ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್, ಮಂಗಳೂರು ಹೊರವಲಯದ ಹೆದ್ದಾರಿಯ ಪ್ರಮುಖ ಸೇತುವೆ ಇದು, ಯಾವ ಕಾರಣಕ್ಕಾಗಿ ಬಂದ್? ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್, ಮಂಗಳೂರು ಹೊರವಲಯದ ಹೆದ್ದಾರಿಯ ಪ್ರಮುಖ ಸೇತುವೆ ಇದು, ಯಾವ ಕಾರಣಕ್ಕಾಗಿ ಬಂದ್? ವಿವರ ಇಲ್ಲಿದೆ

ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್, ಮಂಗಳೂರು ಹೊರವಲಯದ ಹೆದ್ದಾರಿಯ ಪ್ರಮುಖ ಸೇತುವೆ ಇದು, ಯಾವ ಕಾರಣಕ್ಕಾಗಿ ಬಂದ್? ವಿವರ ಇಲ್ಲಿದೆ

ಉಳ್ಳಾಲ ಹಳೆಯ ಸೇತುವೆಯಲ್ಲಿ ಹೊಂಡ, ಗುಂಡಿಯಾಗಿದ್ದ ಹಿನ್ನೆಲೆ 2016ರಲ್ಲಿ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ನಡೆದಿತ್ತು. ಬಳಿಕ 2024ರ ಡಿಸೆಂಬರ್ ತಿಂಗಳಲ್ಲಿ ಹಳೇ ಸೇತುವೆ ದುರಸ್ತಿ ಕಾರ್ಯ ನಡೆದಿದೆ. ಈಗ ಮೂರು ತಿಂಗಳ ಬಳಿಕ ಮತ್ತೆ ರಿಪೇರಿಯಾಗುತ್ತಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್
ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಮಂಗಳೂರನ್ನು ಕೇರಳಕ್ಕೆ ಸಂಪರ್ಕಿಸುತ್ತದೆ. ಆದರೆ ಪಂಪ್ ವೆಲ್ ನಿಂದ ಮಂಗಳೂರು ಹೊರವಲಯದ ತೊಕ್ಕೊಟ್ಟು ತಲುಪುವುದೇ ದುಸ್ತರವಾಗಿರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಕಾರಣ ಉಳ್ಳಾಲದಲ್ಲಿರುವ ನೇತ್ರಾವತಿ ಹಳೇಯ ಸೇತುವೆಯನ್ನು ದುರಸ್ತಿಗಾಗಿ ಒಂದು ತಿಂಗಳು ಬಂದ್ ಮಾಡಲಾಗಿದೆ. ತಲಪಾಡಿಯಿಂದ ಮಂಗಳೂರು ನಗರಕ್ಕೆ ಬರುವ ಈ ಸೇತುವೆ ಬಂದ್ ಮಾಡಿದ ಕಾರಣ, ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಕಳೆದ ಡಿಸೆಂಬರ್ ನಲ್ಲಷ್ಟೇ ಈ ಸೇತುವೆ ದುರಸ್ತಿ ನಡೆದಿತ್ತು, ಮತ್ತೆ ಮಾಡುವ ದುರಸ್ತಿಗೆ ಒಂದು ತಿಂಗಳು ಬೇಕೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾಕೆ ಈ ಸೇತುವೆ ಪ್ರಮುಖ

ಮಂಗಳೂರಿನಿಂದ ಕಾಸರಗೋಡು ಸಹಿತ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದು. ಮಂಗಳೂರು ಸಿಟಿಯಿಂದ ದೇರಳಕಟ್ಟೆಗೆ ಹೋಗಬೇಕಾದರೂ ಈ ಸೇತುವೆ ಅಗತ್ಯ. ದೇರಳಕಟ್ಟೆಗೆ ದೂರದೂರಿನಿಂದ ಮಂಗಳೂರಿಗೆ ಆಗಮಿಸುವವರು ಆಸ್ಪತ್ರೆಗೆಂದು ತೆರಳುತ್ತಾರೆ. ಅಲ್ಲಿರುವ ನಾಲ್ಕೈದು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ದಿನನಿತ್ಯ ಸಾವಿರಕ್ಕೂ ಅಧಿಕ ಮಂದಿ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಅತ್ಯಂತ ಬ್ಯುಸಿ ರಸ್ತೆಯಾಗಿ ಇದು ಮಾರ್ಪಾಟಾಗಿದೆ.

ಏನು ಕೆಲಸ ನಡೆಯುತ್ತಿದೆ?

ಹಳೆಯ ಸೇತುವೆಯ ಕೆಳಭಾಗದಲ್ಲಿ ದುರಸ್ತಿಕಾರ್ಯ ನಡೆಯುತ್ತಿದೆ. ಸೇತುವೆಯ ಗರ್ಡರ್ ನ ಕೆಳಭಾಗದಲ್ಲಿರುವ ಪಿಲ್ಲರ್‍‌ಗಳಿಗೆ ಬೇರಿಂಗ್ ಹಾಕಿ, ಸೇತುವೆ ಮೇಲ್ಭಾಗದಲ್ಲೂ ದುರಸ್ತಿ ಮಾಡುವ ಕಾರ್ಯವಿದು. ಸೇತುವೆಯ ಉತ್ತರ ಭಾಗದ ಎರಡು ಪಿಲ್ಲರ್ ಗಳಿಗೆ 4 ಬೇರಿಂಗ್ ಹಾಗೂ ದಕ್ಷಿಣ ಭಾಗದಲ್ಲಿ 4 ಪಿಲ್ಲರ್ ಗಳಿಗೆ 8 ಬೇರಿಂಗ್ ಅಳವಡಿಸುವ ಯೋಜನೆ ಇದು. ಇವುಗಳಲ್ಲಿ ಉತ್ತರ ಭಾಗದ ಬೇರಿಂಗ್ ಅಳವಡಿಕೆ ಮುಗಿದಿದೆ. ಇನ್ನು ದಕ್ಷಿಣ ಭಾಗದ ಕೆಲಸ ನಡೆಯುತ್ತಿದೆ. ಉಳಿದಂತೆ ಬೇರೇನೂ ಕೆಲಸವಿಲ್ಲ.

ಮೂರು ತಿಂಗಳ ಮೊದಲು ಕೆಲಸ ನಡೆದಿತ್ತು

ಉಳ್ಳಾಲ ಹಳೆಯ ಸೇತುವೆಯಲ್ಲಿ ಹೊಂಡ, ಗುಂಡಿಯಾಗಿದ್ದ ಹಿನ್ನೆಲೆ 2016ರಲ್ಲಿ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ನಡೆದಿತ್ತು. ಬಳಿಕ 2024ರ ಡಿಸೆಂಬರ್ ತಿಂಗಳಲ್ಲಿ ಹಳೇ ಸೇತುವೆ ದುರಸ್ತಿ ಕಾರ್ಯ ನಡೆದಿದೆ. ಈಗ ಮೂರು ತಿಂಗಳ ಬಳಿಕ ಮತ್ತೆ ರಿಪೇರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಪ್ರಿ್ಲ 1ರಿಂದ 30ವರೆಗೆ ಹಳೇ ಸೇತುವೆ ಬಂದ್ ಮಾಡಲಾಗಿದೆ.

ಕಾರ್ಮಿಕರು ಎಂಟು, ಬೇರಿಂಗ್ 12 ಅಳವಡಿಕೆ:

ಒಟ್ಟು 12 ಬೇರಿಂಗ್ ಅಳವಡಿಕೆ ಕೆಲಸಕ್ಕೆ ಎಂಟು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಇವರ ಜೊತೆಗೆ ಇವರ ಜೊತೆಗೆ ಮೇಲ್ತನಿಖೆ ನೋಡೊಕೊಳ್ಳುವವರು ಇದ್ದಾರೆ. ಉತ್ತರ ಮತ್ತು ದಕ್ಷಿಣ ವಿಭಾಗದ ಬೇರಿಂಗ್ ಗಳನ್ನು ಏಕಕಾಲಕ್ಕೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ನಿರ್ಮಿಸಲು ಅವಕಾಶ ಇದೆ, ಆದರೆ ಕೆಲಸ ಅಷ್ಟೊಂದು ವೇಗವಾಗಿ ಕಾಣಿಸುತ್ತಿಲ್ಲ.

ಪ್ರತಿದಿನ ಅರ್ಧ ಗಂಟೆ ಟ್ರಾಫಿಕ್ ಜಾಮ್

ಉಳ್ಳಾಲದ ಹಳೇ ಸೇತುವೆ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿನಿತ್ಯ 30ರಿಂದ 40 ನಿಮಿಷ ಟ್ರಾಫಿಕ್ ಜಾಮ್ ನಲ್ಲಿ ನಿಲ್ಲಬೇಕಾಗುತ್ತಿದೆ. ದುರಸ್ತಿ ಕಾಮಗಾರಿಗೆ ಹೆಚ್ಚಿನ ಕಾರ್ಮಿಕರ ನಿಯೋಜನೆ, ರಾತ್ರಿ ಪಾಳಿಯಲ್ಲೂ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸಂಚಾರಿ ಪೊಲೀಸರಿಗೆ ಒತ್ತಡ ನಿರ್ವಹಣೆ

ಸಂಚಾರ ನಿರ್ವಹಣೆಗೆ ಎರಡು ದಿಕ್ಕಿನಲ್ಲೂ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 8 ಗಂಟೆವರೆಗೆ ಈ ರಸ್ತೆಯಲ್ಲಿ ಅವರು ನಿಲ್ಲುತ್ತಾರೆ. ಓವರ್ ಡ್ಯೂಟಿಯ ಒತ್ತಡದೊಂದಿಗೆ ಸಂಚಾರ ನಿರ್ವಹಣೆ ಮಾಡುವಲ್ಲಿ ಅವರು ಹೈರಾಣಾಗಿದ್ದಾರೆ. ಎರಡು ದಿಕ್ಕಿನಿಂದಲೂ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ, ಸಮಸ್ಯೆ ಉಂಟಾಗುತ್ತದೆ, ಹೀಗಾಗಿ ಒಂದು ಕಡೆಯ ವಾಹನ ನಿಲ್ಲಿಸಿ, ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Suma Gaonkar

eMail
Whats_app_banner