ಯುಗಾದಿ ಹೊತ್ತಲ್ಲಿ ಜನಸಾಮಾನ್ಯರಿಗೆ ಸಿಹಿಸುದ್ದಿ; ಭಾರಿ ಇಳಿಕೆ ಕಂಡ ತೊಗರಿಬೇಳೆ ದರ, ಕಡಲೆಬೇಳೆ ದರವೂ ಕುಸಿತ
Ugadi 2025: ಯುಗಾದಿ ಹಬ್ಬದ ಸಂಭ್ರಮ ಶುರುವಾಗಿರುವ ಈ ಹೊತ್ತಿನಲ್ಲಿ ಒಬ್ಬಟ್ಟಿನ ಸಿಹಿಯನ್ನು ಇನ್ನಷ್ಟು ಹೆಚ್ಚಿಸಲಿದೆ ತೊಗರಿಬೇಳೆ ದರ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ತೊಗರಿ ದರವೂ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಬೆಂಗಳೂರು: ಯುಗಾದಿ ಹಬ್ಬ ಎಂದರೆ ಬೇವು–ಬೆಲ್ಲದ ಜೊತೆ ಒಬ್ಬಟ್ಟು ಕೂಡ ಮಾಡಲೇಬೇಕು. ಒಬ್ಬಟ್ಟು ಇಲ್ಲದ ಯುಗಾದಿ ಹಬ್ಬ ಇರಲು ಸಾಧ್ಯವಿಲ್ಲ. ಈ ವರ್ಷ ಯುಗಾದಿ ಹಬ್ಬದ ಒಬ್ಬಟ್ಟಿನ ಸಿಹಿ ಹೆಚ್ಚಿಸುವ ಸಮಾಚಾರವೊಂದಿದೆ. ಅದೇನೆಂದರೆ ಎರಡು ವರ್ಷಗಳಿಗೆ ಹೋಲಿಸಿದರೆ ತೊಗಿರಬೇಳೆ ದರ ಭಾರಿ ಇಳಿಕೆ ಕಂಡಿದೆ. 2024ರ ಅಕ್ಟೋಬರ್‌ನಿಂದ ತೊಗರಿಬೇಳೆ ದರ ನಿರಂತರ ಇಳಿಕೆ ಕಾಣುತ್ತಿದ್ದು, ಈ ವಾರ ಐತಿಹಾಸಿಕ ಕನಿಷ್ಠ ಮಟ್ಟವನ್ನು ತಲುಪಿದೆ.
ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೊಗರಿ ಬೇಳೆಯ ಬೆಲೆ ಬ್ರ್ಯಾಂಡ್‌ಗೆ ಅನುಗುಣವಾಗಿ ಶೇ.57 ರಿಂದ ಶೇ.61 ರಷ್ಟು ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕಡಲೆ ಬೇಳೆಯ ಬೆಲೆಯೂ ಸ್ವಲ್ಪ ಇಳಿಕೆಯಾಗಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಗ್ರಾಹಕರಲ್ಲಿ ಖುಷಿ ಮೂಡಲು ಕಾರಣವಾಗಿದೆ.
ದರ ಇಳಿಕೆಗೆ ಕಾರಣ ಹೀಗಿದೆ
ಕಳೆದ ಬಿತ್ತನೆಯ ಸಮಯದಲ್ಲಿ ಮಳೆ ಚೆನ್ನಾಗಿ ಆದ ಕಾರಣ ಫಸಲು ಕೂಡ ಚೆನ್ನಾಗಿ ಬಂದಿತ್ತು. ಇದರಿಂದಾಗಿ ಇಳುವರಿಯೂ ಹೆಚ್ಚಾಗಿತ್ತು. ಇದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ತೊಗರಿಬೇಳೆ ದರ ಕುಸಿತವು ಚಿಲ್ಲರೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಐತಿಹಾಸಿಕ ಬೆಲೆ ಕುಸಿತ
ಪ್ರಸ್ತುತ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರೀಮಿಯಂ ದರ್ಜೆಯ (ಶಿವಲಿಂಗ) ತೊಗರಿಬೇಳೆ ಬ್ರ್ಯಾಂಡ್ ಅನ್ನು ಅವಲಂಬಿಸಿ ಪ್ರತಿ ಕೆಜಿಗೆ ರೂ. 101 ರಿಂದ ರೂ. 122 ಕ್ಕೆ ಮಾರಾಟ ಮಾಡಲಾಗುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಅದೇ ತೊಗರಿಬೇಳೆ ದರ ಕೆಜಿಗೆ 175 ರೂ ನಿಂದ 200ರೂ ಗೆ ಮಾರಾಟ ಮಾಡಲಾಗುತ್ತಿತ್ತು. ತೊಗರಿಬೇಳೆ ಮಾರಾಟಗಾರರ ಪ್ರಕಾರ 2023 ರಿಂದ ಈಚೆಗೆ ಇದೇ ಮೊದಲ ಬಾರಿಗೆ ಇಷ್ಟೊಂದು ಬೆಲೆ ಕಡಿಮೆ ಆಗಿದ್ದು, ಇದೇ ಮೊದಲ ಬಾರಿಗೆ. ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮ್ಯಾನ್ಮಾರ್‌ನಿಂದ ಆಮದು ಮಾಡಿಕೊಂಡ ತೊಗರಿ ಬೇಳೆಯ ದರವು ಭಾರತದ ತೊಗರಿ ಪ್ರಬೇಧ ದರದಲ್ಲೇ ಲಭ್ಯವಿದೆ. ಆಮದು ತೊಗರಿಬೇಳೆ ದರ ಇಷ್ಟು ಕಡಿಮೆ ಆಗಿದ್ದು ಕಳೆದ 6 ವರ್ಷಗಳಲ್ಲೇ ಇದೇ ಮೊದಲು ಎನ್ನುವುದು ವರ್ತಕರ ಅಭಿಪ್ರಾಯ.
ಕಡಲೆ ಬೇಳೆ ದರವೂ ಇಳಿಕೆ
ಯುಗಾದಿ ಸಂದರ್ಭ ತೊಗರಿಬೇಳೆ ದರ ಮಾತ್ರವಲ್ಲ, ಕಡಲೆಬೇಳೆ ದರವೂ ಇಳಿಕೆಯಾಗಿದೆ. ಕಳೆದ ನವೆಂಬರ್–ಡಿಸೆಂಬರ್‌ನಲ್ಲಿ ಕೆಜಿಗೆ 100 ರಿಂದ 110 ರೂ ಗಳಷ್ಟಿದ್ದ ಕಡಲೆಬೇಳೆ ದರ ಈಗ 72 ರಿಂದ 80ಕ್ಕೆ ಇಳಿದಿದೆ.
ಯುಗಾದಿ ಹಬ್ಬದ ಒಬ್ಬಟ್ಟಿಗೆ ತೋಗರಿಬೇಳೆ ಬಳಸಿದರೆ, ಕೆಲವೊಂದು ಕೋಸಂಬರಿಗೆ ಹೆಸರುಬೇಳೆ ಬದಲು ಕಡಲೆಬೇಳೆ ಬಳಸುತ್ತಾರೆ. ಈಗ ಈ ಎರಡೂ ಬೇಳೆಗಳ ದರ ಇಳಿಕೆ ಕಂಡಿರುವುದು ಯುಗಾದಿ ಹಬ್ಬದ ಸಮಯದಲ್ಲಿ ಗ್ರಾಹಕರ ಖುಷಿ ಡಬ್ಬಲ್ ಆಗಿರುವುದು ಸುಳ್ಳಲ್ಲ.
