ನಿರ್ಮಲಾ ಸೀತಾರಾಮನ್‌ಗೂ ಬೆಂಗಳೂರಿಗೂ ಏನು ಸಂಬಂಧ? ಕರ್ನಾಟಕದೊಂದಿಗೆ ಅವರಿಗೆ ಏನು ನಂಟು?
ಕನ್ನಡ ಸುದ್ದಿ  /  ಕರ್ನಾಟಕ  /  ನಿರ್ಮಲಾ ಸೀತಾರಾಮನ್‌ಗೂ ಬೆಂಗಳೂರಿಗೂ ಏನು ಸಂಬಂಧ? ಕರ್ನಾಟಕದೊಂದಿಗೆ ಅವರಿಗೆ ಏನು ನಂಟು?

ನಿರ್ಮಲಾ ಸೀತಾರಾಮನ್‌ಗೂ ಬೆಂಗಳೂರಿಗೂ ಏನು ಸಂಬಂಧ? ಕರ್ನಾಟಕದೊಂದಿಗೆ ಅವರಿಗೆ ಏನು ನಂಟು?

ಕೇಂದ್ರ ಹಣಕಾಸು ಸಚಿವೆ ಮೂಲತಃ ತಮಿಳುನಾಡಿನವರು. ಆದರೆ ಅವರು ಕರ್ನಾಟಕದಿಂದ ಚುನಾಯಿತರಾಗಿರುವ ರಾಜ್ಯಸಭಾ ಸದಸ್ಯೆ. ಈ ಕಾರಣದಿಂದಲೇ ಅವರು ಬೆಂಗಳೂರು ನಿವಾಸಿಯೂ ಹೌದು. ಅವರೊಂದಿಗೆ ಕರ್ನಾಟಕ ಹಾಗೂ ಬೆಂಗಳೂರಿನ ನಂಟು ಗಟ್ಟಿಯಾಗಿ ಬೆಳೆದಿದೆ.

ನಿರ್ಮಲಾ ಸೀತಾರಾಮನ್‌ ಅವರಿಗೂ ಬೆಂಗಳೂರಿಗೂ ನಂಟು ಗಟ್ಟಿಯಾಗಿಯೇ ಇದೆ.
ನಿರ್ಮಲಾ ಸೀತಾರಾಮನ್‌ ಅವರಿಗೂ ಬೆಂಗಳೂರಿಗೂ ನಂಟು ಗಟ್ಟಿಯಾಗಿಯೇ ಇದೆ.

ಬೆಂಗಳೂರು: ನಿರ್ಮಲಾ ಸೀತಾರಾಮನ್‌ಗೂ ಕರ್ನಾಟಕಕ್ಕೂ ಏನು ನಂಟು. ಬೆಂಗಳೂರು ಮೇಲೆ ಅವರಿಗೇಕೆ ಅಷ್ಟು ಅಭಿಮಾನ. ಅವರು ಬೆಂಗಳೂರಿನಲ್ಲೂ ತಮ್ಮ ಮನೆ ಹೊಂದಿದ್ದಾರೆ. ಇದಕ್ಕೆ ಕಾರಣ ರಾಜಕಾರಣದ ನಂಟು. ಏಕೆಂದರೆ ನಿರ್ಮಲಾ ಸೀತಾರಾಮನ್‌ ಅವರು ಎಂಟು ವರ್ಷದಿಂದ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರು. ಈ ಕಾರಣದಿಂದ ಅವರಿಗೆ ಕರ್ನಾಟಕದ ನಂಟು ಈಗಲೂ ಮುಂದುವರಿದಿದೆ. ಈಗಲೂ ತಿಂಗಳಿಗೆ ಒಮ್ಮೆಯಾದರೂ ಬೆಂಗಳೂರಿಗೆ ಭೇಟಿ ನೀಡುತ್ತಾರೆ.ಸ್ಥಳೀಯ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುತ್ತಾರೆ ಕೂಡ.

ದಕ್ಷಿಣ ರಾಜ್ಯಗಳ ನಂಟು

ನಿರ್ಮಲಾ ಸೀತಾರಾಮನ್‌ ಹುಟ್ಟಿ ಬೆಳೆದಿದ್ದು ಸಂಪೂರ್ಣ ತಮಿಳುನಾಡಿನಲ್ಲೇ. ಅಲ್ಲಿಯೇ ಶಿಕ್ಷಣ ಪಡೆದವರು. ಮಧ್ಯಮ ವರ್ಗದ ಕುಟುಂದವರಾದ ನಿರ್ಮಲಾ ಎಲ್ಲರಂತೆಯೇ ಆಕಾಂಕ್ಷಿತ ಮಹಿಳೆ. ಉನ್ನತ ಸ್ಥಾನಕ್ಕೆ ಏರಲೇಬೇಕು ಎನ್ನುವ ಆಕಾಂಕ್ಷೆಯನ್ನು ಇಟ್ಟುಕೊಂಡು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು.

ದೆಹಲಿಗೆ ಉನ್ನತ ಶಿಕ್ಷಣಕ್ಕೆಂದು ತೆರಳಿದ ಅವರ ಬದುಕಿನ ದಿಕ್ಕು ಬದಲಾಯಿತು. ವಿದೇಶಕ್ಕೂ ಉದ್ಯೋಗ ಅರಸಿ ಹೋದರು. ದೆಹಲಿಯಲ್ಲೇ ಓದುವಾಗಲೇ ಇಷ್ಟಪಟ್ಟಿದ್ದ ಪ್ರಭಾಕರ್‌ ಅವರೊಂದಿಗೆ ಬದುಕಿನ ಸಾಂಗತ್ಯವೂ ಮುಂದುವರಿಯಿತು. ಪ್ರಭಾಕರ್‌ ಅವರು ಚಂದ್ರಬಾಬು ನಾಯ್ಡು ಅವರ ಸಲಹೆಗಾರರಾಗಿದ್ದರಿಂದ ನಿರ್ಮಲಾಕ್ಕೂ ರಾಜಕಾರಣದ ನಂಟು ಬೆಳೆಯಿತು.

ಪತಿಯದ್ದು ಬಿಜೆಪಿಗೆ ವಿರುದ್ದವಾದ ಚಿಂತನೆ. ಕಾಂಗ್ರೆಸ್‌ ನಾಯಕರ ಸಂಪರ್ಕವೇ ಅಧಿಕ. ಆದರೆ ನಿರ್ಮಲಾ ಮಾತ್ರ ಬಿಜೆಪಿ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು. ಈ ಕಾರಣದಿಂದ ಅವರು ಬಿಜೆಪಿಯನ್ನು ಸೇರಿಕೊಂಡರು. ವಕ್ತಾರರಾಗಿ ಗಮನ ಸೆಳೆದವರು.

ಸಚಿವರಾದ ನಂತರ ಕರ್ನಾಟಕ ಸಂಬಂಧ

ಬಿಜೆಪಿ ಸರ್ಕಾರ ಹತ್ತು ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗ ಸುಷ್ಮಾ ಸ್ವರಾಜ್‌, ಸ್ಮೃತಿ ಇರಾನಿ ಸಹಿತ ಹಲವು ಮಹಿಳಾ ನಾಯಕರ ನಡುವೆ ನಿರ್ಮಲಾ ಅವರಿಗೂ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ದೊರೆಯಿತು. ಆಗ ಅವರಿಗೆ ರಾಜ್ಯಸಭಾ ಸದಸ್ಯರಾಗುವ ಅವಕಾಶ ಬಂದಿತು. ಆಗ ಎನ್‌ಡಿಎ ಭಾಗವಾಗಿದ್ದ ಟಿಡಿಪಿಯ ಚಂದ್ರ ಬಾಬು ನಾಯ್ಡು ಅವರ ಸಹಕಾರದಿಂದಲೂ ಆಂಧ್ರಪ್ರದೇಶದಿಂದಲೇ ನಿರ್ಮಲಾ ರಾಜ್ಯಸಭೆ ಪ್ರವೇಶಿಸುವುದು ಸುಲಭವಾಯಿತು.

ಆದರೆ ಇನ್ನೆರಡು ವರ್ಷದಲ್ಲಿ ರಾಜಕೀಯ ಸನ್ನಿವೇಶಗಳು ಬದಲಾಗಿದ್ದವು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೂ ಬಿಜೆಪಿ ಪ್ರಭಾವವೂ ಇತ್ತು. ಈ ಕಾರಣದಿಂದಲೇ ನಿರ್ಮಲಾ ಅವರಿಗೆ ಆಂಧ್ರದ ಬದಲು ಕರ್ನಾಟಕದಿಂದ ರಾಜ್ಯಸಭೆ ಚುನಾವಣೆ ಅಭ್ಯರ್ಥಿಯನ್ನಾಗಿಸಲಾಯಿತು. ಸಾಕಷ್ಟು ತುರುಸಿನ ಸ್ಪರ್ಧೆ ನಡುವೆಯೂ ಕೇಂದ್ರ ಸಚಿವರ ಸೂಚನೆ ಇದ್ದುದರಿಂದ ಬಿಜೆಪಿಯವರು ಒಗ್ಗಟ್ಟಾಗಿ ನಿರ್ಮಲಾ ಅವರನ್ನು ಇಲ್ಲಿಂದ ಗೆಲ್ಲಿಸಿದರು.

ಎರಡು ಬಾರಿ ಕರ್ನಾಟಕದಿಂದ ಆಯ್ಕೆ

ಎರಡನೇ ಬಾರಿಗೆ ನಿರ್ಮಲಾ ಅವರು ರಾಜ್ಯಸಭಾ ಸದಸ್ಯರಾದರು. ಎರಡು ವರ್ಷದ ಹಿಂದೆ ಮತ್ತೆ ಕರ್ನಾಟಕದಿಂದಲೇ ಅವರು ಮೂರನೇ ಬಾರಿಗೆ ರಾಜ್ಯಸಭಾ ಸದಸ್ಯರೂ ಆಗಿದ್ಧಾರೆ. ಈ ಬಾರಿ ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇದ್ದುದರಿಂದ ಗೆಲುವು ಸುಲಭವೇ ಆಯಿತು.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣಕ್ಕೆ ಅವರಿಗೆ ಬೆಂಗಳೂರಿನ ನಂಟು ಗಾಢವಾಗಿಯೇ ಬೆಳೆದಿದೆ. ರಾಜ್ಯಸಭಾ ಸದಸ್ಯರ ಅನುದಾನವನ್ನು ಬೆಂಗಳೂರು ಸಹಿತ ಕರ್ನಾಟಕದ ಹಲವು ಕಡೆ ಪ್ರಗತಿಗೆ ವಿನಿಯೋಗಿಸಿದ್ದಾರೆ. ಬೆಂಗಳೂರು ಮೇಯರ್‌ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಅವರು ಮತದಾರರು. ಹೀಗಿದ್ದರೂ ಕರ್ನಾಟಕದ ರಾಜಕಾರಣದಲ್ಲಿ ಅವರೇನು ಸಕ್ರಿಯರಾಗಿ ಕಾಣಿಸಿಕೊಳ್ಳುವುದಿಲ್ಲ.

ಜನ ನಾಯಕಿಯಾಗದೇ ಇದ್ದರೂ ಮೋದಿ ಅವರಿಟ್ಟ ನಂಬಿಕೆಯಂತೆ ಸಚಿವೆಯಾಗಿ ಚೆನ್ನಾಗಿಯೆ ಕೆಲಸ ಮಾಡಿದ್ದೇನೆ ಎನ್ನುವ ಅಭಿಪ್ರಾಯದೊಂದಿಗೆ ಜನರ ಮನಸ್ಸಿನ ನಾಯಕಿಯಾಗಿ ರೂಪುಗೊಂಡಿದ್ದಾರೆ. ಅವರು ಸಚಿವೆಯಾಗುವ ಹಿಂದೆ ಕರ್ನಾಟಕದ ಪಾತ್ರವಿರುವುದೂ ಅಷ್ಟೇ ಮುಖ್ಯ.

ಮಗಳ ಮದುವೆ ಬೆಂಗಳೂರಲ್ಲೇ

ಇನ್ನು ಕಳೆದ ವರ್ಷದ ಜೂನ್‌ನಲ್ಲಿ ಬೆಂಗಳೂರಿನಲ್ಲಿಯೇ ಅವರ ಮಗಳ ಮದುವೆ ದೆಹಲಿಯಲ್ಲಿ ಅಧಿಕಾರಿಯಾಗಿರುವ ಪ್ರತೀಕ್‌ ದೋಷಿ ಜತೆಗೆ ನಡೆದಿತ್ತು. ಉಡುಪಿ ಅದಮಾರು ಮಠದ ಸಂಪ್ರದಾಯದಂತೆಯೇ ಮಗಳ ಮದುವೆಯನ್ನೂ ನಿರ್ಮಲಾ ಅವರು ಮಾಡಿದ್ದರು. ಉಡುಪಿ ಮಠಗಳೊಂದಿಗೂ ಅವರಿಗೆ ವಿಶೇಷ ನಂಟು ಮೊದಲಿನಿಂದಲೂ ಇದ್ದು. ಈ ಕಾರಣದಿಂದ ಬೆಂಗಳೂರನ್ನೇ ಮಗಳ ಮದುವೆಗೆ ಆಯ್ಕೆ ಮಾಡಿಕೊಂಡಿದ್ದರು.

ಕರ್ನಾಟಕದ ಐಎಎಸ್‌ ಅಧಿಕಾರಿ

ಇದರೊಟ್ಟಿಗೆ ನಿರ್ಮಲಾ ಅವರ ಆಪ್ತಕಾರ್ಯದರ್ಶಿಯಾಗಿ ನೇಮಕಗೊಂಡಿರುವವರು ಕರ್ನಾಟಕದವರೇ ಆದ ಐಎಎಸ್‌ ಅಧಿಕಾರಿ ಎಸ್‌.ಎಸ್.ನಕುಲ್‌. ಕರ್ನಾಟಕ ಮೂಲದ ದಕ್ಷ ಅಧಿಕಾರಿಯನ್ನೇ ನಿರ್ಮಲಾ ನೇಮಿಸಿಕೊಂಡಿರುವುದು ವಿಶೇಷ.

Whats_app_banner