ಬಜೆಟ್‌ನಲ್ಲಿ ಅನ್ಯಾಯ, ದಕ್ಷಿಣ ಭಾರತವನ್ನೇ ಪ್ರತ್ಯೇಕ ದೇಶ ಮಾಡಿ: ಡಿಕೆಸುರೇಶ್ ವಿವಾದಾತ್ಮಕ ಹೇಳಿಕೆ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ದಕ್ಷಿಣದ ರಾಜ್ಯಗಳಿಗೆ ನ್ಯಾಯ ದೊರೆತಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತಗಳನ್ನೊಳಗೊಂಡ ಪ್ರತ್ಯೇಕ ದೇಶ ಮಾಡಿ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.
ದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ತಾರತಮ್ಯದಿಂದ ಕೂಡಿದೆ. ಅನುದಾನ ಹಂಚಿಕೆಯಲ್ಲಿ ದಕ್ಷಿಣ ಭಾರತವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳನ್ನೊಳಗೊಂಡ ಪ್ರತ್ಯೇಕ ದೇಶ ರಚನೆಯಾದರೆ ತಾರತಮ್ಯ ಸರಿ ಹೋಗಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ಬಜೆಟ್ ಮಂಡನೆ ಮುಗಿದ ಬಳಿಕ ಸಂಸತ್ ಭವನದ ಎದುರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಈ ಅಂಶವನ್ನು ಅವರು ಗಂಭೀರವಾಗಿಯೇ ಪ್ರಸ್ತಾಪಿಸಿದರು.
ನಿರಂತರ ನಿರ್ಲಕ್ಷ್ಯ
ಕೇಂದ್ರ ಸರ್ಕಾರವು ಅನುದಾನವನ್ನು ಒದಗಿಸುವಾಗ ದಕ್ಷಿಣ ಭಾರತವನ್ನು ಯಾವಾಗಲೂ ನಿರ್ಲಕ್ಷಿಸಿದೆ. ಹತ್ತು ವರ್ಷದಲ್ಲಿ ಇದನ್ನು ಕಾಣಬಹುದು. ಇದರಿಂದ ದಕ್ಷಿಣ ಭಾರತದ ಜನರಿಗೆ ನಿರಾಸೆಯಾಗಿದ್ದು, ಅಂತಿಮವಾಗಿ ದೇಶದ ದಕ್ಷಿಣ ಭಾಗಕ್ಕೆ ಪ್ರತ್ಯೇಕ ದೇಶವನ್ನು ಒತ್ತಾಯಿಸಲು ಕಾರಣವಾಗುತ್ತದೆ. ಹಣಕಾಸು ಆಯೋಗ ಇದನ್ನೆಲ್ಲಾ ಸರಿಪಡಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಹಣವನ್ನು ಹಂಚಿಕೆ ಮಾಡುವಾಗ ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಿರುವು ಕಣ್ಣು ಮುಂದೆ ಇರುವ ಸತ್ಯ. ಅವರು ಉತ್ತರ ಭಾರತಕ್ಕೆ, ವಿಶೇಷವಾಗಿ ಹಿಂದಿ ಹೃದಯಭಾಗಕ್ಕೆ ಹೆಚ್ಚಿನ ಹಣವನ್ನು ಮೀಸಲಿಡುತ್ತಾರೆ. ಈ ಬಗ್ಗೆ ನಾವು ಹಲವು ಬಾರಿ ಹೇಳಿದರೂ ಅವರ ನಿಲುವಿನಲ್ಲಿ ಬದಲಾವಣೆ ಕಾಣುತ್ತಿಲ್ಲ. ಇದು ಮುಂದುವರಿದರೆ, ಅದು ಹಿಂದಿ ಹೃದಯಭಾಗದಿಂದ ಬೇರ್ಪಡಲು ಮತ್ತು ಪ್ರತ್ಯೇಕ ದೇಶಕ್ಕೆ ಒತ್ತಾಯಿಸಲು ನಮ್ಮನ್ನು ಪ್ರಚೋದಿಸುತ್ತದೆ. ನಮಗೆ ಸಲ್ಲಬೇಕಾದುದನ್ನು ನಾವು ಪಡೆಯಬೇಕು. ಇದು ಅನಿವಾರ್ಯವೂ ಹೌದು ಎಂದು ಸುರೇಶ್ ಆಕ್ರೋಶದಿಂದಲೇ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಬಜೆಟ್ ಮಂಡನೆಯಾಗಿದೆ. ಬರೀ ಲೇಖಾನುದಾನ ಇರುವುದರಿಂದ ಹೆಚ್ಚಿನ ವಿಷಯ ಪ್ರಸ್ತಾಪಿಸಿಲ್ಲ. ಆದರೂ ಯೋಜನೆಗಳ ನಿರ್ದಿಷ್ಟತೆಯೂ ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿ ಕಾಣಲಿಲ್ಲ. ಸಂಸ್ಕೃತ ಭಾಷೆ ಅವರಿಗೆ ಚೆನ್ನಾಗಿ ಬರುವುದರಿಂದ ಅಲ್ಲಲ್ಲೇ ಸಂಸ್ಕೃತವನ್ನೂ ಬಜೆಟ್ ವೇಳೆ ಮಂಡಿಸಿದ್ದಾರೆ. ಅವರ ಜಾಣ್ಮೆಯನ್ನು ತೋರುತ್ತದೆ. ಆದರೆ ನಿರೀಕ್ಷಿತ ರೀತಿಯಲ್ಲಿ ಬಜೆಟ್ ಜನರ ಸ್ಪಂದನೆಗೆ ಸ್ಪಂದಿಸಿಲ್ಲ ಎಂದು ಆಪಾದಿಸಿದರು.
ಕೇಂದ್ರ ಸಚಿವ ತಿರುಗೇಟು
ಈ ನಡುವೆ ಡಿ.ಕೆ.ಸುರೇಶ್ ಅವರ ಹೇಳಿಕಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಲವಾಗಿಯೇ ವಿರೋಧಿಸಿದರು.
ಕಾಂಗ್ರೆಸ್ ಮೊದಲಿನಿಂದಲೂ ವಿಭಜಕ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿದೆ. ಅದರ ಮುಂದುವರೆದ ಭಾಗವಾಗಿ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ದಕ್ಷಿಣ ಭಾರತ ಬೇಡಿಕೆ ಮಂಡಿಸಿದ್ದಾರೆ ಎಂದು ಟೀಕಿಸಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ ಸರ್ದಾರ್ ಪಟೇಲ್ ಅವರಂತಹ ನೈಜ ನಾಯಕರನ್ನು ಹೊಂದಿರುವ ಪಕ್ಷವಾಗಿತ್ತು. ಅವರು ಭಾರತವನ್ನು ವೈವಿಧ್ಯಮಯ ಮತ್ತು ಏಕೀಕೃತ ರಾಷ್ಟ್ರವಾಗಿ ಸಂಯೋಜಿಸಲು ಕೆಲಸ ಮಾಡಿದರು. ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಅನ್ನು ಜಾಮೀನಿನ ಮೇಲೆ ಹೊರಗಿರುವ ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಂತಹವರು ಪ್ರತಿನಿಧಿಸುತ್ತಿದ್ದಾರೆ. ಅವರ ಸಹೋದರ ಡಿ.ಕೆ.ಸುರೇಶ್ ಕೂಡ ಇಂತಹ ಹೇಳಿಕೆ ಮೂಲಕ ಉತ್ತರ-ದಕ್ಷಿಣ ಸಂಘರ್ಷ ಮತ್ತು ತುಷ್ಟೀಕರಣ ರಾಜಕೀಯದೊಂದಿಗೆ ಜನರನ್ನು ವಿಭಜಿಸುವುದು ಅವರ ಕಾರ್ಯಸೂಚಿ ಎನ್ನುವುದನ್ನು ಬಯಲು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಚರ್ಚೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲೂ ಡಿಎಂಕೆ ಸಚಿವ ಇ.ವಿ.ವೇಲು ಅವರು 'ದ್ರಾವಿಡ ನಾಡು' ಸೃಷ್ಟಿಯಾಗಬೇಕು ಎಂದು ಹೇಳಿದ್ದರು. ಈಗ ಡಿ.ಕೆ.ಸುರೇಶ್ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದರು.
ವಿಭಾಗ