Udyama Shakti: ಮಹಿಳೆಯರಿಗೆ ಬಲ ತುಂಬಲಿದೆ ಉದ್ಯಮ ಶಕ್ತಿ; ಮಹಿಳಾ ಸ್ವಸಹಾಯ ಸಂಘದ ಪೆಟ್ರೋಲ್ ಬಂಕ್‌ಗೆ ನೀವೂ ಅಪ್ಲೈ ಮಾಡಬಹುದು
Karnataka Budget 2023: ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮ ಶಕ್ತಿ ಯೋಜನೆಯನ್ನೂ ಘೋಷಿಸಿದ್ದಾರೆ. ಇದರ ಮೂಲಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಉದ್ಯಮಶೀಲತೆ ಹೆಚ್ಚಿಸಲು ಮುಂದಾಗಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದು, ಈ ಸಲದ ಕರ್ನಾಟಕ ಬಜೆಟ್ 2023 (Karnataka Budget 2023) ಲ್ಲಿ ಉದ್ಯಮ ಶಕ್ತಿ ಯೋಜನೆಯನ್ನು ಘೋಷಿಸಿ ಗಮನಸೆಳೆದಿದ್ದಾರೆ.
ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ʻಉದ್ಯಮ ಶಕ್ತಿʼ (Udyama Shakti) ಎಂಬ ಯೋಜನೆಯನ್ನು ಜಾರಿಗೊಳಿಸಲಿದೆ. ಇದರ ಮೂಲಕ ರಾಜ್ಯದ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಲಾಗುತ್ತದೆ. ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಅವುಗಳ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ಉದ್ಯಮ ಶಕ್ತಿ ಯೋಜನೆಗೆ ಪೆಟ್ರೋಲಿಯಂ ಕಂಪನಿಗಳ ಸಹಯೋಗ ಇರುವ ಕಾರಣ, ಪೆಟ್ರೋಲ್ ಬಂಕ್ ಸ್ಥಾಪನೆಗೆ ಬೇಕಾದ ಹಣವನ್ನು ಆಯಾ ಕಂಪನಿಗಳೇ ಹೂಡಿಕೆ ಮಾಡಲಿವೆ. ರಾಜ್ಯ ಸರ್ಕಾರ ಇದಕ್ಕೆ ಪೂರಕವಾಗಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಬೇಕಾದ ಭೂಮಿಯನ್ನು ಒದಗಿಸಲಿದೆ ಎಂದು ಅವರು ವಿವರಿಸಿದರು.
ಇನ್ನುಳಿದಂತೆ, ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಉದ್ಯಮಶೀಲತೆಯನ್ನು ಹೆಚ್ಚಿಸಲು, ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿಯನ್ನು ಸರ್ಕಾರ ನೀಡಲಿದೆ. ಇದರ ಜತೆಗೆ ಪೆಟ್ರೋಲ್ ಬಂಕ್‌ಗೆ ಬೇಕಾದ ಪರವಾನಗಿ ಮತ್ತು ಪೂರಕ ಬೆಂಬಲವನ್ನೂ ರಾಜ್ಯ ಸರ್ಕಾರವೇ ನೀಡಲಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದರು.