ಕನ್ನಡ ಸುದ್ದಿ  /  Karnataka  /  Udupi News Rahul Gandhi Refuses To Enter Temple As He Had Touched Fish Karnataka Assembly Elections Mgb

Rahul Gandhi in Udupi temple: ಮೀನು ಮುಟ್ಟಿ ಒಳಗೆ ಬರಬಹುದೇ? ಉಡುಪಿ ದೇಗುಲದಲ್ಲಿ ರಾಹುಲ್ ಪ್ರಶ್ನೆ ಈಗ ವೈರಲ್, ಅಲ್ಲಿ ನಡೆದದ್ದೇನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಡುಪಿ ಜಿಲ್ಲೆಯ ಉಚ್ಚಿಲ ದೇವಸ್ಥಾನದ ಗರ್ಭಗುಡಿ ಬಳಿ ಮೀನು ಮುಟ್ಟಿದ ಕಾರಣ ಹೋಗಿಲ್ಲ ಎಂಬ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಡುಪಿಯಲ್ಲಿ ರಾಹುಲ್​ ಗಾಂಧಿ
ಉಡುಪಿಯಲ್ಲಿ ರಾಹುಲ್​ ಗಾಂಧಿ

ಉಡುಪಿ: ನಿನ್ನೆ ( ಏ 27, ಗುರುವಾರ) ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ಎಂಬಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿ (Rahul Gandhi in Udupi), ಮೀನುಗಾರರ ಜೊತೆ ಸಂವಾದ ನಡೆಸಿದ್ದರು. ಈ ಸಂದರ್ಭ ಅವರಿಗೆ ಮೀನನ್ನು ಉಡುಗೊರೆಯಾಗಿ ನೀಡಲಾಗಿತ್ತು. ಕಾರ್ಯಕ್ರಮದ ನಂತರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ (Uchila Mahalakshmi Temple) ಹೋಗುವ ಸಂದರ್ಭ ದೇವಸ್ಥಾನದ ಸುತ್ತುಪೌಳಿಯ ಬಳಿ ಹೋಗಿದ್ದರು. ಗರ್ಭಗುಡಿಯ ಬಳಿ ಹೋಗದೆ ಅಲ್ಲಿಯೇ ತೀರ್ಥಪ್ರಸಾದ ಸ್ವೀಕರಿಸಿದರು. ಇದಕ್ಕೆ ಮೀನು (Rahul touched Fish) ಮುಟ್ಟಿದ್ದು ಕಾರಣ ಎಂಬರ್ಥದಲ್ಲಿ ವಿಶ್ಲೇಷಿಸಲಾಗುತ್ತಿದೆ.

ವಾಸ್ತವವೇನು?

"ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?" ಎಂದು ಹೊಸ್ತಿಲ ಹೊರಗೆ ನಿಂತು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಯಾವುದೇ ಅಭ್ಯಂತರವಿಲ್ಲ. ಇದು ಮೀನುಗಾರರದ್ದೇ ದೇವಸ್ಥಾನ, ಒಳಗೆ ಬನ್ನಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ಸಂದರ್ಭ ಸುತ್ತುಪೌಳಿಯಲ್ಲೇ ರಾಹುಲ್ ದೇವರಿಗೆ ಕೈಮುಗಿದಿದ್ದಾರೆ. ದೇಶ ರಕ್ಷಣೆಯ ನ್ಯಾಯನೀತಿ ಧರ್ಮ ಸಾಮರ್ಥ್ಯ ನಿಮ್ಮಲ್ಲಿ ಇದೆ ಎಂದು ಹಾರೈಸಿ ಮಹಾಲಕ್ಷ್ಮಿ ದೇಗುಲದ ಅರ್ಚಕರಿಂದ ರಾಗಾಗೆ ಪ್ರಸಾದ ವಿತರಿಸಲಾಗಿದೆ.

ಅಲ್ಲಿ ಏನಾಯಿತು?

ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಸಂವಾದ ನಡೆಸಿದ ರಾಹುಲ್ ಗಾಂಧಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟಾಗಿ ಕೊಟ್ಟಿದೆ. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್ ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದಾದ ಬಳಿಕ ಮಹಾಲಕ್ಷ್ಮಿ ದೇಗುಲಕ್ಕೆ ಹೋಗುತ್ತಾರೆ. ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈ ತೊಳೆದಿಲ್ಲ ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು ಹಾಗೂ ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ. ಆದರೂ ರಾಹುಲ್ ಗಾಂಧಿ ಹೊಸ್ತಿಲ ಹೊರಗೆ ನಿಂತು ಯೋಚನೆ ಮಾಡುತ್ತಾ ನಿಂತಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ.

ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅರ್ಚಕರು, ರಾಹುಲ್ ಗಾಂಧಿ ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯ ಕರುಣಿಸಲಿ. ಸತ್ಯ ನ್ಯಾಯ ನೀತಿ ಧರ್ಮದ ಮೂಲಕ ದೇಶ ರಕ್ಷಣೆ ಮಾಡುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇದೆ. ಭಾರತ ಜೋಡೋ ಎಂಬ ದೊಡ್ಡ ಕಾರ್ಯಕ್ರಮವನ್ನು ತಾವು ಮಾಡಿದ್ದೀರಿ ಎಂದು ದೇವರ ಮುಂದೆ ಪ್ರಾರ್ಥಿಸಿ, ಪ್ರಸಾದವನ್ನು ನೀಡಿದ್ದಾರೆ.

ಉಪ್ಪಳದಿಂದ ಶೀರೂರುವರೆಗಿನ ಸಮಸ್ತ ಮೊಗವೀರರ ಕುಲದೇವತೆ ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ರಾಹುಲ್ ಗೆ ಈ ವೇಳೆ ಸಮಾಜದ ಮುಖಂಡರು ಇದು ಮೀನುಗಾರರ ಕುಲದೇವತೆಯ ಸನ್ನಿಧಿ, ದೇವಳದೊಳಗೆ ಬರಲು ಯಾವುದೇ ಅಡ್ಡಿಯಿಲ್ಲ ಎಂದು ವಿವರಿಸಿದ್ದಾರೆ.

ಚರ್ಚೆಗಳು:

ಇದಾದ ಬಳಿಕ ರಾಹುಲ್ ಮೀನು ಮುಟ್ಟಿ ಒಳಗೆ ಬರಬಹುದೇ ಎಂದು ಹೇಳಿದ ವಾಕ್ಯ ಪರ, ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಅವರು ದೇವಸ್ಥಾನದ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಪರವಾಗಿರುವವರು ಹೇಳಿದರೆ, ಮೀನು ತಿಂದು ಒಳಗೆ ಹೋದರೆ ತಪ್ಪೇನು ಎಂದು ವಿರೋಧವಾಗಿ ವಾದಿಸುವವರು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಈ ನಡೆಯ ಕುರಿತು ಪರ-ವಿರೋಧ ಚರ್ಚೆಗಳು ಆಗುತ್ತಿವೆ. ಈ ಮೊದಲು ಮಾಜಿ ಸಿಎಂ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಾಂಸಾಹಾರ ತಿಂದು ದೇವಸ್ಥಾನಲ್ಕೆ ಹೋದರೆ ತಪ್ಪೇನು ಎಂದು ಕೇಳಿದ್ದನ್ನು ಈಗ ನೆಟ್ಟಿಗರು ನೆನಪಿಸುತ್ತಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು