ಕನ್ನಡ ಸುದ್ದಿ  /  Karnataka  /  Udupi News Water Scarcity To Paddy Crop Water Problem In Udupi Paddy Cultivation Hsm

ಉಡುಪಿ ಜಿಲ್ಲೆಯಲ್ಲಿ ಸುಗ್ಗಿ ಬೆಳೆಗೆ ನೀರಿನ ಕೊರತೆ; ಒಣಗುತ್ತಿದೆ ಅಳಿದುಳಿದ ಪೈರು

Water Problem in Udupi: ಭತ್ತದ ತೆನೆ ಹಾಲುಕಟ್ಟುವ ಹಂತದಲ್ಲಿ ನೀರಿನ ಅಭಾವವಾದರೆ ಶೇ.75ರಷ್ಟು ಫಸಲಿನ ಕೊರತೆ ಗ್ಯಾರಂಟಿ. ಹೀಗಾಗಿ ದಿನದಿಂದ ಏರುತ್ತಿರುವ ತಾಪಮಾಣ, ಬಿರು ಬಿಸಿಲಿಗೆ ಗದ್ದೆಯಲ್ಲಿ ಅಳಿದುಳಿದ ಪೈರು ಒಣಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ರೈತರು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. (ವರದಿ: ಹರೀಶ ಮಾಂಬಾಡಿ)

ಭತ್ತದ ಬೆಳೆಗೆ ನೀರಿನ ಕೊರತೆ
ಭತ್ತದ ಬೆಳೆಗೆ ನೀರಿನ ಕೊರತೆ

ಉಡುಪಿ: ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಭತ್ತದ ಕೃಷಿಗೆ ಹೊಡೆತ ಬಿದ್ದಿದೆ. ಭತ್ತದ ತೆನೆ ಹಾಲುಕಟ್ಟುವ ಹಂತದಲ್ಲಿ ನೀರಿನ ಅಭಾವವಾದರೆ ಶೇ.75ರಷ್ಟು ಫಸಲಿನ ಕೊರತೆ ಗ್ಯಾರಂಟಿ. ಹೀಗಾಗಿ ದಿನದಿಂದ ಏರುತ್ತಿರುವ ತಾಪಮಾಣ, ಬಿರು ಬಿಸಿಲಿಗೆ ಗದ್ದೆಯಲ್ಲಿ ಅಳಿದುಳಿದ ಪೈರು ಒಣಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ರೈತರು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಒಟ್ಟು 4,534 ಮಿ.ಮೀ. ವಾಡಿಕೆ ಮಳೆಯಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ 3,524 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.22ರಷ್ಟು ವಾಡಿಕೆ ಮಳೆ ಕಡಿಮೆಯಾಗಿದೆ. ನೀರಿನ ಅಭಾವಕ್ಕೆ ಇದೇ ಪ್ರಮುಖ ಕಾರಣವಾಗಿದೆ.

ಕಾರ್ಕಳ ಮತ್ತು ಹೆಬ್ರಿಯನ್ನು ಬರಪೀಡಿತ ತಾಲೂಕಾಗಿ ಸರಕಾರ ಘೋಷಿಸಿದರೂ ನಿರೀಕ್ಷಿತ ಪರಿಹಾರವೂ ದೊರಕಿಲ್ಲ. ಇದೀಗ ಎರಡು ತಾಲೂಕುಗಳ ನಡುವೆ ಹರಿಯುವ ಫಲ್ಗುಣಿ, ಸ್ವರ್ಣಾ, ಪಾಪನಾಶಿನಿ, ಸೀತಾನದಿ ಮತ್ತು ಶಾಂಭವಿ ನದಿಗಳಲ್ಲೂ ನೀರಿನ ಅಭಾವ ಕಾಣಿಸಿಕೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಜೂನ್, ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಮಳೆ ಇಲ್ಲದ ಕಾರಣ, ಬಹುತೇಕ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂದೇಟು ಹಾಕಿದ್ದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಶೇ.22ರಷ್ಟು ಪ್ರದೇಶದಲ್ಲಿ ರೈತರು ನಾಟಿ ಮಾಡಿಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಕಳೆದ ಮುಂಗಾರು ಕೃಷಿ ಹಂಗಾಮಿನ 36 ಸಾವಿರ ಹೆಕ್ಟೇರ್ ಬಿತ್ತನೆ ಮಾಡುವ ಬಗ್ಗೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿತ್ತನೆ ಮಾಡಿದ್ದು, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಶೇ.22ರಷ್ಟು ಭತ್ತದ ಕೃಷಿಯಲ್ಲಿ ಕುಸಿತ ಕಂಡಿದೆ.

ಭಾರೀ ಪ್ರಮಾಣದಲ್ಲಿ ಕಳೆ ಸಮಸ್ಯೆ

ಸುಗ್ಗಿ ಗದ್ದೆಯಲ್ಲಿ ಕಳೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಬಿತ್ತನೆಯ ಬಳಿಕ ಸಸಿಗಳು ಬೆಳೆಯುತ್ತಿದ್ದಂತೆ ಈ ಕಳೆಗಳು ಬೆಳೆದು, ಗದ್ದೆಗೆ ಹಾಕಿದ ಗೊಬ್ಬರ ಹೀರುತ್ತಿವೆ. ಭತ್ತದ ಗಿಡದಿಂದ ಅದನ್ನು ಬೇರ್ಪಡಿಸುವುದು, ಅದಕ್ಕಾಗಿ ಒಂದಷ್ಟು ಕೂಲಿ ಪಾವತಿಸುವುದು ರೈತರ ಪಾಲಿಗೆ ಹೆಚ್ಚುವರಿ ಹೊರೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ನವಿಲುಗಳ ಸಂಖ್ಯೆಯೂ ಮಿತಿಮೀರಿದೆ. ಹಿಂಡುಹಿಂಡಾಗಿ ಭತ್ತದ ಗದ್ದೆಗೆ ದಾಳಿ ನಡೆಸುತ್ತಿದೆ. ಒಂದು ಗುಂಪೇ ಒಂದು ಗದ್ದೆಯಲ್ಲಿ ಓಡಾಡಿದರೆ ಸಾಕು, ಮುಂದೆ ರೈತ ಆ ಗದ್ದೆಯಲ್ಲಿ ಫಸಲಿನ ನಿರೀಕ್ಷೆ ಮಾಡುವಂತಿಲ್ಲ. ತಿಂದು ಹಾಕುವುದಕ್ಕಿಂತ ಹೆಚ್ಚು ತುಳಿದು ಹಾಕಿ, ಪೈರನ್ನು ಮಗುಚಿ ಹಾಳು ಮಾಡುತ್ತಿವೆ. ಕಾಡು ಪ್ರಾಣಿಗಳ ಉಪಟಳವೂ ಈ ಬಾರಿ ಹೆಚ್ಚಿದೆ.

ವರದಿ: ಹರೀಶ ಮಾಂಬಾಡಿ

IPL_Entry_Point

ವಿಭಾಗ