Udupi News: ಉಡುಪಿ ಸಮುದ್ರತಟದಲ್ಲಿ ಶಾವಿಗೆಯಂತೆ ಕಂಡದ್ದು ಸಮುದ್ರಜೀವಿಯ ಪೊರೆ ಅಂದ್ರು ತಜ್ಞರು
Udupi seashore: ಉಡುಪಿ ಜಿಲ್ಲೆಯ ಸಮುದ್ರತಟದ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಅಲೆಗಳೊಂದಿಗೆ ಸುರುಳಿಸುರುಳಿಯಾಗಿ ಟನ್ಗಟ್ಟಲೆ ಶಾವಿಗೆಯಂಥ ವಸ್ತುಗಳು ಕಂಡವು. ಅವು ಸಮುದ್ರಜೀವಿಗಳ ಪೊರೆ ಎನ್ನುತ್ತಾರೆ ತಜ್ಞರು.
ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಉಡುಪಿಯ ಮಲ್ಪೆ ಕಡಲ ಕಿನಾರೆಯಿಂದ ಸುಮಾರು 15 ಕಿ.ಮೀ. ದೂರದಷ್ಟು ಸಮುದ್ರದ ಬದಿಯಲ್ಲಿ ಸುರುಳಿ ಸುರುಳಿಯಾಕಾರದ ಶಾವಿಗೆಯಂಥ ವಸ್ತು ಟನ್ ಗಟ್ಟಲೆ ಇದ್ದವು. ರಾಶಿರಾಶಿಯಾಗಿದ್ದ ಇವುಗಳನ್ನು ಕಂಡು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿದುಬಿಟ್ಟಿದ್ದರು. ಇದು ಕಡಲತೀರ ನಿವಾಸಿಗಳಿಗೆ ಏನಾದರೂ ತೊಂದರೆ ಉಂಟಾದೀತಾ ಎಂಬ ಆತಂಕವೂ ಮನೆಮಾಡಿತ್ತು. ಆದರೆ ಇದರ ಅಧ್ಯಯನವನ್ನು ತಜ್ಞರು ನಡೆಸಿದ್ದು, ಅವರ ಪ್ರಕಾರ ಇದು ಬೇರೇನೂ ಅಲ್ಲ, ಸಮುದ್ರಜೀವಿಯ ಪೊರೆ.
ಬಿಪರ್ಜಾಯ್ ಚಂಡಮಾರುತ, ಮುಂಗಾರು ಪ್ರವೇಶದ ಪರಿಣಾಮ ಕಡಲು ಈಗ ಪ್ರಕ್ಷುಬ್ದಗೊಂಡಿದೆ. ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರಕ್ಕೆ ಮಲ್ಪೆ ಕಡಲ ಕಿನಾರೆಯಿಂದ ಕದಿಕೆ ಕಿನಾರೆವರೆಗೆ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಟನ್ ಗಟ್ಟಲೆ ರಾಶಿಯಾಗಿ ಸುರುಳಿಯಾಕಾರದ ವಸ್ತುಗಳು ಬಿದ್ದುಕೊಂಡಿದ್ದವು. ಇದು ಸಮುದ್ರ ಪಾಚಿ ಎಂದು ಎಲ್ಲರೂ ನಂಬಿದ್ದರು. ಆದರೆ ಅದು ಸಮುದ್ರಪಾಚಿಯಲ್ಲ, ಸಮುದ್ರದ ಜೀವಿಯೊಂದರ ಪೊರೆ ಎಂಬುದನ್ನು ತಜ್ಞರ ತಂಡ ದೃಢಪಡಿಸಿದೆ.
ಏನಿದು ಸಮುದ್ರಜೀವಿ?
ಸಮುದ್ರತೀರದಿಂದ ಸುಮಾರು 50 ಮೀಟರ್ ದೂರದಲ್ಲಿ ಜೀವಿಸುವ ಸೆಲ್ಲೋಫೇನ್ ಟ್ಯೂಬ್ ವರ್ಮ್ ಜೀವಿ ಜೀವಂತವಾಗಿರುವಾಗ ಮೀನಿಗೆ ಆಹಾರ ಉತ್ಪನ್ನ. ಹಾವಿನ ಪೊರೆ ಕಳಚುವಂತೆ ತನ್ನ ಪೊರೆಗಳನ್ನು ಕಳಚುತ್ತದೆ. ಇದನ್ನು ಸಾಮಾನ್ಯವಾಗಿ ಯಾವುದು ತಿನ್ನುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ಪೊರೆಯೇ ತೀರಕ್ಕೆ ಬಂದಿದೆ.
ಮಂಗಳೂರಿನ ಸಮುದ್ರ ಜೀವವೈವಿಧ್ಯ ಮತ್ತು ಪರಿಸರ ನಿರ್ವಹಣಾ ವಿಭಾಗ, ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಗಳ ತಂಡ ಮತ್ತು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧಕರ ತಂಡ ಮಲ್ಪೆ ಕಡಲ ಕಿನಾರೆಗೆ ಆಗಮಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಶೀಲನೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮಂಗಳೂರಿನ ಪಣಂಬೂರಿನಲ್ಲಿ ಕಾಣಿಸಿಕೊಂಡ ಇದೇ ಮಾದರಿ ಆಧಾರದ ಮೇಲೆ ಇದು ಸೆಲ್ಲೋಫೇನ್ ಟ್ಯೂಬ್ ವರ್ಮ್ ಎಂದು ಖಚಿತಪಡಿಸಿಕೊಂಡರು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಮೀನುಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟಿ.ಎಸ್. ಅಣ್ಣಪ್ಪ ಸ್ವಾಮಿ, ಕಿರಿಯ ವಿಜ್ಞಾನಿ ವೈಜನಾಥ್ ಸಹಿತ ಪ್ರಮುಖ ವಿಜ್ಞಾನಿಗಳು ಅಧ್ಯಯನ ನಡೆಸಿದರು. ಇದರಿಂದ ಪರಿಸರಕ್ಕೂ ಯಾವುದೇ ಹಾನಿ ಇಲ್ಲ ಎಂದರು. 6 ದಿನಗಳಿಂದ ಈ ಪ್ರಮಾಣ ಜಾಸ್ತಿಯಾಗುತ್ತಿದೆ. ಯಾರಿಗೂ ಇದರಿಂದ ತೊಂದರೆ ಇಲ್ಲ. ಚಂಡಮಾರುತದಿಂದಾಗಿ ಕಡಲು ಪ್ರಜ್ಷುಬ್ದಗೊಂಡ ಕಾರಣ ಹೀಗೆ ಆಗಿದೆ. ಆದರೆ ಮೂರು ದಶಕಗಳಿಂದ ಈ ರೀತಿಯ ಬೆಳವಣಿಗೆಯನ್ನು ಕಂಡಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್. ಆರ್ ಮತ್ತು ಪ್ರಾಧ್ಯಾಪಕ ಡಾ.ಶಿವಕುಮಾರ ಮದಗ ಹೇಳಿದರು. ಅಲ್ಲದೆ, ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪಿನ ಅಂಶವೂ ಅನೈಸರ್ಗಿಕವಾಗಿದೆ ಎಂದವರು ಹೇಳಿದ್ದು, ಇನ್ನು ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ ಎಂದಿದ್ದಾರೆ.
ವರದಿ: ಹರೀಶ ಮಾಂಬಾಡಿ ಮಂಗಳೂರು
ವಿಭಾಗ