ಕೇಂದ್ರದಲ್ಲಿ ಪ್ರಮುಖ ಸಚಿವರಿದ್ದರೂ ಬಜೆಟ್‌ನಲ್ಲಿ ನ್ಯಾಯ ಸಿಕ್ಕಿಲ್ಲ, ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಖಾಲಿ ಚೊಂಬು: ಸಿದ್ದರಾಮಯ್ಯ ವಾಗ್ದಾಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರದಲ್ಲಿ ಪ್ರಮುಖ ಸಚಿವರಿದ್ದರೂ ಬಜೆಟ್‌ನಲ್ಲಿ ನ್ಯಾಯ ಸಿಕ್ಕಿಲ್ಲ, ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಖಾಲಿ ಚೊಂಬು: ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರದಲ್ಲಿ ಪ್ರಮುಖ ಸಚಿವರಿದ್ದರೂ ಬಜೆಟ್‌ನಲ್ಲಿ ನ್ಯಾಯ ಸಿಕ್ಕಿಲ್ಲ, ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಖಾಲಿ ಚೊಂಬು: ಸಿದ್ದರಾಮಯ್ಯ ವಾಗ್ದಾಳಿ

Union Budget 2025: ಕೇಂದ್ರ ಸರ್ಕಾರದ ಬಜೆಟ್‌ಗೆ ಕರ್ನಾಟಕದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಿಹಾರಕ್ಕೆ ಕೊಟ್ಟ ಪ್ರಾತಿನಿಧ್ಯದಲ್ಲಿ ಕರ್ನಾಟಕಕ್ಕೆ ಒಂದು ಭಾಗವನ್ನೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.

ಕೇಂದ್ರ ಬಜೆಟ್‌ ಕುರಿತು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಜೆಟ್‌ ಕುರಿತು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Union Budget 2025: ಕೇಂದ್ರದಲ್ಲಿ ಕರ್ನಾಟಕದವರೇ ಹಲವರು ಸಚಿವರಿದ್ದಾರೆ. ಹಿರಿಯರೂ ಇದ್ದಾರೆ. ಬಿಜೆಪಿಯಿಂದಲೇ ಹೆಚ್ಚಿನ ಸಂಸದರು ಗೆದ್ದಿದ್ದಾರೆ. ಹೀಗಿದ್ದರೂ ಕರ್ನಾಟಕದಲ್ಲಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನ್ಯಾಯವೇ ಸಿಕ್ಕಿಲ್ಲ. ನಮ್ಮ ರಾಜ್ಯದಿಂದಲೂ ಬಜೆಟ್‌ ಪೂರ್ವಭಾವಿ ಸಭೆಗಳಿಗೆ ಸಚಿವರು ಹೋಗಿದ್ದರು. ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಕೇಳಿದ್ದನ್ನು ಒಂದನ್ನೂ ಬಜೆಟ್‌ನಲ್ಲಿ ಸೇರಿಸಿಲ್ಲ. ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆಯೇ ವಿನಃ ದೇಶದಲ್ಲೇ ಅತಿಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ಮೋದಿ ಹಾಗೂ ನಿರ್ಮಲಾ ಸೀತಾರಾಮನ್‌ ಮತ್ತೊಮ್ಮೆ ಕರ್ನಾಟಕಕ್ಕೆ ಖಾಲಿ ಚೊಂಬನ್ನು ಕೊಟ್ಟಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್‌ ಕುರಿತು ನೇರಾನೇರ ವಾಗ್ದಾಳಿ ಮಾಡಿದ್ದು ಹೀಗೆ. ಮೈಸೂರು ಪ್ರವಾಸದಲ್ಲಿರುವ ಅವರು ತಮ್ಮ ನಿವಾಸದಲ್ಲಿಯೇ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

50 ಲಕ್ಷದ 65,345 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನ ಗಾತ್ರ ಕಡಿಮೆಯಾಗಿದೆ‌. ಕಳೆದ ಬಾರಿಯ ಬಜೆಟ್ ನಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಹಾಗಾಗಿ ಈ ಬಾರಿಯ ಬಜೆಟ್ ನ ಗಾತ್ರವೂ ಕಡಿಮೆಯಾಗಿದೆ.‌ ಬೆಳೆ ವಿಮೆ ಯೋಜನೆಯ ಹಣ ಕಡಿತ ‌ಮಾಡಲಾಗಿದೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾತ್ ಸಬ್ ವಿಕಾಸ್ ಎಂದು ಬಿಂಬಿಸಿದ್ದಾರೆ. ಆದರೆ ಮೇಕ್ ಇನ್ ಇಂಡಿಯಾಗೆ ಕೇವಲ 100 ಕೋಟಿ ಕೊಟ್ಟಿದ್ದಾರೆ. ಇದು ಬಾಯಿ ಮಾತಲ್ಲೇ ಹೊಟ್ಟೆ ತುಂಬಿಸುವ ಬಜೆಟ್ ಆಗಿದೆ. ಈ ಬಾರಿಯ ಕೇಂದ್ರ ಬಜೆಟ್ ಅತ್ಯಂತ ನಿರಾಶಾದಾಯಕ, ದೂರದೃಷ್ಟಿ ಇಲ್ಲದ ಬಜೆಟ್. ಎಂಬುದು ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ.

ಈ ಬಾರಿಯ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿಯಿಂದ ಅದರಲ್ಲೂ ಕರ್ನಾಟಕದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ. ಇದು ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್. ಬಜೆಟ್ ಪೂರ್ವಭಾವಿ ಸಭೆಗೆ ನಮ್ಮನ್ನು ಕರೆದಿದ್ದರು. ನಾವು ಸಚಿವ ಕೃಷ್ಣ ಭೈರೇಗೌಡರನ್ನು ಕಳುಹಿಸಿದ್ದೆವು. ನಾವು ಸಲ್ಲಿಸಿದ್ದ ಯಾವುದೇ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ‌. ಕರ್ನಾಟಕದ ಹಿತದೃಷ್ಟಿಯಿಂದ ವಿರುದ್ದವಾಗಿ ಇರುವ ಬಜೆಟ್.

ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೂ ಬಜೆಟ್ ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ರಾಜ್ಯದ ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 23-24ನೇ ಸಾಲಿನ ಬಜೆಟ್ ನಲ್ಲಿ 5,300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎನ್ನುವುದು ಸಿದ್ದರಾಮಯ್ಯ ಟೀಕೆ.

ರಾಜಸ್ಥಾನದ ನಂತರ ಹೆಚ್ಚು ಒಣಭೂಮಿ ಇರುವ ರಾಜ್ಯ ಕರ್ನಾಟಕ. ಆದರೂ ಕರ್ನಾಟಕದ ನೀರಾವರಿ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ. ಏಮ್ಸ್ ಬಗ್ಗೆ ಕೂಡ ಪ್ರಸ್ತಾಪವಿಲ್ಲ. ಕುಡಿಯುವ ನೀರಿನ ಯೋಜನೆಗಳಿಗೆ, ಗ್ರಾಮೀಣ ಪ್ರದೇಶಕ್ಕೆ, ರೈಲು ರಸ್ತೆ ಸಾರಿಗೆ ಅಭಿವೃದ್ಧಿಗೆ ಹಣ ಕೇಳಿದ್ದೆವು. ಆದರೂ ಕೊಟ್ಟಿಲ್ಲ‌. ಬಿಸಿನೆಸ್ ಕಾರಿಡಾರ್ ಗೂ ಅನುದಾನ ಕೊಟ್ಟಿಲ್ಲ. ವಸತಿ ಯೋಜನೆಯ ಅನುದಾನ ಹೆಚ್ಚಳ ಮಾಡಿಲ್ಲ. ರಾಜ್ಯಕ್ಕೆ ಕೊಟ್ಟಿರುವುದು ಖಾಲಿ ಚೊಂಬು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರಿಸಿದೆ ಎಂದು ಟೀಕಿಸಿದರು.

ಬಡವರಿಗೆ, ಕಾರ್ಮಿಕರಿಗೆ, ಯುವಕರಿಗೆ, ಮಹಿಳೆಯರಿಗೆ ಖರ್ಚು ಮಾಡುವ ಬದಲು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎಂ ಎಸ್ ಎಂ ಇ ತೆರಿಗೆ ಕಡಿತದ ಭರವಸೆ ನೀಡಿದ್ದರು.ಆದರೆ ಈ ವಲಯಕ್ಕೆ ಕೊಡುವ ಅನುದಾನವನ್ನು ಕಡಿಮೆ ಮಾಡಿದ್ದಾರೆ. ಕೇಂದ್ರದಲ್ಲಿ ಕರ್ನಾಟಕದ ಹಲವು ಸಚಿವರಿದ್ದಾರೆ. ಬಜೆಟ್‌ ವಿಚಾರದಲ್ಲಿ ನಮ್ಮ ರಾಜ್ಯದ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿಲ್ಲ. ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ದೋಸ್ತಿಗಳಿಂದ ರಾಜ್ಯಕ್ಕೆ ಲಾಭವಾಗಿಲ್ಲ, ಅನ್ಯಾಯ ಆಗಿದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿರುವ ಬಗ್ಗೆಯೂ ಕೇಳಿಲ್ಲ. ರಾಜ್ಯದ ಸಂಸದರು, ಕೇಂದ್ರ ಸಚಿವರು ರಾಜ್ಯದ ಪರ ಧ್ವನಿ ಎತ್ತಿಲ್ಲ ಎಂದರೆ ಕೇಳೋರು ಯಾರು ಎಂದು ಪ್ರಶ್ನಿಸಿದರು.

Whats_app_banner