ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ; ಪಠ್ಯಕ್ರಮ, ಸೌಲಭ್ಯಗಳ ಮಾಹಿತಿ ನೀಡಿದ ಉಪಕುಲಪತಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ; ಪಠ್ಯಕ್ರಮ, ಸೌಲಭ್ಯಗಳ ಮಾಹಿತಿ ನೀಡಿದ ಉಪಕುಲಪತಿ

ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ; ಪಠ್ಯಕ್ರಮ, ಸೌಲಭ್ಯಗಳ ಮಾಹಿತಿ ನೀಡಿದ ಉಪಕುಲಪತಿ

ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. 2026ರ ಆಗಸ್ಟ್ ತಿಂಗಳಲ್ಲಿ ಮೊದಲ ಬ್ಯಾಚ್‌ನ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಿಕೆ ಆರಂಭಿಸಲಿದ್ದಾರೆ. ವಿವಿ ಕುರಿತ ಸುದೀರ್ಘ ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ
ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ (Handout)

ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಯುನೈಟೆಡ್‌ ಕಿಂಗ್‌ಡಮ್‌ನ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯವು (University of Liverpool) ಭಾರತದಲ್ಲಿ ತನ್ನ ಕ್ಯಾಂಪಸ್‌ ತೆರೆಯುತ್ತಿದೆ. ಅದು ಕೂಡಾ ಕರ್ನಾಟಕದ ರಾಜಧಾನಿ, ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿವಿ ಕ್ಯಾಂಪಸ್‌ ಆರಂಭವಾಗಲಿದೆ. ಇದು ಭಾರತದ ಮೊದಲ ವಿದೇಶಿ ವಿಶ್ವವಿದ್ಯಾಲಯ ಕ್ಯಾಂಪಸ್ ಆಗಲಿದೆ. ಇದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (ಯುಜಿಸಿ) ಔಪಚಾರಿಕ ಅನುಮೋದನೆಯೂ ಸಿಕ್ಕಿದೆ. ಮೇ 26ರ ಸೋಮವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ.

ಯುಕೆಯ ಪ್ರತಿಷ್ಠಿತ ರಸೆಲ್ ಗ್ರೂಪ್‌ನ ಭಾಗವಾಗಿರುವ ಲಿವರ್‌ಪೂಲ್ ವಿಶ್ವವಿದ್ಯಾಲಯವು, 2026ರ ಆಗಸ್ಟ್ ತಿಂಗಳಲ್ಲಿ ತನ್ನ ಮೊದಲ ಬ್ಯಾಚ್‌ನ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದೆ. ಅಂದರೆ, ಇನ್ನೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಲಿವರ್‌ಪೂಲ್ ವಿಶ್ವವಿದ್ಯಾಲಯ ಅಧಿಕೃತವಾಗಿ ಆರಂಭವಾಗಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಎಚ್‌ಟಿ ಡಿಜಿಟಲ್ ಜೊತೆಗೆ ಮಾತನಾಡಿದ ವಿವಿ ಉಪಕುಲಪತಿ ಪ್ರೊಫೆಸರ್ ಟಿಮ್ ಜೋನ್ಸ್, ಈ ಉಪಕ್ರಮದ ಹಿಂದಿನ ದೃಷ್ಟಿಕೋನ, ಭಾರತೀಯ ವಿದ್ಯಾರ್ಥಿಗಳು ಏನನ್ನು ನಿರೀಕ್ಷಿಸಬಹುದು ಮತ್ತು ಹೊಸ ಕ್ಯಾಂಪಸ್ ವಿಶ್ವವಿದ್ಯಾಲಯದ ಜಾಗತಿಕ ವಿಸ್ತರಣಾ ಯೋಜನೆಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬ ವಿಷಯವಾಗಿ ಮಾತನಾಡಿದರು.

ಭಾರತದಲ್ಲಿ ನಾವು ಹಲವಾರು ವರ್ಷಗಳಿಂದ ಹಲವಾರು ಸಂಸ್ಥೆಗಳೊಂದಿಗೆ ಸಹಯೋಗವನ್ನು ನಡೆಸುತ್ತಿದ್ದೇವೆ. ಲಿವರ್‌ಪೂಲ್ ವಿಶ್ವವಿದ್ಯಾಲಯವು ರಸೆಲ್ ಗ್ರೂಪ್ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಅತಿದೊಡ್ಡ ನೇಮಕಾತಿಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಸುಮಾರು 1,000 ಸ್ನಾತಕೋತ್ತರ ಪದವೀಧರರು ದಾಖಲಾಗುತ್ತಾರೆ ಎಂದರು.

ಬೆಂಗಳೂರು ನೈಸರ್ಗಿಕ ಆಯ್ಕೆ

ದೇಶದಲ್ಲಿ ಇತ್ತೀಚಿನ ನೀತಿಗಳ ಬದಲಾವಣೆಗಳಿಂದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತಿದೆ. ಹೀಗಾಗಿ ನಮ್ಮ ಹೆಜ್ಜೆಗುರುತನ್ನು ಬಲಪಡಿಸಲು ಸೂಕ್ತ ಅವಕಾಶ ಸಿಕ್ಕಿದೆ. ನಮ್ಮ ಅಸ್ತಿತ್ವದಲ್ಲಿರುವ ಪಾಲುದಾರಿಕೆ ಮತ್ತು ಬೆಂಗಳೂರು ನಗರದ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಿಂದಾಗಿ ಬೆಂಗಳೂರು ನಮ್ಮ ವಿವಿ ಸ್ಥಾಪನೆಗೆ ನೈಸರ್ಗಿಕ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಐಐಎಸ್‌ಸಿ, ನಿಮ್ಹಾನ್ಸ್ ಮತ್ತು ಯೂನಿಲಿವರ್‌ನಂತಹ ಕಂಪನಿಗಳು ಇಲ್ಲಿ ನೆಲೆಗೊಂಡಿರುವುದರಿಂದ ಬೆಂಗಳೂರು ಜಾಗತಿಕವಾಗಿ ಎದ್ದು ಕಾಣುತ್ತದೆ. ಇದು ತಂತ್ರಜ್ಞಾನ ಚಾಲಿತ ನಗರವಾಗಿದ್ದು, ಗುಣಮಟ್ಟದ ಶಿಕ್ಷಣವನ್ನು ಬಯಸುವ ದೊಡ್ಡ ಯುವ ಸಮೂಹವನ್ನು ಹೊಂದಿದೆ. ಕ್ಯಾಂಪಸ್‌ 2026ರ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್‌ನಲ್ಲಿ ಬೋಧನೆ ಆರಂಭವಾಗುತ್ತದೆ. 10 ವರ್ಷಗಳಲ್ಲಿ ಕ್ಯಾಂಪಸ್ ಅನ್ನು 10,000 ವಿದ್ಯಾರ್ಥಿಗಳಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಟಿಮ್ ಜೋನ್ಸ್ ಹೇಳಿದ್ದಾರೆ.

ಪಠ್ಯಕ್ರಮ, ಶುಲ್ಕ, ಬೋಧಕರು ಹೇಗಿರುತ್ತಾರೆ?

ಪಠ್ಯಕ್ರಮವು ಭಾರತೀಯ ಮತ್ತು ಪ್ರಾದೇಶಿಕ ಪರಿಸರ ವ್ಯವಸ್ಥೆಗೆ ಸರಿಹೊಂದುವಂತೆ, ಲಿವರ್‌ಪೂಲ್‌ ಶೈಕ್ಷಣಿಕ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತದೆ. ಕೆಲವು ಬೋಧಕ ಸದಸ್ಯರು ಲಿವರ್‌ಪೂಲ್‌ನಿಂದ ಬರುತ್ತಾರೆ. ಆದರೆ ಹೆಚ್ಚಿನವರನ್ನು ಸ್ಥಳೀಯವಾಗಿ ನೇಮಕ ಮಾಡಲಾಗುತ್ತದೆ. ಎಲ್ಲಾ ಬೋಧಕರು ನಮ್ಮ ಉನ್ನತ ಶೈಕ್ಷಣಿಕ ಮಾನದಂಡಗಳನ್ನು ಪೂರೈಸುತ್ತಾರೆ. ನಾವು ಇದನ್ನು ಜಾಗತಿಕ ಕ್ಯಾಂಪಸ್ ಎಂದು ಭಾವಿಸುತ್ತೇವೆ. ವೈವಿಧ್ಯತೆ ನಮಗೆ ಮುಖ್ಯ. ಭಾರತ ವಿದ್ಯಾರ್ಥಿಗಳು ಆದ್ಯತೆಯಾದರೂ, ವಿಶ್ವದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುರಿ ಹೊಂದಿದ್ದೇವೆ. ಶುಲ್ಕಗಳು ಸ್ಥಳೀಯ ಆರ್ಥಿಕ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ. ಪೂರ್ಣ ಶುಲ್ಕ ರಚನೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುತ್ತದೆ ಎಂದು ಅವರು ಹೇಳಿದ್ದಾರೆ.

ಕ್ಯಾಂಪಸ್‌ನಲ್ಲಿ ಯಾವ ಸೌಲಭ್ಯಗಳಿರಲಿವೆ?

ಕ್ಯಾಂಪಸ್ ಆಧುನಿಕ ಶೈಕ್ಷಣಿಕ ಕಟ್ಟಡಗಳು, ಸಂಶೋಧನಾ ಕೇಂದ್ರಗಳು, ವಿದ್ಯಾರ್ಥಿ ನಿವಾಸಗಳು ಮತ್ತು ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ನಮ್ಮ ಲಿವರ್‌ಪೂಲ್ ಕ್ಯಾಂಪಸ್‌ನ ನೋಟ, ಭಾವನೆ ಮತ್ತು ಶೈಕ್ಷಣಿಕ ವಿಧಾನವನ್ನೇ ಹೊಂದಿರುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.