ಕನ್ನಡ ಸುದ್ದಿ  /  ಕರ್ನಾಟಕ  /  Udupi News: ಉಡುಪಿಯಲ್ಲಿ ಬೀದಿನಾಯಿಗಳಿಗೆ ಬರಲಿದೆ ಡಾಗ್ ಪಾರ್ಕ್, ನಗರಸಭೆ ಯೋಜನೆ ಹಿಂದಿನ ಉದ್ದೇಶವೇನು

Udupi News: ಉಡುಪಿಯಲ್ಲಿ ಬೀದಿನಾಯಿಗಳಿಗೆ ಬರಲಿದೆ ಡಾಗ್ ಪಾರ್ಕ್, ನಗರಸಭೆ ಯೋಜನೆ ಹಿಂದಿನ ಉದ್ದೇಶವೇನು

Dog park in Udupi ದೇಗುಲಗಳ ನಗರಿ ಉಡುಪಿಯಲ್ಲಿ ಬೀದಿ ನಾಯಿಗಳಿಗೇನೂ ಕೊರತೆಯಿಲ್ಲ. ಅವುಗಳ ರಕ್ಷಣೆ ನಿಟ್ಟಿನಲ್ಲಿ ಡಾಗ್‌ ಪಾರ್ಕ್‌ ರೂಪಿಸಲು ಉಡುಪಿ ನಗರಸಭೆ ಮುಂದಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಉಡುಪಿಯಲ್ಲಿ ಶುರುವಾಗಲಿದೆ ಡಾಗ್‌ ಪಾರ್ಕ್‌
ಉಡುಪಿಯಲ್ಲಿ ಶುರುವಾಗಲಿದೆ ಡಾಗ್‌ ಪಾರ್ಕ್‌

ಉಡುಪಿ: ಬೀದಿನಾಯಿಗಳ ಸಮಸ್ಯೆ ಎಲ್ಲ ಕಡೆಯೂ ಒಂದೇ ರೀತಿ. ರಾತ್ರಿ, ಹಗಲೆನ್ನದೆ ಆಯಕಟ್ಟಿನ ಜಾಗಗಳಲ್ಲಿ ನಿಲ್ಲುವ ಬೀದಿನಾಯಿಗಳು ನೈಟ್ ಶಿಫ್ಟ್ ಮುಗಿಸಿ ಬರುವ ಕಾರ್ಮಿಕರನ್ನು ಕಾಡುವುದು, ಮುಂಜಾನೆಯ ವಾಕಿಂಗ್ ನವರನ್ನು ಹಿಂಬಾಲಿಸುವುದು.. ಬೈಕ್, ಕಾರುಗಳನ್ನೂ ಓಡಿಸುವುದುಂಟು. ಇಂಥದ್ದಕ್ಕೆಲ್ಲ ಮುಕ್ತಿ ಹಾಡಲು ಬೀದಿನಾಯಿಗಳ ಸಮಸ್ಯೆಗಳಿಗೆ ಪರಿಹಾರದ ಅಸ್ತ್ರವಾಗಿ ಡಾಗ್ ಪಾರ್ಕ್ ನಿರ್ಮಾಣದ ಯೋಜನೆಯನ್ನು ಉಡುಪಿ ನಗರಸಭೆ ರೂಪಿಸಿದೆ. ಇದಕ್ಕಾಗಿ ಜಾಗದ ಶೋಧ ಕಾರ್ಯವೂ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಏನಿದು ಯೋಜನೆ

ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ ಗಳಿವೆ. ಇವುಗಳ ಪೈಕಿ ಅಂದಾಜು 15ರಷ್ಟು ವಾರ್ಡ್ ಗಳಲ್ಲಿ ತೀವ್ರವಾಗಿ ಬೀದಿನಾಯಿಗಳ ಕಾಟ ಇದೆ. ಹಿಡಿಯಲು ಬರುವಾಗ ಹೇಗೋ ತಪ್ಪಿಸಿಕೊಂಡು ಹೋಗುತ್ತವೆ. ಆದರೆ ಪಾದಚಾರಿಗಳು, ಬೈಕ್ ಸವಾರರಿಗೆ ಇವುಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಕಾರುಗಳನ್ನೂ ಬಿಡುವುದಿಲ್ಲ. ಅವುಗಳನ್ನೂ ಅಟ್ಟಾಡಿಸುವ ಬೀದಿನಾಯಿಗಳನ್ನು ಕಂಡರೆ ಚಿಕ್ಕಮಕ್ಕಳಷ್ಟೇ ಅಲ್ಲ, ದೊಡ್ಡವರೂ ಹೆದರುವಂತಾಗಿದೆ. ಸುಮಾರು 2,500ರಷ್ಟು ಬೀದಿನಾಯಿಗಳು ಉಡುಪಿಯಲ್ಲಿದ್ದು, ನಾಯಿಗಳನ್ನು ಏನು ಮಾಡುವುದು ಎಂಬುದೇ ತಲೆನೋವು.

ಅಳಿದುಳಿದ ಆಹಾರ ತಿನ್ನಲು ರೆಡಿಯಾಗಿರುತ್ತವೆ ನಾಯಿಗಳು ಮಾಂಸದ ಅಂಗಡಿ, ಮೀನಿನ ಅಂಗಡಿ ಸಹಿತ ಆಹಾರಗಳು ಎಲ್ಲಿ ಇವೆಯೋ ಹೆಚ್ಚುವರಿಯಾಗಿ ಎಲ್ಲಿ ಅವುಗಳನ್ನು ಬಿಸಾಡಲಾಗುತ್ತದೆಯೋ ಅಲ್ಲೆಲ್ಲಾ ಬೀದಿನಾಯಿಗಳು ಠಳಾಯಿಸುತ್ತವೆ. ಕೋವಿಡ್ ಬಂದ ಮೇಲೆ ಬೀದಿನಾಯಿಗಳಿಗೆ ಆಹಾರ ನೀಡಿ ಮಾನವೀಯತೆಯನ್ನು ಮೆರೆದ ನಾಗರಿಕರೂ ಇದ್ದಾರೆ.

ಮೂರು ಸಾವಿರ ಬೀದಿನಾಯಿಗಳಿಗೆ ಆಶ್ರಯ ನೀಡಬಹುದು

ಉಡುಪಿ ನಗರಸಭೆಯವರ ಈಗಿನ ಲೆಕ್ಕಾಚಾರದ ಪ್ರಕಾರ, ಅರ್ಧ ಅಥವಾ ಒಂದೆಕರೆ ಜಾಗ ಸಿಕ್ಕರೆ, ಸುಮಾರು 3 ಸಾವಿರ ಬೀದಿನಾಯಿಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ಅಲ್ಲೇ ಇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅವು ಹೊರಗೆ ಬರದಂತೆ ಅವುಗಳ ಪಾರ್ಕ್ ನಲ್ಲೇ ವಿಹರಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದಲ್ಲದೆ ಸಂತಾನಶಕ್ತಿ ನಿಯಂತ್ರಣ ಚುಚ್ಚುಮದ್ದು ನೀಡುವ ಮೂಲಕ ಸಂತಾನ ನಿಯಂತ್ರಣವನ್ನೂ ಮಾಡುವ ಯೋಜನೆ ಇದೆ. ಅದಕ್ಕಾಗಿ ಜಾಗದ ಹುಡುಕಾಟ ನಗರಸಭೆಯಿಂದ ನಡೆಯುತ್ತಿದೆ.

ಡಾಗ್ ಪಾರ್ಕ್ ಗೆ ಅರ್ಧ ಅಥವಾ ಒಂದೆಕರೆ ಜಾಗವನ್ನು ನಗರಸಭೆ ಹುಡುಕುತ್ತಿದ್ದು, ದಾನಿಗಳ ಸಹಕಾರವನ್ನೂ ಅಪೇಕ್ಷಿಸುತ್ತಿದೆ. ಉಡುಪಿ, ಮಣಿಪಾಲದಲ್ಲಿ ಈ ಜಾಗ ಇರಬೇಕು.

ಆದಾಯವೂ ಬರಬಹುದು

ಡಾಗ್ ಪಾರ್ಕ್ ನಿರ್ಮಾಣವಾದರೆ, ಬೀದಿನಾಯಿಗಳ ನಿರ್ವಹಣಾ ವೆಚ್ಚವನ್ನು ಶ್ವಾನಪ್ರಿಯ ನಾಗರಿಕರು ನೀಡಬಹುದು ಅಥವಾ ದತ್ತು ಪಡೆದು ಸಾಕಬಹುದು, ಮನೆಗಳಲ್ಲಿರುವ ಸಾಕುನಾಯಿಗಳ ಬೇಡದ ಮರಿಗಳನ್ನು ಬೀದಿಗೆ ಬಿಡುವುದರ ಬದಲು ಡಾಗ್ ಪಾರ್ಕ್ ಗೆ ನೀಡಬಹುದು. ಬೀದಿನಾಯಿಗಳ ಕ್ರಾಸ್ ಬ್ರೀಡ್ ಮರಿಗಳ ಮಾರಾಟದಿಂದ ನಿರ್ವಹಣೆ ಮಾಡುವವರಿಗೂ ಆದಾಯ ಗಳಿಕೆಯಾಗುತ್ತದೆ ಎನ್ನುವುದೂ ಇದರಲ್ಲಿ ಸೇರಿದೆ.

ಮೈಸೂರು, ಬೆಂಗಳೂರು ಸೇರಿದಂತೆ ಕೆಲವು ಕಡೆ ಬೀದಿನಾಯಿಗಳ ನಿಯಂತ್ರಣಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಅಲ್ಲಿಯೇ ಅವುಗಳಿಗೆ ಆರೈಕೆಯೂ ಆಗಲಿದೆ. ನಿಯಂತ್ರಣ ಚಿಕಿತ್ಸೆಯನ್ನೂ ನೀಡಬಹುದು. ಇಂತಹ ಪ್ರಯೋಗ ಉಡುಪಿಯಲ್ಲೂ ಆಗುತ್ತಿದೆ. ಜಾಗ ದೊರೆತ ತಕ್ಷಣ ಇದನ್ನು ಆರಂಭಿಸುತ್ತೇವೆ ಎನ್ನುವುದು ಅಧಿಕಾರಿಗಳ ವಿವರಣೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ