Viral Video: ಉಡುಪಿ ರಸ್ತೆಹೊಂಡ ದರ್ಶನ ಮಾಡಿಸಿದ ಅಷ್ಟಮಿ ವೇಷಗಳು, ಯಮ ಪ್ರೇತಗಳಿಗೆ ಶಿಕ್ಷೆ ನೀಡಿದ್ದೇನು?-udupi news video of bad road condition with potholes by krishna janmastami dress protest in udupi went viral hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಉಡುಪಿ ರಸ್ತೆಹೊಂಡ ದರ್ಶನ ಮಾಡಿಸಿದ ಅಷ್ಟಮಿ ವೇಷಗಳು, ಯಮ ಪ್ರೇತಗಳಿಗೆ ಶಿಕ್ಷೆ ನೀಡಿದ್ದೇನು?

Viral Video: ಉಡುಪಿ ರಸ್ತೆಹೊಂಡ ದರ್ಶನ ಮಾಡಿಸಿದ ಅಷ್ಟಮಿ ವೇಷಗಳು, ಯಮ ಪ್ರೇತಗಳಿಗೆ ಶಿಕ್ಷೆ ನೀಡಿದ್ದೇನು?

Udupi News ಗುಂಡಿಬಿದ್ದ ರಸ್ತೆಗಳನ್ನು ಮುಚ್ಚದೇ ಇದ್ದರೆ ಏನು ಮಾಡಬಹುದು. ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ ದಾಖಲಿಸಿದ್ದು ಹೀಗೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಅಷ್ಟಮಿ ವೇಷಧಾರಿಗಳಾಗಿ ರಸ್ತೆ ಗುಂಡಿ ನೋಡಲು ಬಂದ ಉಡುಪಿ ಜನ
ಅಷ್ಟಮಿ ವೇಷಧಾರಿಗಳಾಗಿ ರಸ್ತೆ ಗುಂಡಿ ನೋಡಲು ಬಂದ ಉಡುಪಿ ಜನ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಸ್ತೆಗಳು ಮಳೆಗಾಲದಲ್ಲಿ ಬಹಳಷ್ಟು ಹದಗೆಟ್ಟಿವೆ. ಸಿಂಗಲ್ ರೋಡ್ ಇದ್ದರಂತೂ ವಾಹನ ಸವಾರರ ಕತೆ ಹೇಳುವುದೇ ಕಷ್ಟ. ರಸ್ತೆ ಹೊಂಡ ತಪ್ಪಿಸಲು ಹೋಗಿ ಅಪಘಾತಗಳು ಆದದ್ದೂ ಉಂಟು. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ನಾನಾ ಬಗೆಯ ವೇಷಗಳನ್ನು ಭಕ್ತರು ಹಾಕುತ್ತಾರೆ. ಇಂಥ ಸಂದರ್ಭ ರಸ್ತೆ ಹೊಂಡಕ್ಕೆ ಸಂಬಂಧಿಸಿದ ಸ್ಥಿತಿಗತಿಯನ್ನು ಬಿಂಬಿಸುವ ವೇಷವೊಂದರ ವಿಡಿಯೋ ಮಂಗಳವಾರ ವೈರಲ್ ಆಯಿತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದರ ಹಿಂದೆ ರಸ್ತೆ ದುರವಸ್ಥೆಯ ಕುರಿತ ಕಾಳಜಿಯೂ ವ್ಯಕ್ತವಾಯಿತು. ಪ್ರಚಲಿತ ಸನ್ನಿವೇಶಗಳ ಕುರಿತು ಆಡಳಿತದ ಕಣ್ತೆರೆಸುವ ವಿಡಿಯೋ ಹೇಗಿತ್ತು?

ಯಮನ ವೇಷಧಾರಿ, ಚಿತ್ರಗುಪ್ತನ ವೇಷಧಾರಿ ಹಾಗೂ ಪ್ರೇತದ ವೇಷಧಾರಿಗಳು ಉಡುಪಿಯ ಆದಿ ಉಡುಪಿಯಲ್ಲಿ ಕಾಣಸಿಗುತ್ತಾರೆ. ಇವರಲ್ಲಿ ಯಮನ ವೇಷಧಾರಿ ಚಿತ್ರಗುಪ್ತನೊಂದಿಗೆ ಟೇಪ್ ಹಿಡಿದು ರಸ್ತೆಯ ಹೊಂಡವನ್ನು ಅಳೆಯುವುದನ್ನು ಮಾಡುತ್ತಾರೆ. ಅಷ್ಟರಾಗಲೇ ಪ್ರೇತದ ವೇಷಧಾರಿ ಛಂಗನೆ ಹೊಂಡವನ್ನು ಹಾರುತ್ತಾನೆ. ಎಷ್ಟು ಹೊಂಡ ಹಾರುತ್ತಾನೆ ಎಂಬುದೇ ಮಜಾ. ಯಮ, ಚಿತ್ರಗುಪ್ತನ ಸಲಹೆ ಸೂಚನೆಯಂತೆ ಪ್ರೇತಾತ್ಮಗೆ ಹೊಂಡ ಹಾರುವ ಶಿಕ್ಷೆಯನ್ನು ನೀಡುವುದು ಈ ಸನ್ನಿವೇಶದ ತಾತ್ಪರ್ಯ. ಭೂಲೋಕದಲ್ಲಿ ಉಡುಪಿಗೆ ಬಂದು, ಅಲ್ಲಿಯ ರಸ್ತೆ ಹೊಂಡಗಳನ್ನು ಹಾರಿದರೇ ನಿನಗೆ ಮೋಕ್ಷ ಎಂಬರ್ಥದ ವಿಡಂಬನಾತ್ಮಕ ಸನ್ನಿವೇಶವನ್ನು ಬಹಳ ಅಚ್ಚುಕಟ್ಟಾಗಿ, ಅಷ್ಟೇ ಮಾರ್ಮಿಕವಾಗಿ ವೇಷಧಾರಿಗಳು ತೋರಿಸಿಕೊಟ್ಟದ್ದು, ರಸ್ತೆಯ ಕುರಿತು ಜನಾಭಿಪ್ರಾಯಕ್ಕೆ ಹಿಡಿದ ಕೈಗನ್ನಡಿಯಂತಿತ್ತು.

ಉಡುಪಿ ಮಾತ್ರವಲ್ಲದೆ, ದಕ್ಷಿಣ ಕನ್ನಡದ ಹೈವೇಯೂ ಹೊಂಡಮಯವಾಗಿದೆ. ಮಂಗಳೂರು ಹೃದಯಭಾಗದ ಪ್ರಮುಖ ರಸ್ತೆಗಳಲ್ಲಿ ಆಳೆತ್ತರದ ಹೊಂಡಗಳಿವೆ. ಉಡುಪಿಯೂ ಇದಕ್ಕೆ ಭಿನ್ನವೇನಲ್ಲ. ಚಂದ್ರ ತಪಸ್ಸು ಮಾಡಿದ ಊರು ಎಂದು ಹೇಳಲಾಗುವ ಉಡುಪಿಯಲ್ಲಿ ಚಂದ್ರನನ್ನೇ ನೆನಪಿಸುವ ಹೊಂಡಗಳೂ ಉಂಟು ಎಂದು ಜನರು ಲೇವಡಿ ಮಾಡುತ್ತಿದ್ದಾರೆ. ಆದಿಉಡುಪಿ ಅಷ್ಟೇ ಅಲ್ಲ, ರಾಷ್ಟ್ರೀಯ ಹೆದ್ದಾರಿಯ ಭಾಗಗಳು, ಒಳರಸ್ತೆಗಳಲ್ಲೂ ಹಾನಿಯಾದ ಭಾಗಗಳು ಇವೆ. ಇವನ್ನೆಲ್ಲಾ ಎತ್ತಿ ತೋರಿಸುವ ಕಾರ್ಯವನ್ನು ಈ ಅಷ್ಟಮಿ ವೇಷಗಳು ಮಾಡಿತೋರಿಸಿವೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

--