು ಬಂದು ಸೇರಿಕೊಂಡಿದ್ದಾರೆ. ಕಾರಿನಲ್ಲಿ ಬಿಯರ್ ಬಾಟಲಿ ತಂದುಕೊಟ್ಟಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆ ಅಲ್ತಾಫ್ ಬಿಯರ್‌ಗೆ ಮಾದಕವಸ್ತು ಬೆರೆಸಿದ್ದಾನೆ. ಬಲವಂತವಾಗಿ ಕುಡಿಸಿ, ಅತ್ಯಾಚಾರ ಎಸಗಿದ್ದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿಚಾರ ಹಬ್ಬುತ್ತಿದ್ದಂತೆ ಬೋವಿ ಸಮಾಜ ಪ್ರಮುಖರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ತಡರಾತ್ರಿ ಪೊಲೀಸ್‌ ಠಾಣೆಗೆ ಆಗಮಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಶನಿವಾರ ಸಂಜೆಯೊಳಗೆ ಎಲ್ಲ ಆರೋಪಿಗಳ ಬಂಧನವಾಗದಿದ್ದಲ್ಲಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಸಿದರು. ವಿಶ್ವ ಹಿಂದೂ ಪರಿಷತ್‌ನ ಸುನಿಲ್‌ ಕೆ.ಆರ್.‌, ಮನೀಶ್‌ ನಿಟ್ಟೆ, ಹಿಂದೂ ಜಾಗರಣ ವೇದಿಕೆಯ ರಮೇಶ್‌ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಪೈಶಾಚಿಕ ಕೃತ್ಯ ಎಂದ ಸುನಿಲ್‌ ಕುಮಾರ್‌

ಶ್ರಮಜೀವಿಗಳಾಗಿರುವ ಭೋವಿ ಸಮುದಾಯದ ಬಡಯುವತಿಯೊಬ್ಬರಿಗೆ ಮತ್ತು ಬರಿಸುವ ಅಮಲು ಪದಾರ್ಥ ನೀಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಟುಶಬ್ದಗಳಿಂದ ಟೀಕಿಸಿದ್ದಾರೆ.

ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಪಳ್ಳಿ ತನಕ ಕರೆದೊಯ್ದು ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾಧ್ಯ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿ ಕಾಣುತ್ತದೆ. ಪ್ರಕರಣ ಸಂಬಂಧ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ಈ ಮೂಲಕ ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಭೇದಿಸಬೇಕು. ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ದೃಷ್ಟಿಯಿಂದಲೂ ಸೂಕ್ತ ತನಿಖೆಯಾಗಬೇಕು. ಸಂತ್ರಸ್ತ ಯುವತಿಯ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಬೇಕು. ಜಿಲ್ಲಾಡಳಿತ ಯುವತಿಗೆ ಮಾನಸಿಕ ಧೈರ್ಯ ತುಂಬಿ, ಯುವತಿ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಹಿಳಾ ಸಂಘಟನೆಯಿಂದ ಮನವಿ

ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.

ಈ ಘಟನೆಯಿಂದ ಸಮಾಜದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ಉಂಟಾಗಿದ್ದು, ಈ ಜಿಹಾದಿ ಕೃತ್ಯವನ್ನು ಎಸಗಿದವರು ಕ್ರಿಮಿನಲ್ ಹಿನ್ನೆಲೆಯವರಾಗಿರುವ ಸಂಶಯವಿದೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಂಡುಬರುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಇದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾದ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಬೇಕೆಂದು ಒತ್ತಾಯಿಸಿದೆ.

ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ: ಎಸ್ಪಿ ಡಾ ಅರುಣ್

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್‌ಪಿ ಡಾ ಅರುಣ್ ಕುಮಾರ್ ಹೇಳಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಮೂರು ತಿಂಗಳಿಂದ ಇನ್‌ಸ್ಟಾಗ್ರಾಮ್‌ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಕಾರಿನಲ್ಲಿ ಅಪಹರಿಸಿದ್ದಾನೆ ಈ ನಡುವೆ ಮದ್ಯಪಾನದಲ್ಲಿ ಏನೋ ಬೆರೆಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್‌ನನ್ನು ಬಂಧಿಸಲಾಗಿದೆ. ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರ ಪೈಕಿ ಸವೇರಾ ರಿಚರ್ಡ್‌ ಕ್ವಾಡ್ರಸ್ ಎಂಬಾತನನ್ನು ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ್ದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವತಿಯನ್ನು ಕಾರ್ಳಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Whats_app_banner