Visa to Heaven; ಸ್ವರ್ಗಕ್ಕೆ ಹೋಗಲು ಸಂಸ್ಕೃತವೇ ವೀಸಾ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆಗೆ ವ್ಯಾಪಕ ಟೀಕೆ-udupi news visa to heaven controversy sugunendra theertha swamiji says sanskrit knowledge is a must uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Visa To Heaven; ಸ್ವರ್ಗಕ್ಕೆ ಹೋಗಲು ಸಂಸ್ಕೃತವೇ ವೀಸಾ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆಗೆ ವ್ಯಾಪಕ ಟೀಕೆ

Visa to Heaven; ಸ್ವರ್ಗಕ್ಕೆ ಹೋಗಲು ಸಂಸ್ಕೃತವೇ ವೀಸಾ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆಗೆ ವ್ಯಾಪಕ ಟೀಕೆ

Visa to Heaven Controversy; ಸ್ವರ್ಗಕ್ಕೆ ಹೋಗಬಯಸುವವರು ಸಂಸ್ಕೃತ ಭಾಷೆ ಕಲಿಯಬೇಕು ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸ್ವಾಮೀಜಿ ಭಾಷಣದ ವಿಡಿಯೋ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿವರ ಇಲ್ಲಿದೆ.

ಸ್ವರ್ಗಕ್ಕೆ ಹೋಗಲು ಸಂಸ್ಕೃತವೇ ವೀಸಾ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸ್ವರ್ಗಕ್ಕೆ ಹೋಗಲು ಸಂಸ್ಕೃತವೇ ವೀಸಾ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಉಡುಪಿ: ಸ್ವರ್ಗಕ್ಕೆ ಹೋಗಬೇಕು ಅಂದರೆ ಸಂಸ್ಕೃತ ಭಾಷೆ ಗೊತ್ತಿರಬೇಕು. ಇಲ್ಲದಿದ್ದರೆ ಸ್ವರ್ಗಕ್ಕೆ ವೀಸಾ ಸಿಗುವುದಿಲ್ಲ. ಸ್ವರ್ಗಕ್ಕೆ ಹೋಗಬಯಸುವವರು ಸಂಸ್ಕೃತ ಭಾಷೆ ಕಲಿಯಬೇಕು ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಅವರ ಈ ಹೇಳಿಕೆ ಈಗ ಟೀಕೆಗೆ ಒಳಗಾಗಿದ್ದು, ಸಮಾಜದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಒಂದು ತಿಂಗಳು ಪೂರ್ತಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಮಾಸೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಕಾರ್ಯಕ್ರಮದ ಅತಿಥಿಯಾಗಿದ್ದರು.

ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದೇನು?

ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಸಂಸ್ಕೃತದಲ್ಲಿ ಮಾತನಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, ಎಲ್ಲ ಭಾಷೆಗಳಿಗೂ ಸಂಸ್ಕೃತವೇ ಮೂಲ. ಆಂಗ್ಲ ಭಾಷೆಗೂ, ಅದರ ಪರಿವಾರ ಭಾಷೆಗಳಿಗೂ ಸಂಸ್ಕೃತವೇ ಮೂಲ. ಕನ್ನಡ ಭಾಷೆ ಕರ್ನಾಟಕದ ಬಾಷೆ, ಹಿಂದಿ ಭಾರತದ ಭಾಷೆ. ಆಂಗ್ಲ ಭಾಷೆ ಅಂತಾರಾಷ್ಟ್ರೀಯ ಭಾಷೆ. ಇವೆಲ್ಲವೂ ಸಂವಹನಕ್ಕೆ ಅಗತ್ಯವಾದುದು. ಇದೇ ರೀತಿ ಸಂಸ್ಕೃತ ಅಂತರ್‌ಲೋಕದ ಭಾಷೆ. ದೇವಲೋಕದಲ್ಲಿ ವ್ಯವಹರಿಸಬೇಕಾದರೆ ಸಂಸ್ಕೃತ ಭಾಷೆ ಬೇಕು. ಹೀಗಾಗಿ, ಸ್ವರ್ಗ ಲೋಕಕ್ಕೆ ಹೋಗಲು ಬಯಸುವವರು ಅಲ್ಲಿ ವ್ಯವಹರಿಸುವುದಕ್ಕಾಗಿ ಸಂಸ್ಕೃತ ಭಾಷೆ ಕಲಿಯಬೇಕು ಎಂದು ಹೇಳಿದರು.

ಅವರ ಭಾಷಣದ ವಿಡಿಯೋ ಇಲ್ಲಿದೆ

ಸ್ವರ್ಗಕ್ಕೆ ಸಂಸ್ಕೃತವೇ ವೀಸಾ ವಿವಾದ; ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸ್ವರ್ಗಕ್ಕೆ ಸಂಸ್ಕೃತವೇ ವೀಸಾ ಎಂದು ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಲೋಕೇಶ್‌ ಪೂಜಾರಿ ಎಂಬುವವರು ಈ ಬಗ್ಗೆ, “ಸಂಸ್ಕೃತ ಗೊತ್ತಿರೋರು ಇನ್ನೂ ಯಾಕೆ ಈ ನರಕದಲ್ಲಿ ಇರಬೇಕು. ಸ್ವರ್ಗಕ್ಕೇ ಹೋಗಬಹುದಲ್ವಾ..!!!” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು,

ವನಂ ಶಿವರಾಮು ಎಂಬುವವರು, “67 ವರ್ಷದ ನಾನು ಈಗಂತೂ ಸಂಸ್ಕೃತ ಕಲಿಯಲಾರೆ.ಹೀಗಾಗಿ ನನಗಂತೂ ಸ್ವರ್ಗ ಸಿಗುವುದಿಲ್ಲ.ಅಷ್ಟಕ್ಕೂ ನನಗದು ಬೇಡವೇಬೇಡ.ಪಾಪ ಅಲ್ಲಿ ರಂಭೆ, ಊರ್ವಸಿ, ಮೇನಕೆ,‌ ತಿಲೋತ್ತಮೆಯರೆಲ್ಲ ಎಷ್ಟು ಜನರ ಸೇವೆ ಮಾಡಿಯಾರು!? ನನ್ನಿಂದಲಾದರೂ ಅವರಿಗ ಅಲ್ಪವಾದರೂ ವಿಶ್ರಾಂತಿ ಸಿಗಲಿ. ಬಾಲ್ಯದಲ್ಲಿ ಎಮ್ಮೆ ಮೇಯಿಸಿಕೊಂಡು , ಅದರ ಮೇಲೆ ಸವಾರಿ ಮಾಡಿ ,ಅದರ ಬಾಲ ಹಿಡಿದು ಈಜು ಕಲಿತ ನನಗೆ ನರಕದಲ್ಲಿ ಯಮನ ಕೋಣ ಸಿಗುತ್ತದಲ್ಲಾ !? ಅದೇ ಸಾಕು” ಎಂದಿದ್ದಾರೆ.

ತಾಜ್ ಗಡಿನಾಡು ಎಂಬುವವರು ಟೀಕಿಸಿರುವುದು ಹೀಗೆ - “ಅವರಿಗೆ ಗೊತ್ತಿಲ್ಲ ಅಷ್ಟೇ…. ನಮ್ಮೂರಿಂದ ನಂದನ್ ಬಸ್ಸು ಹತ್ತಿದರೆ ಮುಕ್ಕಾಲು ಗಂಟೆಯೊಳಗೆ ಪೆರ್ಲ ಮಾರ್ಗವಾಗಿ ‘ಸ್ವರ್ಗ’ ತಲುಪುತ್ತೆ. ಅಲ್ಲಿ ತುಳು ಮತ್ತು ಬ್ಯಾರಿ ಮಾತಾಡೋರು ಇರೋದು. ಅಲ್ಲಿನವರು ಕೋಪ ಬಂದ್ರೆ ಬಯ್ಯುವಾಗ ಮಾತ್ರ ‘ಸಂಸ್ಕೃತ’ ಮಾತಾಡೋದು”.

“ಗೂಗಲ್ ಟ್ರಾನ್ಸ್‌ಲೆಟರ್ ಬಳಸೋಣ” ಎಂದು ಜಗದೀಶ್‌ ಲಘುವಾಗಿ ಛೇಡಿಸಿದ್ದಾರೆ.

ಸತೀಶ್ ಕುಮಾರ್ ಕೆ ಎಂಬುವವರು ಗಂಭೀರವಾಗಿ, “ಇದು ತುಂಬಾ ಅತಿರೇಕದ ಹೇಳಿಕೆ... ಸ್ವರ್ಗಕ್ಕೂ ಭಾಷೆಗೂ ಎತ್ತಣ ಸಂಬಂಧ? ಮೇಲಾಗಿ ಸ್ವರ್ಗ ನರಕದ ಇರುವಿಕೆಯನ್ನು ಕಂಡವರಾದರೂ ಯಾರು?” ಎಂದು ಪ್ರಶ್ನಿಸಿದ್ದಾರೆ.

ವಡ್ಡಗೆರೆ ನಾಗರಾಜಯ್ಯ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, “ತುಮಕೂರಿನ ಸಿದ್ಧಗಂಗಾ ಮಠದ ಸಂಸ್ಕೃತ ತರಗತಿಗಳಲ್ಲಿ ನಾನು ಸಂಸ್ಕೃತ‌ ಕಲಿತದ್ದರಿಂದಾಗಿ ನನಗೆ ಸ್ವರ್ಗಕ್ಕೆ ಹೋಗಲು ಅರ್ಹತೆ ಸಿಕ್ಕಿತು !! ಸಂಸ್ಕೃತ ಕಲಿಯದಿರುವ ನನ್ನ ತಂದೆ ತಾಯಿ ಮತ್ತು ಅಪಾರವಾದ ಬಂಧುಗಳಿಗಾಗಿ ಆ ಸ್ವರ್ಗ ನನಗೆ ಬೇಡವೆಂದು ನಿರಾಕರಿಸುತ್ತಿದ್ದೇನೆ !!” ಎಂದು ಹೇಳಿದ್ದಾರೆ.

ಹಾಗೆ, ಸ್ವರ್ಗಕ್ಕೆ ವೀಸಾ ವಿಚಾರ ಈಗ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ, ಚರ್ಚೆಗೆ ಗ್ರಾಸವಾಗಿದೆ.