Budget 2024: ಮೆಟ್ರೋ ನಗರ ಬಡ್ತಿಯಂತೂ ಸಿಗಲಿಲ್ಲ, ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಏನೇನು ಸಿಗಬಹುದು?
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಸಿಗಬಹುದಾದ ಯೋಜನೆಗಳೇನು? ಎನ್ನುವ ಚರ್ಚೆಗಳು ನಡೆದಿವೆ.

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ನಗರಗಳ ಪ್ರಗತಿಗೂ ಒತ್ತು ನೀಡಲಾಗಿದೆ. ನಗರಗಳ ಮೂಲಸೌಕರ್ಯ ವೃದ್ದಿ. ನೀರಿನ ಸರಬರಾಜು ಸಹಿತ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆದರೆ ನಿಗದಿತ ನಗರಗಳು ಎನ್ನುವುದನ್ನು ಎಲ್ಲೂ ಉಲ್ಲೇಖಿಸಿಲ್ಲ. ಬದಲಿಗೆ ಜನಸಂಖ್ಯೆ ಹೆಚ್ಚಿರುವ ನಗರಗಳನ್ನು ಮಾನದಂಡವನ್ನು ಆಧರಿಸಿ ಕಾರ್ಯಕ್ರಮಗಳು ಜಾರಿಯಾಗಲಿವೆ. ಅದೂ ಆಯಾ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳಲಿವೆ. ಇದನ್ನು ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಈ ಯೋಜನೆಗಳಲ್ಲಿ ಕರ್ನಾಟಕ ರಾಜಧಾನಿ ಹಾಗೂ ವಿಶ್ವದ ಪ್ರಮುಖ ಐಟಿ ನಗರಿ ಬೆಂಗಳೂರಿಗೆ ಏನು ಸಿಗಬಹುದು ಎನ್ನುವ ಕುತೂಹಲ ಇದ್ದೇ ಇದೆ.
ಆಯಾ ರಾಜ್ಯಗಳೊಂದಿಗೆ ಕೆಲಸ ಮಾಡುವ ಮೂಲಕ, ನಮ್ಮ ಸರ್ಕಾರವು ಅಭಿವೃದ್ಧಿ ಮಾರ್ಗಗಳನ್ನು ಕಂಡುಕೊಳ್ಳಲಿದೆ. ನಗರಾಭಿವೃದ್ದಿಗೂ ಒತ್ತು ಕೊಡಲಿದೆ. 'ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು ಎನ್ನುವ ಕಲ್ಪನೆಯಡಿ ರೂಪಿಸಲಿದೆ. ಇದನ್ನು ಆರ್ಥಿಕ ಮತ್ತು ಸಾರಿಗೆ ಸುಧಾರಣೆ ಮೂಲಕ ಸಾಧಿಸಲಾಗುತ್ತದೆ
ಪಟ್ಟಣವನ್ನು ಬಳಸಿಕೊಂಡು ಪೆರಿ-ಅರ್ಬನ್ ಪ್ರದೇಶಗಳ ಯೋಜನೆ ಮತ್ತು ವ್ಯವಸ್ಥಿತ ಅಭಿವೃದ್ಧಿ ಯೋಜನೆಗಳು ಇವಾಗಲಿದೆ ಎನ್ನುವುದು ನಿರ್ಮಲಾ ಅವರು ನಗರಾಭಿವೃದ್ದಿ ವಿಚಾರವಾಗಿ ಬಜೆಟ್ ಮಂಡನೆ ವೇಳೆ ನೀಡಿದ ಪೀಠಿಕೆ.
ಭಾರತದ ಒಟ್ಟು 30 ಲಕ್ಷಕ್ಕಿಂತ ಹೆಚ್ಚಿನ 14 ದೊಡ್ಡ ನಗರಗಳಿಗೆ ಪ್ರಗತಿದಾಯಕ, ಪರಿವರ್ತನೆಯ ಅಭಿವೃದ್ದಿ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ನಿರ್ಮಲಾ ಹೇಳಿದ್ದು. ಈ ಪಟ್ಟಿಯಲ್ಲಿ ಬೆಂಗಳೂರು ಕೂಡ ಇರಬಹುದು ಎನ್ನುವ ಅಂದಾಜಿದೆ. ಏಕೆಂದರೆ ಕರ್ನಾಟಕದಲ್ಲಿ 30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಿಯಲ್ಲಿ ಇರುವುದು ಬೆಂಗಳೂರು ಮಾತ್ರ.
ಈಗಾಗಲೇ ಅಭಿವೃದ್ದಿಯಾಗಿರುವ ಪ್ರದೇಶಗಳ ಪುನರಾಭಿವೃದ್ದಿ ಒಂದು ಕಡೆಯಾದರೆ, ಹೊಸ ಪ್ರದೇಶಗಳ ಪ್ರಗತಿಯೂ ಇಂತಹ ನಗರಗಳ ಅಭಿವೃದ್ದಿ ನೀಲನಕ್ಷೆಯಲ್ಲಿ ಇರಲಿದೆ.
ಅಸ್ತಿತ್ವದಲ್ಲಿರುವ ನಗರಗಳ ಸೃಜನಶೀಲ ಪುನರಾಭಿವೃದ್ಧಿಗಾಗಿ ನಮ್ಮ ಸರ್ಕಾರವು ಒಂದು ಚೌಕಟ್ಟನ್ನು ರೂಪಿಸುತ್ತದೆ. ಸಕ್ರಿಯಗೊಳಿಸುವ ನೀತಿಗಳು, ಮಾರುಕಟ್ಟೆ ಆಧಾರಿತ ಕಾರ್ಯವಿಧಾನಗಳು ಮತ್ತು ನಿಯಂತ್ರಣದ ಆಧರಿತವಾಗಿಯೇ ಯೋಜನೆಗಳೂ ಇರಲಿವೆ ಎನ್ನುವುದು ಅವರ ನೀಡಿದ ವಿವರಣೆ.
ಮಹಾನಗರಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ನೀರು ಸರಬರಾಜು ಹಾಗೂ ಒಳಚರಂಡಿ ಸಂಸ್ಕರಣೆ ಯೋಜನೆಗಳನ್ನು ಅಭಿವೃದ್ದಿ ಬ್ಯಾಂಕ್‌ಗಳು ಉತ್ತೇಜಿಸಲಿವೆ. ಅದರಲ್ಲೂ ಸಂಸ್ಕರಿತ ನೀರು ಬಳಕೆ ವಿಚಾರದಲ್ಲೂ ಒತ್ತು ನೀಡಲಾಗುತ್ತಿದೆ. 100 ದೊಡ್ಡ ನಗರಗಳಿಗೆ ಘನ ತ್ಯಾಜ್ಯ ನಿರ್ವಹಣಾ ಯೋಜನೆಗಳು ಹಾಗೂ ಕುಡಿಯುವ ನೀರು ಸರಬರಾಜು, ಒಳ ಚರಂಡಿ ನಿರ್ವಹಣೆ ಯೋಜನೆಗೆ ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲೂ ನೀರು ಸರಬರಾಜಿಗೂ ಪ್ರತ್ಯೇಕ ಮಂಡಳ ಅಡಿ ಕೆಲಸ ನಡೆಯುತ್ತಿದೆ. ಬೆಂಗಳೂರು ಕೂಡ ಈ ನಗರದ ಪಟ್ಟಿಯಲ್ಲಿ ಬರಬಹುದು.
ಬೆಂಗಳೂರು ನಗರವನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ನಂತರದ ಮೆಟ್ರೋ ನಗರವಾಗಿ ಘೋಷಣೆ ಮಾಡಬೇಕು. ಇದರಿಂದ ನಗರದ ಅಭಿವೃದ್ದಿಗೆ ಇನ್ನಷ್ಟು ಒತ್ತು ಸಿಗಲಿದೆ. ಬೆಂಗಳೂರು ಆರ್ಥಿಕ ಶಕ್ತಿಯ ನಗರಿಯಾಗಿಯೂ ವಿಶ್ವದಲ್ಲಿ ಗುರುತಿಸಿಕೊಂಡಿರುವುದರಿಂದ ಮೆಟ್ರೋ ನಗರವಾಗಲು ಎಲ್ಲಾ ಅರ್ಹತೆಗಳಿವೆ. ಮೆಟ್ರೋ ನಗರವಾಗಿ ಬದಲಾವಣೆ ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆಯ ನಿಯಮಗಳೂ ಬದಲಾಗಿ ಉಪಯೋಗವಾಗಲಿದೆ ಎನ್ನುವ ಬೇಡಿಕೆಯಿತ್ತು. ಇಂತಹ ಪ್ರಸ್ತಾವಗಳನ್ನು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ ಸೇರಿಸಿದಂತೆ ಕಾಣುತ್ತಿಲ್ಲ.
