Udupi News: ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿ ಹೊರಬಂದಾಗಲೇ ಇಹಲೋಕ ತ್ಯಜಿಸಿದ ಉಡುಪಿಯ ಕರಸೇವಕ
ಕರ ಸೇವಕರಾಗಿ ಕೆಲಸ ಮಾಡುತ್ತಿದ್ದ ಉಡುಪಿಯ ಪಾಂಡುರಂಗ ಶಾನುಭಾಗ್ ಅವರು ಅಯೋಧ್ಯೆ ರಾಮ ದರ್ಶನ ಮಾಡಿ ಬಂದ ಕೆಲ ಹೊತ್ತಿನಲ್ಲೇ ನಿಧನರಾಗಿದ್ದಾರೆ.ವರದಿ: ಹರೀಶ್ ಮಾಂಬಾಡಿ, ಮಂಗಳೂರು

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘದ ಹಿರಿಯ ಸಕ್ರಿಯ ಕಾರ್ಯಕರ್ತ ಪಾಂಡುರಂಗ ಶಾನುಭಾಗ ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಉಡುಪಿಯಲ್ಲಿ ಎಲ್ಲರ ನೆಚ್ಚಿನ ಪಾಂಡಣ್ಣ ಎಂದೇ ಪ್ರಸಿದ್ಧರು. ಹಲವಾರು ವರ್ಷಗಳಿಂದ ಉಡುಪಿ ಭಾಗದಲ್ಲಿ ಕರ ಸೇವಕರಾಗಿ ದುಡಿಯುತ್ತಾ ಬಂದಿರುವ ಪಾಂಡುರಂಗ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ಬಳಿಕ ಅಲ್ಲಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಕುಟುಂಬದವರೊಂದಿಗೆ ತೆರಳಿ ದರ್ಶನ ಮುಗಿಸಿ ಬಂದಾಗ ಅಲ್ಲಿಯೇ ನಿಧನರಾಗಿದ್ದಾರೆ.
ಭಾನುವಾರ ಬೆಳಗ್ಗೆ ಅಣ್ಣ, ಅತ್ತಿಗೆ ಅಣ್ಣನ ಮಗ ಹಾಗೂ ಮಗನೊಂದಿಗೆ,ರಾಮನ ದರ್ಶನ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥಪ್ರಸಾದ ಸ್ವೀಕರಿಸಿ ಸಂತೋಷದಿಂದ ಪಾಂಡುರಂಗ ತೆರಳಿದ್ದರು .ಅಯೋಧ್ಯೆ ದೇಗುಲದಿಂದ ಹೊರ ಬಂದವರು ಖುಷಿಯಾಗಿಯೇ ಇದ್ದರು. ಏಕಾಏಕಿ ಕುಸಿದು ಬಿದು ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.
ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ಸಮೀಪವರ್ತಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಅಯೋಧ್ಯಾ ಕರಸೇವೆಯಲ್ಲಿ ಪತ್ನಿಯೊಂದಿಗೆ ಅವರು ಭಾಗವಹಿಸಿದ್ದರು. ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ದೈಹಿಕ ಅಂಧತ್ವವಿದ್ದರೂ, ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದು ಕಾಪು ತಾಲೂಕು ಕಾರ್ಯಾವಾಹ, ಉಡುಪಿ ಜಿಲ್ಲಾ ಬೌದ್ಧಿಕ ಪ್ರಮುಖ್ ಆಗಿದ್ದರು. ಅಂಧತ್ವದ ಹೊರತಾಗಿ ಸಂಸ್ಕೃತ ಎಮ್.ಎ ಹಾಗೂ ಎಲ್ ಎಲ್ ಬಿ ಪದವಿ ಪಡೆದಿದ್ದರು.
ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ, ಸಂಸ್ಕೃತದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ವಿಹಿಂಪ ಮುಖಂಡ ಗೋಪಾಲ್ ಜಿ ಮಾಜಿ ಶಾಸಕ ರಘುಪತಿ ಭಟ್ ಸ್ಥಳದಲ್ಲಿದ್ದು ಮುಂದಿನ ವ್ಯವಸ್ಥೆಗಳ ಬಗ್ಗೆ ಪ್ರವೃತ್ತರಾದರು.

ವಿಭಾಗ