Udupi Cyber Crime: ಉಡುಪಿ ಮಹಿಳೆ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರ ಕನ್ನ, ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ ಮಾಯ
Cyber crime alert ಉಡುಪಿ ಭಾಗದಲ್ಲಿ ಸೈಬರ್ ಪ್ರಕರಣಗಳು ನಡೆದಿದ್ದು. ಮಹಿಳೆ ಸೇರಿ ಇತರರೂ ಹಣ ಕಳೆದುಕೊಂಡು ದೂರು ದಾಖಲಿಸಿದ್ದಾರೆ.ವರದಿ: ಹರೀಶ ಮಾಂಬಾಡಿ.ಮಂಗಳೂರು
ಉಡುಪಿ: ಬ್ಯಾಂಕ್‌ನಿಂದ ಮಹಿಳೆಯೊಬ್ಬರ ಸಾವಿರಾರು ರೂಪಾಯಿ ಅಕ್ರಮವಾಗಿ ವರ್ಗಾವಣೆಗೊಂಡ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆ.4ರಂದು ಸುಚಿತ್ರಾ ಅವರ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯ ಡೆಬಿಟ್ ಕಾರ್ಡ್‌ನಿಂದ 4 ಬಾರಿ ಒಟ್ಟು 43,065 ರೂ.ಗಳನ್ನು ಅಪರಿಚಿತರು ವರ್ಗಾಯಿಸಿಕೊಂಡಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ ಹಣ ಕಳಕೊಂಡರು!
ಅನಾಮಧೇಯ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಮಾರ್ಕ್ ಪ್ರೇಮ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಬ್ರೌಸಿಂಗ್ ಮಾಡುತ್ತಿದ್ದಾಗ ಕೋಟಾಕ್ ಸೆಕ್ಯೂರಿಟಿ Promoting free trading tips ನ ಲಿಂಕ್ ಅನ್ನು ಕ್ಲಿಕ್ ಮಾಡಿದ ಅನಂತರ ಯಾವುದೋ ಅನಾಮಧೇಯ ವಾಟ್ಸಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ.ಈ ವೇಳೆ ಅದರಲ್ಲಿದ್ದ ವ್ಯಕ್ತಿಗಳು ಉತ್ತಮ ಸಂವಹನಕಾರರಾಗಿ ತಮ್ಮನ್ನು ಕೋಟಾಕ್ ಸೆಕ್ಯುರಿಟಿಸ್ ಪ್ರತಿನಿಧಿಗಳು ಎಂಬಂತೆ ಬಿಂಬಿಸಿಕೊಂಡಿದ್ದು ಅವರು ನೋಂದಾಯಿಸಿದ ಸೇಬಿ ನಂಬರ್ ಅನ್ನು ಮಾರ್ಕ್ ಪ್ರೇಮ ಕುಮಾರ್ ಅವರಿಗೆ ತೋರಿಸಿ https://app.nbhkobhtakbhe.com ಲಿಂಕ್ ಕಳುಹಿಸಿದ್ದಾರೆ.
ಅನಂತರ ಮಾರ್ಕ್ ಪ್ರೇಮ ಕುಮಾರ್ ಅವರು Kotakpro ಎಂಬ ಟ್ರೇಡಿಂಗ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದು, ಆರೋಪಿಗಳು ಐಪಿಓ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದರೇ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಅವರ ಖಾತೆಯಿಂದ 3.55 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ಎಸಗಿದ್ದಾರೆ ಎನ್ನುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಫ್ ಲೈನ್ ಟ್ರೇಡಿಂಗ್: ಕೋಟ್ಯಂತರ ರೂ ವಂಚನೆ
ಆಫ್ಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ತಿಳಿಸಿ ದಂಪತಿಗೆ ಮಹಿಳೆಯೊಬ್ಬರು ಕೋಟ್ಯಂತರ ರೂ.ವಂಚಿಸಿದ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ವಿದೇಶದಲ್ಲಿರುವ ಶಿರ್ವ ಮೂಲದ ಲಿನೆಟ್ ಸೋಫಿಯಾ ಡಿ’ಮೆಲ್ಲೋ, ಅವರ ಪತಿ ಹಾಗೂ ಪತಿಯ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ ಎಂಬವರು ತಾನು ಕೆಲಸ ಮಾಡಿಕೊಂಡಿರುವ ಎಸ್‌ಪಿ ಕ್ಯಾಪಿಟಲ್ಸ್ ಟ್ರೇಡಿಂಗ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ.
ಬಳಿಕ 2019ರ ಸೆ.19ರಿಂದ 2024ರ ಆ.29ರ ವರೆಗೆ ಹಂತ ಹಂತವಾಗಿ 3,60,67,000 ರೂ.ಗಳನ್ನು ವಿದ್ಯಾ ಸೋಮೇಶ್ವರ ಅವರು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದು ಈ ವರೆಗೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಲಿನೆಟ್ ಸೋಫಿಯಾ ಡಿ’ಮೆಲ್ಲೋ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪಬ್ ನಲ್ಲಿ ಗಲಾಟೆ, ಹೊಡೆದಾಟ
ಮಣಿಪಾಲದ ಪಬ್ ಒಂದರಲ್ಲಿ ಗಲಾಟೆ, ಹೊಡೆದಾಟ ನಡೆಸಿದ ಕುರಿತು ಪ್ರಕರಣ ದಾಖಲಾಗಿದ್ದು, ಮಣಿಪಾಲ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಹೆರ್ಗದ ನವೀನ್ ಅವರು ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಪಬ್‌ನಿಂದ ಹೊರಗೆ ಬಂದಾಗ ಆರೋಪಿ ರೋಹಿತ್ ರಮೇಶ್ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನವೀನ್‌ನ ದವಡೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು ಕೂಡಲೇ ಸ್ನೇಹಿತರು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
(ವರದಿ: ಹರೀಶ ಮಾಂಬಾಡಿ.ಮಂಗಳೂರು)