ಉಡುಪಿ ಶ್ರೀಕೃಷ್ಣಮಾಸೋತ್ಸವ ಸಮಾರೋಪದಲ್ಲಿ ಕೇರಳ ರಾಜ್ಯಪಾಲರು ಭಾಗಿ: ಶ್ರೀ ಕೃಷ್ಣನ ದರ್ಶನ ಪಡೆದು ಶ್ಲೋಕ ಪಠಿಸಿದ ಆರಿಫ್ ಮೊಹಮ್ಮದ್ ಖಾನ್
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂಬುದು ಅತಿ ಮುಖ್ಯ ಎಂದು ಅವರು ತಿಳಿಸಿದರು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಉಡುಪಿ: ನಾವೆಲ್ಲರೂ ಭಾರತೀಯರು, ಭಿನ್ನ ಹೆಸರಲ್ಲಿ ದೇವರನ್ನು ಪೂಜಿಸಿದರೂ ನಮ್ಮೆಲ್ಲರ ಪ್ರಾರ್ಥನೆ ದೇವರಿಗೆ ಸಲ್ಲುತ್ತದೆ. ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಾಸೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪಾಲ್ಗೊಂಡು ಮಾತನಾಡಿದರು.
ಇದೇ ವೇಳೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರನ್ನು ಪರ್ಯಾಯ ಪುತ್ತಿಗೆ ಮಠದಿಂದ ಸ್ವಾಗತಿಸಲಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂಧ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ರಾಜ್ಯಪಾಲರಿಗೆ ಶ್ರೀಕೃಷ್ಣನ ದರ್ಶನ ಮಾಡಿಸಿದರು.
ಬಳಿಕ ಸುಗುಣೇಂದ್ರ ತೀರ್ಥ ಶ್ರೀಪಾದರು, ಉಡುಪಿಯ ಗೀತಾಮಂದಿರದಲ್ಲಿ ಆರಿಫ್ ಖಾನ್ ಅವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ ಅನುಗ್ರಹಿಸಿದರು. ಗೀತಾಮಂದಿರದಿಂದ ವೇದಮಂತ್ರ, ವಾದ್ಯಘೋಷಗಳ ಜತೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಬಂದ ಆರಿಫ್ ಖಾನ್ ಅವರು ರಾಜಾಂಗಣಕ್ಕೆ ತೆರಳಿದರು.
ಭಗವದ್ಗೀತೆ ಶ್ಲೋಕ ಪಠಿಸಿದ ಆರಿಫ್ ಮೊಹಮ್ಮದ್
ಉಡುಪಿಗೆ ಆಗಮಿಸುವ ಮುನ್ನ ಕೇರಳ ರಾಜ್ಯಪಾಲರ ಆರಿಫ್ ಖಾನ್ ಕೊಲ್ಲೂರಿಗೂ ತೆರಳಿದ್ದರು. ಅಲ್ಲಿ ಮೂಕಾಂಬಿಕೆಯ ದರ್ಶನ ಮಾಡಿದ್ದರು. ಕೇರಳ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೂಕಾಂಬಿಕೆಯ ದರ್ಶನ ಮಾಡಲು ಆಗಮಿಸುತ್ತಾರೆ. ರಾಜ್ಯಪಾಲ ಆರಿಫ್ ಖಾನ್ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಪುನೀತರಾದರು. ಇನ್ನು ಪ್ರಖ್ಯಾತ ಸಂಗೀತಗಾರ ಯೇಸುದಾಸ್ ಅವರು ಕೂಡ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರು. ಹೀಗಾಗಿ ಇಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಬಂದವರೆಲ್ಲರೂ ಭಕ್ತರು ಎಂಬಂತೆ ಪರಿಗಣಿಸಲಾಗುತ್ತದೆ.
ಅಂದಹಾಗೆ, ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ರಾಜ್ಯಪಾಲರು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂಬುದು ಅತಿ ಮುಖ್ಯ. ವೈವಿಧ್ಯತೆ ಎನ್ನುವುದು ಪ್ರಕೃತಿ ನಿಯಮ. ಅದು ನಮ್ಮಲ್ಲಿ ಏಕತೆ ಮೂಡಿಸುತ್ತದೆ. ಇಂದಿನ ಸಮಾಜವು ಪೂರ್ವಜರು ದಯಪಾಲಿಸಿದ ಮಾನವೀಯ ಸದ್ಗುಣಗಳನ್ನು ಬಿಂಬಿಸುವ ಸಂದೇಶಗಳನ್ನು ಅಳವಡಿಸಿಕೊಂಡಿಲ್ಲ ಎಂದು ಆರಿಫ್ ಖಾನ್ ವಿಷಾದ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಕೇರಳ ರಾಜ್ಯಪಾಲ ಆರಿಫ್ ಖಾನ್ ಅವರನ್ನು ಪುತ್ತಿಗೆ ಶ್ರೀಗಳು ಸಭಾವೇದಿಕೆಯಲ್ಲಿ ಸನ್ಮಾನಿಸಿದರು. ಈ ವೇಳೆ ಶಾಸಕರಾದ ಯಶಪಾಲ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇದ್ದರು.
ವಿಭಾಗ