Union Budget 2025: ಜನರ ಚಿತ್ತ ಕೇಂದ್ರ ಬಜೆಟಿನತ್ತ, ಹೊಸ ತೆರಿಗೆ ಪದ್ಧತಿ, ಗೃಹ ಸಾಲ ಸೇರಿ ಗರಿಗೆದರಿದ ನಿರೀಕ್ಷೆಗಳು; ಜಯ ಕುಮಾರ ಶೆಟ್ಟಿ
Union Budget 2025 Expectations Highlights: ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸುವ 2025ರ ಕೇಂದ್ರ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳು ಏನೆಲ್ಲಾ ಇವೆ ಎಂಬುದರ ಕುರಿತು ಎಸ್ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಜಯ ಕುಮಾರ ಶೆಟ್ಟಿ ಅವರು ವಿವರಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಜನರ ನಿರೀಕ್ಷೆಗಳು ಗರಿಗೆದರಿವೆ. ಪ್ರತಿ ಬಾರಿ ಬಜೆಟ್ ಮಂಡನೆ ವೇಳೆ ಪ್ರತಿಯೊಬ್ಬರೂ ಕಾತರತೆಯಿಂದ ತಮಗೆ ಅನುಕೂಲಕರ ಬದಲಾವಣೆಯನ್ನು ತರುತ್ತದೆ ಎಂದೇ ಕಾಯುತ್ತಾರೆ. 2025ರ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ 8ನೇ ಬಜೆಟ್ ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಕೂಡ ಹೌದು. ಸಹಜವಾದ ನಿರೀಕ್ಷೆಗಳು, ಸವಾಲುಗಳ ಮಧ್ಯೆ ಪ್ರಗತಿ ಹಾಗೂ ಸದೃಢತೆಗೆ ಪೂರಕ ಬಜೆಟ್ ಮಂಡನೆಯ ಜಾಣ್ಮೆಯ ಅಗತ್ಯ ಭಾರತದ ಆರ್ಥಿಕತೆಯ ಮುಂದಿದೆ.
ಬೆಳವಣಿಗೆ ಮತ್ತು ಆರ್ಥಿಕ ಶಿಸ್ತು
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳವಣಿಗೆ ಮತ್ತು ಹಣಕಾಸಿನ ಶಿಸ್ತಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ಕಠಿಣ ಜವಾಬ್ದಾರಿ ಹೊಂದಿದ್ದಾರೆ. ಜಿಡಿಪಿ ಬೆಳವಣಿಗೆಯು ಹಲವಾರು ತ್ರೈಮಾಸಿಕಗಳಲ್ಲಿ ಅತ್ಯಂತ ಕಡಿಮೆ ಹಂತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಚೇತರಿಕೆಗೆ ಒತ್ತು ನೀಡುವ ನಿರೀಕ್ಷೆಯಿದೆ. ದುರ್ಬಲ ದೇಶೀಯ ಬೇಡಿಕೆ, ರೂಪಾಯಿಯ ಅಪಮೌಲ್ಯದ ಅಪಾಯಗಳು ಮತ್ತು ಟ್ರಂಪ್ 2.0 ಅಡಿಯಲ್ಲಿ ಹೆಚ್ಚಿನ ಸುಂಕಗಳ ಬೆದರಿಕೆ ಹಿನ್ನೆಲೆಯಲ್ಲಿ ಫೆಬ್ರವರಿ 1 ರಂದು ಬಜೆಟ್ ಅನ್ನು ಮಂಡಿಸಲಾಗುತ್ತದೆ. ತೆರಿಗೆ ಸುಧಾರಣೆಗಳು ಮತ್ತು ಬೆಳವಣಿಗೆಯ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಹಣ ದುಬ್ಬರವನ್ನು ಹದ್ದುಬಸ್ತಿನಲ್ಲಿಡುವುದರೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿ, ಖಾಸಗಿ ಬಳಕೆ, ಹೂಡಿಕೆ ಮತ್ತು ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವುದು ಅತೀ ಅಗತ್ಯ.
ಜನಸಾಮಾನ್ಯರ ಪ್ರಮುಖ ನಿರೀಕ್ಷೆಗಳು
ಬಳಕೆಯನ್ನು ಉತ್ತೇಜಿಸುವ, ಜಿಡಿಪಿ ಬೆಳವಣಿಗೆ ಪುನರುಜ್ಜೀವನಗೊಳಿಸುವ ಮತ್ತು ಜನಸಾಮಾನ್ಯರಿಗೆ ಹಾಗೂ ವೇತನದಾರರಿಗೆ ತೆರಿಗೆ ವಿನಾಯಿತಿ ನೀಡುವ ಬಜೆಟನ್ನು ಮಂಡಿಸುತ್ತಾರೆಯೇ ಎಂದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ಪ್ರಶ್ನೆ.
ಪ್ರತಿ ವರ್ಷ, ಮಧ್ಯಮ ವರ್ಗದವರು ತಮ್ಮ ಹೊರೆಯನ್ನು ತಗ್ಗಿಸಲು ತೆರಿಗೆ ಕಡಿತಕ್ಕಾಗಿ ವಿತ್ತ ಸಚಿವರ ಕಡೆಗೆ ನೋಡುತ್ತಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಆದಾಯ ತೆರಿಗೆ ಮಿತಿ ಹೆಚ್ಚಳ, ಗೃಹ ಸಾಲ, ಉಳಿತಾಯಕ್ಕೆ ಒಂದಷ್ಟು ಪ್ರೋತ್ಸಾಹಗಳ ನಿರೀಕ್ಷೆ ಹೊಂದಿದ್ದಾರೆ. ಈ ವರ್ಷ ಜನರು ತಮ್ಮ ಕೈಯಲ್ಲಿ ಹೆಚ್ಚಿನ ಹಣವನ್ನು ಹಾಕಲು ಮತ್ತಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತಾರೆ.
ಹೆಚ್ಚಿನ ಗ್ರಾಹಕ ಖರ್ಚು ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸುವಾಗ ವ್ಯಕ್ತಿಗಳ ಮೇಲೆ ವಿಶೇಷವಾಗಿ ಮಧ್ಯಮ ವರ್ಗದವರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಬಜೆಟ್ ಪರಿಷ್ಕೃತ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸುತ್ತದೆ ಎಂಬ ನಿರೀಕ್ಷೆಗಳು ಹೆಚ್ಚಿವೆ.
ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ಮಿತಿ ಅಳವಡಿಸಿಕೊಳ್ಳಬೇಕು. 15 ಲಕ್ಷವರೆಗಿನ ಆದಾಯಕ್ಕೆ ತೆರಿಗೆ ಮಿತಿಯನ್ನು ತಗ್ಗಿಸಬೇಕು. ಇದರಿಂದ ವೈಯಕ್ತಿಕ ಆದಾಯ ಹೆಚ್ಚಳವಾಗುವುದರಿಂದ ಮಾರುಕಟ್ಟೆಯಲ್ಲಿ ವಿನಿಯೋಗವೂ ಹೆಚ್ಚಲಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ ಮನೆ ಹೊಂದುವವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಹಳೇ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ಹೊಂದಿದವರಿಗೂ ಈ ಲಾಭ ಸಿಗುವಂತಿರಬೇಕು.
80ಸಿ ಸೆಕ್ಷನ್‌ನಲ್ಲಿ ಬದಲಾವಣೆ ಅಗತ್ಯ ಎಂದು ಮಧ್ಯಮ ವರ್ಗ ಬಯಸಿದೆ. ಸದ್ಯ ಇರುವ 1.5 ಲಕ್ಷ ಮಿತಿಯು 2014ರಿಂದ ಬದಲಾಗಿಲ್ಲ. ನಿಶ್ಚಿತ ಠೇವಣಿ, ಪಿಪಿಎಫ್ ಇತ್ಯಾದಿ ಹೂಡಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಅವಶ್ಯಕ.
ಉದ್ಯಮದ ನಿರೀಕ್ಷೆಗಳು
ದೇಶೀಯ ಉತ್ಪಾದನೆ ಉತ್ತೇಜಿಸಲು ಮತ್ತು ಭಾರತಕ್ಕೆ ಜಾಗತಿಕ ಮೌಲ್ಯ ಸರಪಳಿಗಳನ್ನು ಆಕರ್ಷಿಸಲು, ವಿತ್ತ ಸಚಿವರು ಭಾರತ ಉತ್ಪಾದನೆಗೆ ಕೇಂದ್ರವಾಗಿ ಬಳಸುವ ಸಂಸ್ಥೆಗಳಿಗೆ ರಿಯಾಯಿತಿ ಕಾರ್ಪೊರೇಟ್ ತೆರಿಗೆ ಯೋಜನೆಯನ್ನು ಘೋಷಿಸುವ ನಿರೀಕ್ಷೆಯಿದೆ. ದೇಶೀಯ ವ್ಯವಹಾರಗಳನ್ನು ರಕ್ಷಿಸಲು ಮತ್ತು ನ್ಯಾಯುತ ಸ್ಪರ್ಧೆಯನ್ನು ಉತ್ತೇಜಿಸಲು ರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಲಾಗಿದೆ.
ನಾವೀನ್ಯತೆ ಉತ್ತೇಜಿಸಲು, ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಗಳಿಗೆ ಸರ್ಕಾರವು ಹೊಸ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹವನ್ನು ಪರಿಚಯಿಸಬಹುದು. ಹೆಚ್ಚಿದ ವಹಿವಾಟು, ಉದ್ಯೋಗ ಸೃಷ್ಟಿ ಅಥವಾ ಬಂಡವಾಳ ಹೂಡಿಕೆಯಂತಹ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ನಿರ್ದಿಷ್ಟಪಡಿಸಿದ R&D ವೆಚ್ಚಗಳಿಗೆ ಹೆಚ್ಚುವರಿ ಕಡಿತಗಳನ್ನು ಇವು ಒಳಗೊಂಡಿರಬಹುದು.
ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ, ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ವಿನಾಯಿತಿಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ಆರ್ಥಿಕ ಬೆಂಬಲ ಮತ್ತು ಭಾರತೀಯ ಬ್ರಾಂಡ್‌ಗಳಿಗೆ ಸ್ಪರ್ಧಿಸಲು ಸಹಾಯ ಮಾಡಲು ವರ್ಧಿತ ರಫ್ತು ಪ್ರೋತ್ಸಾಹದಂತಹ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಕ್ರಮಗಳನ್ನು ಬಜೆಟ್ ಒಳಗೊಂಡಿರುತ್ತದೆ ಎಂದು ತಜ್ಞರು ಭಾವಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಯು ನಿರ್ಣಾಯಕ ಕ್ಷೇತ್ರವಾಗಿದ್ದು, ಇದಕ್ಕಾಗಿ ಗಮನಾರ್ಹ ಬಜೆಟ್ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ಹೆದ್ದಾರಿಗಳು, ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಸುಧಾರಿಸುವ ಮೂಲಕ ಸಂಪರ್ಕವನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಗಳ ವೇಗವರ್ಧನೆ ಮತ್ತು ಹಸಿರು ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು.
ನವೋದ್ಯಮಗಳು (Startups) ಮತ್ತು ಸೂಕ್ಷ್ಮ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳ (MSME) ಬೆಂಬಲಕ್ಕಾಗಿ ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸಲು ವ್ಯಾಪಾರಗಳು ಎದುರಿಸುತ್ತಿರುವ ಪ್ರಮುಖ ಕಾನೂನು ಮತ್ತು ಆರ್ಥಿಕ ಸವಾಲುಗಳನ್ನು ಬಜೆಟ್ ಪರಿಹರಿಸಬೇಕು. ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಕಾನೂನು ಮತ್ತು ಹಣಕಾಸು ನೀತಿಗಳನ್ನು ರೂಪಿಸುವ ಅಗತ್ಯತೆ ಇದೆ.
ಅಗತ್ಯ ಔಷಧಗಳು, ಉದ್ದೇಶಿತ ಚಿಕಿತ್ಸಾ ಔಷಧಗಳು, ರೊಬೊಟಿಕ್ಸ್ ಮತ್ತು ರೇಡಿಯೊಥೆರಪಿ ಯಂತ್ರಗಳಂತಹ ಸುಧಾರಿತ ಕ್ಯಾನ್ಸರ್ ಚಿಕಿತ್ಸಾ ಸಾಧನಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ ಮಾಡಲು ಬಜೆಟ್ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಜ್ಞರು ಭಾವಿಸುತ್ತಾರೆ.
ಗ್ರಾಮೀಣ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಟೆಲಿಮೆಡಿಸಿನ್ ಸೇವೆಗಳಿಗೆ ಹಣವನ್ನು ಹೆಚ್ಚಿಸಲು ಕ್ರಮಗಳು ಇರಬೇಕು. ಆಮದು ಅವಲಂಬನೆಯನ್ನು ಕಡಿಮೆ ಮಾಡಲು ದೇಶದೊಳಗೆ ಔಷಧೀಯ ಉತ್ಪಾದನೆ ಮತ್ತು ವೈದ್ಯಕೀಯ ಉಪಕರಣಗಳನ್ನು ಬೆಂಬಲಿಸುವ ನೀತಿಗಳಿಗೆ ಒತ್ತಾಸೆ ಇದೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಬಜೆಟ್‌ನಲ್ಲಿ ಉಪಕ್ರಮಗಳನ್ನು ಸೇರಿಸಲು ಸಲಹೆ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಲೇಜು-ಶಿಕ್ಷಿತ ಯುವಕರಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲು, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆಯಂತಹ ಭವಿಷ್ಯದ-ಕೇಂದ್ರಿತ ಕ್ಷೇತ್ರಗಳಲ್ಲಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸಿನ ಬೆಂಬಲದ ನಿರೀಕ್ಷೆಯಲ್ಲಿವೆ.
ಭಾರತದ ಆರ್ಥಿಕತೆ ಬೆಳೆದರೂ, ಕೃಷಿ ಕ್ಷೇತ್ರ ಸಾಕಷ್ಟು ಸ್ವಾವಲಂಬನೆ ಸಾಧಿಸಿದರೂ ರೈತರ ಬದುಕು ಮಾತ್ರ ಹಸನಾಗಿಲ್ಲ. ಸಾಕಷ್ಟು ಯೋಜನೆಗಳು ಸಕಾರಾತ್ಮಕ ಭಾವನೆ ಮೂಡಿಸಿದರೂ ಕೃಷಿ ಕ್ಷೇತ್ರದ ಮುಂದಿನ ಸಮಸ್ಯೆಗಳು ಹಾಗೂ ಸವಾಲುಗಳು ಅನೇಕ. ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ, ಸಣ್ಣ ರೈತರಿಗೆ ಉಚಿತ ಬೆಳೆ ವಿಮೆ, ಕೃಷಿ ಯಂತ್ರೋಪಕರಣ, ರಸಗೊಬ್ಬರಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಬೇಕು ಎಂಬುದು ಕೃಷಿ ಕ್ಷೇತ್ರದ ಬೇಡಿಕೆಗಳು.
ವಿತ್ತೀಯ ಕೊರತೆ
ವಿತ್ತೀಯ ಕೊರತೆಯು ಸರ್ಕಾರದ ಆರ್ಥಿಕ ಆರೋಗ್ಯದ ಪ್ರಮುಖ ಸೂಚಕವಾಗಿದೆ. 2026 ರ ವೇಳೆಗೆ ಶೇ 4.5 ಗುರಿ ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ 2025ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ 5.1ಕ್ಕೆ ಕಡಿಮೆ ಮಾಡಲು ಸರ್ಕಾರವು ಬದ್ಧವಾಗಿದೆ. ಈ ಪ್ರಯತ್ನಗಳು ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ವೆಚ್ಚದ ಮೂಲಕ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ನಡುವಿನ ಸೂಕ್ಷ್ಮ ಸಮತೋಲನವನ್ನು ಪ್ರತಿಬಿಂಬಿಸುತ್ತವೆ. ಆರ್ಥಿಕತೆಯ ಮಂದಗತಿಯಿಂದ ಉದ್ಭವಿಸಿರುವ ಸವಾಲುಗಳನ್ನು ಎದುರಿಸಲು ವ್ಯಾಪಾರ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಹೂಡಿಕೆಗಳನ್ನು ಪ್ರೋತ್ಸಾಹಿಸುವ ಸವಾಲು ಬಹು ಮುಖ್ಯವಾಗಿದೆ.
ಹೊಣೆಯರಿತ ಜಾಣ್ಮೆಯ ಹೆಜ್ಜೆಯಿರಲಿ
ನಿಧಾನಗತಿ ಆರ್ಥಿಕ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದ ಸವಾಲಿನ ನಡುವೆ ಸಕಾರಾತ್ಮಕ ದಿಕ್ಕಿನಲ್ಲಿ ಮನ್ನಡೆಸಲು ದಿಟ್ಟ ಕ್ರಮಗಳ ನಿರೀಕ್ಷೆಯಿದೆ. 2047ರ ಹೊತ್ತಿಗೆ 'ವಿಕಸಿತ್ ಭಾರತ್' ದೃಷ್ಟಿಗೆ ಅನುಗುಣವಾಗಿ ಈ ಬಜೆಟ್ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಒಟ್ಟಾರೆ ಬೆಳವಣಿಗೆ ಮತ್ತು ಹಣಕಾಸಿನ ಶಿಸ್ತಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಹೊಣೆಯರಿತ ಜಾಣ್ಮೆಯ ನಡೆಯ ನಿರೀಕ್ಷೆ ನಮ್ಮದು.
ಬರಹ: ಡಾ.ಎ.ಜಯ ಕುಮಾರ ಶೆಟ್ಟಿ ನಿವೃತ್ತ ಪ್ರಾಂಶುಪಾಲರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ.
