Udupi Temple: ಉಡುಪಿ ಜಿಲ್ಲೆಯ ಕುಂದಾಪುರದ ತೆಗ್ಗುಂಜೆಯಲ್ಲಿ 17ನೇ ಶತಮಾನದ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  Udupi Temple: ಉಡುಪಿ ಜಿಲ್ಲೆಯ ಕುಂದಾಪುರದ ತೆಗ್ಗುಂಜೆಯಲ್ಲಿ 17ನೇ ಶತಮಾನದ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

Udupi Temple: ಉಡುಪಿ ಜಿಲ್ಲೆಯ ಕುಂದಾಪುರದ ತೆಗ್ಗುಂಜೆಯಲ್ಲಿ 17ನೇ ಶತಮಾನದ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

ಉಡುಪಿ ಜಿಲ್ಲೆ ಕುಂದಾಪುರದ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಸಿಕ್ಕಿದೆ. ಶಿಲ್ಪದ ಶೈಲಿ ಮತ್ತು ಲಕ್ಷಣಗಳು 12 ನೇ ಶತಮಾನದ ಶಿಲ್ಪಶೈಲಿಯನ್ನು ಹೊಂದಿವೆ. ಈ ಶಿಲ್ಪವನ್ನು ಅದರ ಪೀಠದಿಂದ ಬೇರ್ಪಡಿಸಿದರೆ, ಪೀಠದ ಮೇಲ್ಬಾಗದಲ್ಲಿ ಎರಡು ಸಾಲಿನ ಒಂದು ಚಿಕ್ಕ ಶಾಸನವಿದೆ. (ವರದಿ: ಹರೀಶ್‌ ಮಾಂಬಾಡಿ)

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ

ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಕಂಡು ಬಂದಿದೆ. ಸುಮಾರು 35 ಸೆ.ಮೀ ಎತ್ತರ, 26 ಸೆ.ಮೀ ಅಗಲದ ಪಂಚಲೋಹದ ಈ ಶಿಲ್ಪ, ಶೈವ-ಶಾಕ್ತ ಮತ್ತು ನಾಗಾರಾಧನೆ ಪಂಥಗಳ ಅಪೂರ್ವ ಸಂಗಮದ ಪ್ರತೀಕವಾಗಿದೆ ಎಂದು ಸಂಶೋಧಕ ಪ್ರೊ.ಟಿ ಮುರುಗೇಶಿ ತಿಳಿಸಿದ್ದಾರೆ. ಇದು 17ನೇ ಶತಮಾನದ್ದಾಗಿದ್ದು, ಆ ಕಾಲದಲ್ಲಿದ್ದ ಉಮಾಮಹೇಶ್ವರ ಪಂಥವನ್ನು ನೆನಪಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ಎತ್ತರವಾದ ಪದ್ಮಾಸನ ಪೀಠದ ಮೇಲೆ ಆಸೀನವಾಗಿರುವ ಶಿವ ಜಟಾಮುಕಟನಾಗಿದ್ದು, ಪಂಚ ನಾಗಜಡೆಗಳ ಮುಕ್ಕೊಡೆಯನ್ನು ಹೊಂದಿದ್ದಾನೆ. ಪರ್ಯಂಕಾಸನ/ಸುಖಾಸೀನ ಭಂಗಿಯಲ್ಲಿ ಕುಳಿತಿರುವ ಶಿವನ ಎಡತೊಡೆಯ ಮೇಲೆ ಪಾರ್ವತಿ ಆಸೀನಳಾಗಿದ್ದಾಳೆ. ಶಿವನ ಕೆಳಗಿನ ಕೈ ಅಭಯ ಮುದ್ರೆಯಲ್ಲಿದ್ದು, ಎಡಗೈ ಪಾರ್ವತಿಯ ಎಡತೊಡೆಯನ್ನು ಸ್ಪರ್ಶಿಸುವಂತೆ ನಿರ್ದೇಶಿಸಲಾಗಿದೆ. ಹಿಂದಿನ ಬಲಗೈಯಲ್ಲಿ ಪರಶು ಹಾಗೂ ಎಡಗೈಯಲ್ಲಿ ಮೃಗಧರನಾಗಿದ್ದಾನೆ. ಕೆಳಗೆ ಇಳಿಬಿಟ್ಟಿರುವ ಶಿವನ ಬಲಗಾಲು ನಂದಿಯನ್ನು ಸ್ಪರ್ಶಿಸುತ್ತಿದೆ. ಶಿವನ ಹಣೆಯ ಮಧ್ಯ ಭಾಗದಲ್ಲಿ ಮೂರನೇ ಕಣ್ಣನ್ನು ಚಿತ್ರಿಸಲಾಗಿದೆ. ಶಿವನ ಎಡಭಾಗದಲ್ಲಿ ಎಡಮುರಿ ಗಣಪತಿಯಿದ್ದು, ಬಲಭಾಗದಲ್ಲಿ ಷಣ್ಮುಖನ ಶಿಲ್ಪವಿದೆ. ಶಿಲ್ಪದ ಹಿಂಭಾಗದಲ್ಲಿ ಆಕರ್ಷಕವಾದ ಮಕರ ಲಾಂಛನದ ಪ್ರಭಾವಳಿಯಿದೆ. ಪ್ರಭಾವಳಿಯ ಮಧ್ಯದಲ್ಲಿ ಸಿಂಹ ಲಾಂಛನವಿದೆ. ಶಿಲ್ಪದ ಶೈಲಿ ಮತ್ತು ಲಕ್ಷಣಗಳು 12 ನೇ ಶತಮಾನದ ಶಿಲ್ಪಶೈಲಿಯನ್ನು ಹೊಂದಿವೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ್ತ ವಿಭಾಗದ, ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ವಿವರ ನೀಡಿದ್ದಾರೆ.

ಚಾರಿತ್ರಿಕ ಮಹತ್ವವೇನು?

ಈ ಶಿಲ್ಪ ಕಲಾ ಇತಿಹಾಸಕಾರರಿಗೆ ಒಂದು ಅತ್ತ್ಯುತ್ತಮ ಪಾಠದ ಉದಾಹರಣೆಯಾಗಿದೆ. ಕೇವಲ ಕಲಾಶೈಲಿಯ ಆಧಾರದ ಮೇಲೆ ಕಾಲನಿರ್ಣಯ ಮಾಡುವುದು ಉಚಿತವಲ್ಲ ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ. ಈ ಶಿಲ್ಪವನ್ನು ಅದರ ಪೀಠದಿಂದ ಬೇರ್ಪಡಿಸಿದರೆ, ಪೀಠದ ಮೇಲ್ಬಾಗದಲ್ಲಿ ಎರಡು ಸಾಲಿನ ಒಂದು ಚಿಕ್ಕ ಶಾಸನವಿದೆ. ಮೊದಲನೇ ಸಾಲಿನಲ್ಲಿ ಮೂರ್ತಿ ಸಾಕ್ಷಿ ಎಂಬ ಒಕ್ಕಣೆಯಿದೆ, ಎರಡನೇ ಸಾಲಿನಲ್ಲಿ ಗ 3 ಕೆರ ಶು 14 ಎಂಬ ಬರಹವಿದೆ. ಅಂದರೆ, ಮೂರು ಗದ್ಯಾಣದ ಚಿನ್ನವನ್ನು ಎರಕ ಹೊಯ್ಯಲಾಗಿದ್ದು, ಈ ಪಂಚಲೋಹದ ಮೂರ್ತಿಯಲ್ಲಿ 14 ಭಾಗ ಶುದ್ಧ ಚಿನ್ನವಿದೆ, ಅದಕ್ಕೆ ಈ ಮೂರ್ತಿ ಸಾಕ್ಷಿ ಎಂದು ಬರೆಯಲಾಗಿದೆ. ಬರವಣಿಗೆಯು 17ನೇ ಶತಮಾನದ ಲಿಪಿ ಲಕ್ಷಣವನ್ನು ಹೊಂದಿರುವುದರಿಂದ, ಈ ಮೂರ್ತಿಯನ್ನು 12ನೇ ಶತಮಾನದ ಶೈಲಿಯಲ್ಲಿ ವಿಜಯನಗರೋತ್ತರ ಕಾಲದಲ್ಲಿ ತಯಾರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಶಿಲ್ಪದ ನಿಜವಾದ ಕಾಲಮಾನ 17ನೇ ಶತಮಾನ ಎಂದು ಖಚಿತವಾಗುತ್ತದೆ ಎಂದು ಮುರುಗೇಶಿ ತಿಳಿಸಿದ್ದಾರೆ.

ಉಮಾಮಹೇಶ್ವರ ಪಂಥ

ಉಮಾಮಹೇಶ್ವರ ಪಂಥ ಅಥವಾ ಸೋಮ ಪಂಥವನ್ನು ಸೋಮಭಟ್ಟ ಎಂಬುವನು ಗುಜಾರಾತಿನ ಸೋಮನಾಥದಲ್ಲಿ ಕ್ರಿ.ಶ. 10-11 ನೇ ಶತಮಾನದಲ್ಲಿ ಹುಟ್ಟು ಹಾಕಿದ. ಬೌದ್ಧ ಧರ್ಮದ ವಜ್ರಯಾನ ಪಂಥದಿಂದ ಪ್ರಭಾವಿತವಾದ ಈ ಪಂಥ ಪ್ರೇಮ ಕೇಂದ್ರಿತ ಪಂಥವಾಗಿದೆ. ಕರ್ನಾಟಕದ 12ನೇ ಶತಮಾನದ ಶಾಸನವೊಂದು ಉಮೆಯನ್ನು ಒಂದರೆಗಳಿಗೆ ಬಿಟ್ಟಿರಲಾರ ಸೋಮ ಎಂದು ಬಣ್ಣಿಸುತ್ತದೆ. ಹನ್ನೆರಡನೇ ಶತಮಾನದ ಹೊತ್ತಿಗೆ ಕರಾವಳಿಯಲ್ಲಿ ಬೇರುಬಿಟ್ಟ ಈ ಪಂಥ, ಕರಾವಳಿಯ ಜನಪ್ರಿಯ ಧಾರ್ಮಿಕ ಪಂಥವಾಗಿ ಜನಮನ್ನಣೆಯನ್ನು ಪಡೆದುಕೊಂಡಿತು. ಈ ಶಿಲ್ಪದ ಅಧ್ಯಯನಕ್ಕೆ ಗೌರವ ಅಧ್ಯಕ್ಷರಾದ ತೋನ್ಸೆ ಸುಧಾಕರ ಶೆಟ್ಟಿ, ಅಧ್ಯಕ್ಷರಾದ ತಗ್ಗುಂಜೆ ದಯಾನಂದ ಶೆಟ್ಟಿ (ಆಸ್ಟ್ರೇಲಿಯಾ), ತಗ್ಗುಂಜೆ ಸಚಿನ್ ಶೆಟ್ಟಿ (ಆಸ್ಟ್ರೇಲಿಯಾ), ನಾಗರಾಜ್ ಶೆಟ್ಟಿ, ರವಿರಾಜ ಶೆಟ್ಟಿ, ಮಂಜಯ್ಯ ಶೆಟ್ಟಿ ಮತ್ತು ಕುಂದಾಪುರದ ಬಿ. ಹರೀಶ್ ಹೆಗ್ಡೆ ನೆರವು ನೀಡಿದ್ದಾರೆ ಎಂದು ಪ್ರೊ.ಟಿ. ಮುರುಗೇಶಿ ಹೇಳಿದ್ದಾರೆ.

Whats_app_banner